ಮಾಜಿ ಸಚಿವ, ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಅವರಿಗೆ ನೂತನ ಸಿಎಂ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಹೀಂ ಖಾನ್ ಅವರ ಬೆಂಬಲಿಗರು ನಗರದ ಶಿವನಗರದಲ್ಲಿರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕೈಯಲ್ಲಿ ರಹೀಂ ಖಾನ್ ಅವರ ಭಾವಚಿತ್ರದ ಫಲಕ ಹಿಡಿದು ‘ಬೀದರ್ ಜನತೆಗೆ ನ್ಯಾಯ ಸಿಗಲಿ’, ‘ಹಿರಿತನಕ್ಕೆ ಗೌರವ ಕೊಡಿ-ರಹೀಂಖಾನ್ ಅವರಿಗೆ ಸಚಿವ ಸ್ಥಾನ ಕೊಡಿ’, ‘ಬೀದರ್ ಜಿಲ್ಲೆಯನ್ನು ಕಡೆಗಣಿಸಬೇಡಿ’, ‘ನಮಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಬೇಕೇ ಬೇಕು’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಪಕ್ಷದ ಮುಖಂಡರು ಮಾತನಾಡಿ, “ರಹೀಂ ಖಾನ್ ಅವರು ಕಲ್ಯಾಣ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ಸಮುದಾಯದ ಹಿರಿಯ ನೇತಾರರಾಗಿದ್ದಾರೆ. ನಾಲ್ಕನೇ ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಎರಡು ಸಲ ಸಚಿವರಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಬೀದರ್ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಹಿತ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ರಹೀಂಖಾನ್ ಅವರ ಸೇವೆ ಅವಶ್ಯಕವಾಗಿದೆ” ಎಂದರು.
ಜನ ಸೇವೆ, ಪಕ್ಷದ ಸಂಘಟನೆ ಬಲವರ್ಧನೆಗೆ ವಹಿಸಿದ ಶ್ರಮ ಹಾಗೂ ಹಿರಿತನವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಪ್ರತ್ಯೇಕ ದಾಳಿ : ₹14.50 ಲಕ್ಷ ಮೌಲ್ಯದ 25 ಕೆ.ಜಿ. ಗಾಂಜಾ ಜಪ್ತಿ, ಮೂವರ ಬಂಧನ
ಮುಖಂಡರಾದ ಬಸವರಾಜ ಬುಯ್ಯಾ, ಕಾಮಶೆಟ್ಟಿ ಘೋಡಂಪಳ್ಳಿ, ಜಾರ್ಜ್ ಫರ್ನಾಂಡೀಸ್, ಡಾ. ಹುಲೆಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಜು, ಅಲಿಯಂಬರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಿತೇಶ್ ಭೈರನಳ್ಳೆ, ಧನರಾಜ ಚಾಂಬೋಳೆ, ವೈಜಿನಾಥ ಇಸ್ಲಾಂಪುರ, ಶಿವರಾಜ ಅಲಿಯಂಬರ್, ಯೇಶಪ್ಪ ಮಮದಾಪುರ, ತಾಜೊದ್ದೀನ್ ಯರನಳ್ಳಿ, ನೀಲಕಂಠ ದೇಸಾಯಿ ಯರನಳ್ಳಿ, ಸಂಜು ಚಿಮಕೋಡ್, ಸೂರ್ಯಕಾಂತ ಪಾಟೀಲ ಚಿಮಕೋಡ್, ಯೋಗೇಶ್ ಶ್ರಿಗೆರಿ ನೌಬಾದ್, ಪಂಡಿತ ವಿಳಾಸಪುರ, ಅರ್ಜುನ ನಂದಗಾಂವ್, ಮಂಜು ಸೋಲಪುರ, ಶಿವರಾಯ ಗೊಂಡ ಅಲಿಯಂಬರ್, ಪರಮೇಶ ಬಂಪಳ್ಳಿ, ವಿಜಯಕುಮಾರ ವಿಳಾಸಪುರ, ಮುಹಮ್ಮದ್ ಚಿಲ್ಲರ್ಗಿ, ಸಲಾವುದ್ದೀನ್ ಎಂಜಿನಿಯರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೀದರ್ ಕ್ಷೇತ್ರದ ರಹೀಂಖಾನ್ ಅವರ ಬೆಂಬಲಿಗರು ಭಾಗವಹಿಸಿದ್ದರು.





