ಸಂವಿಧಾನ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನ ಅಂಗೀಕಾರ ದಿನವಾದ ನವೆಂಬರ್ 26ರಂದು ಬೀದರ್ ನಗರದಲ್ಲಿ ಬೃಹತ್ ಜನಾಂದೋಲನ ಸಮಾವೇಶ ಆಯೋಜಿಸಲು ವಿವಿಧ ಸಂಘಟನೆಗಳ ಮುಖಂಡರು ನಿರ್ಧರಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನವೆಂಬರ್ 16ರಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿ ಸೇರಿದಂತೆ ವಿವಿಧ ಶೋಷಿತ ಸಮುದಾಯಗಳ ಸಂಘಟನೆಗಳು, ವಿಚಾರವಂತರು, ಹೋರಾಟಗಾರರು ಹಾಗೂ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಸಮಾಜಗಳ ಮುಖಂಡರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ನವೆಂಬರ್ 26ರಂದು ಸಂಜೆ 4 ಗಂಟೆಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಎದುರುಗಡೆ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದ ಎದುರು ಜನಾಂದೋಲನ ಸಮಾವೇಶದ ಕರಪತ್ರ ಬಿಡುಗಡೆ ಮಾಡಲಾಯಿತು.
ಜಿಲ್ಲೆಯ ಎಂಟು ತಾಲ್ಲೂಕುಗಳ ಸಮಿತಿ ಪದಾಧಿಕಾರಿಗಳು ಹಾಗೂ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಮಾವೇಶದ ಯಶಸ್ಸಿಗೆ ಅಗತ್ಯವಾದ ಸಲಹೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು. ಜಿಲ್ಲೆಯ ಎಲ್ಲ ಗ್ರಾಮಗಳಿಂದ ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು, ಸಂವಿಧಾನ ಪ್ರೇಮಿಗಳು, ಪ್ರಗತಿಪರರು, ಚಿಂತಕರು ಮತ್ತು ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ: ಲಕ್ಷ್ಮಣ ದಸ್ತಿ ಎಚ್ಚರಿಕೆ
ಸಭೆಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ಬೆಲ್ದಾರ, ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರು ಹಾಗೂ ಸಂಚಾಲಕರಾದ ರಮೇಶ್ ಡಾಕುಳಗಿ, ಬಾಬುರಾವ ಪಾಸ್ವಾನ, ಬಸವರಾಜ ಮಾಳಗೆ, ಶಿವಕುಮಾರ ನೀಲಿಕಟ್ಟಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಅಂಬಾದಾಸ ಗಾಯಕವಾಡ ಸೇರಿದಂತೆ ಪ್ರಮುಖರಾದ ಸಂದೀಪ ಕಾಂಟೆ, ಮಾರುತಿ ಕಂಟಿ, ಅವಿನಾಶ ದಿನೆ, ಸಾಯಿ ಸಿಂಧೆ, ಸುನೀಲ ಸಂಗಮ, ಪ್ರದೀಪ ನಾಟೆಕರ, ಲಕ್ಷ್ಮೀಪುತ್ರ ಮಾಳಗೆ, ಜನಾರ್ಧನ ದೀನೆ, ಧನರಾಜ ಮುಸ್ತಾಪೂರೆ, ರಘುನಾಥ ಗಾಯಕವಾಡ, ಭಗತ ಸಿಂಧೆ, ನಾಗಸೇನ ಗಾಯಕವಾಡ, ರಮೇಶ ಪಾಸ್ವಾನ್, ರಾಜಕುಮಾರ ಜ್ಯೋತಿ, ಸುಭಾಷ ಲಾಧಾ, ಜೀವನ ಬುಡ್ತಾ, ತಾನಾಜಿ ಸಗರ, ರಾಜಕುಮಾರ ಟಿಳೇಕರ, ಸುಭಾಷ ಚೌದ್ರಿ, ಪಿಂಟು ಕಾಂಬ್ಳೆ, ದತ್ತಾತ್ರೇಯ ದತ್ತೂರಿ, ವಿನೋದ ಸಿಂಧೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




