ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿ ಹಾಗೂ ವಿವಿಧ ಜಾತ್ಯಾತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಬೀದರ್ ಜಿಲ್ಲಾಧಿಕಾರಿ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಈ ಸಂಬಂಧ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯ ಪದಾಧಿಕಾರಿಗಳು ಮಂಗಳವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಿದರು.
ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, “ಎಸ್‌ಐಆರ್ ಪ್ರಕ್ರಿಯೆ ಜನವಿರೋಧಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಚುನಾವಣಾ ಆಯೋಗ ಸೂಚಿಸಿರುವ ಸೀಮಿತ ದಾಖಲೆಗಳನ್ನಷ್ಟೇ ಪರಿಗಣಿಸಲಾಗುತ್ತಿದ್ದು, ರೇಷನ್ ಕಾರ್ಡ್, ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಹಾಗೂ ಮತದಾರರ ಗುರುತಿನ ಚೀಟಿಯಂತಹ ಸಾಮಾನ್ಯ ದಾಖಲೆಗಳನ್ನು ಮಾನ್ಯಗೊಳಿಸದಿರುವುದು ಬಡವರು, ದಲಿತರು, ಹಿಂದುಳಿದವರು ಹಾಗೂ ಮಹಿಳೆಯರನ್ನು ಮತದಾನದ ಹಕ್ಕಿನಿಂದ ವಂಚಿಸುವ ಸಾಧ್ಯತೆ ಹೆಚ್ಚಿಸುತ್ತದೆ” ಎಂದು ಆರೋಪಿಸಿದರು.
“ಕೇಂದ್ರ ಸರ್ಕಾರ 2014ರಿಂದ ನೋಟು ಅಮಾನ್ಯೀಕರಣ, ರೈತರ ಕಾನೂನು, ಜಿಎಸ್‌ಟಿ, ನೀಟ್, ಎನ್‌ಆರ್‌ಸಿ ಸೇರಿದಂತೆ ಹಲವು ಜನವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದು, ಇದೀಗ ಎಸ್‌ಐಆರ್ ಮೂಲಕವೂ ಬಡವರ ಹಕ್ಕುಗಳಿಗೆ ಧಕ್ಕೆ ತರುತ್ತಿದೆ. ಅವೈಜ್ಞಾನಿಕ ಪ್ರಕ್ರಿಯೆ ಎಸ್‌ಐಆರ್ ಅನ್ನು ತಕ್ಷಣ ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.

ಸಮಿತಿಯ ಓಂಪ್ರಕಾಶ ರೊಟ್ಟೆ ಮಾತನಾಡಿ, “ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿಯನ್ನು ಪ್ರಶ್ನಿಸುವ ಅಥವಾ ಅವರ ವಿರುದ್ಧ ದೂರು ಸಲ್ಲಿಸುವ ಅವಕಾಶಗಳನ್ನು ಕಾನೂನಿನ ಮೂಲಕ ಸೀಮಿತಗೊಳಿಸಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದೆ” ಎಂದು ಹೇಳಿದರು.
ಮುಖಂಡ ಅಬ್ದುಲ್ ಮನ್ನಾನ್ ಸೇಠ್ ಮಾತನಾಡಿ, “ಎಸ್‌ಐಆರ್ ಜಾರಿಯಿಂದ ಹೆಚ್ಚಿನ ಸಂಖ್ಯೆಯ ಬಡ ಜನರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯವಿದ್ದು, ಮುಂದೆ ಸರ್ಕಾರಿ ಸೌಲಭ್ಯಗಳಾದ ರೇಷನ್, ಮಾಸಾಶನ ಹಾಗೂ ವಸತಿ ಯೋಜನೆಗಳಿಂದಲೂ ಅವರು ವಂಚಿತರಾಗುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೀದರ್ | ರಾಡ್‌ನಿಂದ ಮಾರಣಾಂತಿಕ ಹಲ್ಲೆಗೈದು ಪತ್ನಿಯನ್ನು ಕೊಂದ ಪತಿ!
ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ನಿಜಾಮುದ್ದೀನ್, ಜಗದೀಶ್ವರ ಬಿರಾದಾರ, ಮಹೇಶ ಗೋರನಾಳಕರ, ಸಿದ್ದು ಫುಲಾರಿ, ಮಚ್ಚೆಂದರ ವಾಘಮಾರೆ, ಪ್ರಭು ಮುಧೋಳ, ರಾಜಕುಮಾರ ಪಾಟೀಲ ಬಾವಗಿ, ಸಂದೀಪ್ ಮುಕುಂದೆ, ಸುಧಾಮ ಹುಲಸೂರೆ, ಸಂತೋಷ ಜೋಳದಾಬಕೆ, ಯೋಹಾನ್, ಶಿವಕುಮಾರ ಶಿವಗೊಂಡ, ವೆಂಕಟೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




