ಬೀದರ್ ನಗರದ ಗಾಂಧಿ ಗಂಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸಾಗಾಟ ಹಾಗೂ ಮಾರಾಟ ನಡೆಸುತ್ತಿದ್ದವರ ಮೇಲೆ ಪ್ರತ್ಯೇಕ ದಾಳಿ ನಡೆಸಿದ ಪೊಲೀಸರು ಒಟ್ಟು ₹14.50 ಲಕ್ಷ ಮೌಲ್ಯದ 25 ಕೆ.ಜಿ. ಗಾಂಜಾ ಜಪ್ತಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜೂ.10ರಂದು ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ ಹಾಗೂ ಡಿವೈಎಸ್ಪಿ ದೂದ್ ಪೀರ್ ಹುಸೇನಸಾಬ್ ಮುಲ್ಲಾ ಅವರ ಮಾರ್ಗದರ್ಶನದಲ್ಲಿ ಗಾಂಧಿಗಂಜ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆನಂದರಾವ್ ಎಸ್.ಎನ್. ನೇತೃತ್ವದ ತಂಡ ಎರಡು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿತು.
ನಗರದ ಇರಾನಿ ಗಲ್ಲಿಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿ, ಬಂಧಿತರಿಂದ ₹8 ಲಕ್ಷ ಮೌಲ್ಯದ 16 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಅದೇ ದಿನ ಮಧ್ಯಾಹ್ನ ಇರಾನಿ ಗಲ್ಲಿಯಲ್ಲಿ ಓರ್ವ ಮಹಿಳೆ, ಪುರುಷ ಇಬ್ಬರು ಅಕ್ರಮವಾಗಿ ಮಾರಾಟಕ್ಕೆ ಸಾಗಾಟ ಮಾಡುವ ವೇಳೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಅವರಿಂದ ₹4.50 ಲಕ್ಷ ಮೌಲ್ಯದ 9 ಕೆ.ಜಿ. ಗಾಂಜಾ ಹಾಗೂ ಸಾಗಾಟಕ್ಕೆ ಬಳಸಲಾಗುತ್ತಿದ್ದ 1 ಆಟೋ ರಿಕ್ಷಾ ವಶಪಡಿಸಿಕೊಂಡಿದ್ದಾರೆ.
ಎರಡು ಪ್ರಕರಣಗಳಲ್ಲಿ ಒಟ್ಟು 25 ಕೆ.ಜಿ. ಗಾಂಜಾ, ₹12.50 ಲಕ್ಷ ಮೌಲ್ಯದ ಮಾದಕ ವಸ್ತು ಹಾಗೂ ₹2 ಲಕ್ಷ ಮೌಲ್ಯದ ವಾಹನ ಸೇರಿ ₹14.50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆ ನ್ಯೂಟೌನ್ ಠಾಣೆಯ ಪಿಐ ವಿಜಯಕುಮಾರ, ಮಾರ್ಕೆಟ್ ಠಾಣೆಯ ಸಿಪಿಐ ಫಾಲಕ್ಷಯ್ಯ ಹಿರೇಮಠ, ಡಿಎಸ್‌ಎ ಪಿಎಸ್‌ಐ ವಿಶ್ವರಾಧ್ಯ, ಸಬ್ ಅರ್ಬನ್ ಠಾಣೆಯ ಪಿಎಸ್‌ಐ ತಸ್ಲಿಮಾ ಸೇರಿದಂತೆ ಅಪರಾಧ ವಿಭಾಗದ ಸಿಬ್ಬಂದಿಗಳಾದ ನವೀನ್, ಅನೀಲ್, ಇರ್ಫಾನ್, ಗಂಗಾಧರ, ಸುಧಾಕರ, ರಾಜಕುಮಾರ, ಈರಾರೆಡ್ಡಿ, ಮೋಹನರಾಜ್, ಮಲ್ಲಿಕಾರ್ಜುನ, ಭರತ್, ಪ್ರೇಮ್, ನಿಂಗಪ್ಪಾ, ಸಂಜನಾ, ಸಂಜುಕುಮಾರ, ಮನೋಜಕುಮಾರ, ರಾಜಕಿರಣ, ದೀಪಕ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ಹೆಚ್ಚುವರಿ ದರಕ್ಕೆ ರಸಗೊಬ್ಬರ ಮಾರಾಟ: 1,539 ಬ್ಯಾಗ್‌ಗಳ ಜಪ್ತಿ ಮಾಡಿದ ಕೃಷಿ ಅಧಿಕಾರಿಗಳು
ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಯವರಿಗೆ ಅಭಿನಂದಿಸಿದ್ದಾರೆ.





