ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಕೆಂಪದೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನು ತೆರವುಗೊಳಿಸಲು ಹೋದ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳೀಯರು ವಾಗ್ವಾದ ನಡೆಸಿ,ಒತ್ತುವರಿದರರು ದರ್ಪ ತೋರಿರುವ ಘಟನೆ ನಡೆದಿದೆ.
ಕೆಂಪದೇನಹಳ್ಳಿಯ ಸರ್ವೆ ನಂಬರ್ 85 ರಲ್ಲಿ ಸುಮಾರು 50 ಎಕರೆ 10 ಗುಂಟೆ ಸರ್ಕಾರಿ ಬಂಜರು ಭೂಮಿಯಿದೆ.ಈ ಕಂದಾಯ ಭೂಮಿಯಲ್ಲಿ ಇತ್ತೀಚೆಗೆ ಕೆಲವು ಸ್ಥಳೀಯರು ನಿಯಮ ಬಾಹಿರವಾಗಿ ಮತ್ತು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು.
ಅಕ್ರಮ ನಿರ್ಮಾಣಗಳ ಬಗ್ಗೆ ಮಾಹಿತಿ ತಿಳಿದ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ,ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಆಗಮಿಸಿ ಜಮೀನನ್ನು ತೆರವುಗೊಳಿಸಲು ಮುಂದಾದರು.ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಅಕ್ರಮ ನಿವಾಸಿಗಳು ಮತ್ತು ಕೆಲವು ಸ್ಥಳೀಯರು ಅಧಿಕಾರಿಗಳ ಕಾರ್ಯಕ್ಕೆ ತೀವ್ರ ಅಡ್ಡಿಪಡಿಸಿದರು.
ಯಾವ ಕಾನೂನಿನ ಅಡಿಯಲ್ಲಿ ತೆರವು ಮಾಡುತ್ತಿದ್ದೀರಿ?ನಮಗೆ ಮುಂಚಿತವಾಗಿ ನೋಟಿಸ್ ನೀಡಿದ್ದೀರಾ?”ಎಂದು ಪ್ರಶ್ನಿಸುತ್ತಾ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ಬೆಳಗಾಗುವುದರೊಳಗೆ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಳ್ಳುವಾಗ ಕಾನೂನಿನ ಗೌರವ ಎಲ್ಲಿ ಹೋಗಿತ್ತು ಎಂದು ಅಧಿಕಾರಿಗಳು ಪ್ರಶ್ನಿಸಿದಾಗ,ಸ್ಥಳೀಯರು ಗುಂಪು ಕಟ್ಟಿಕೊಂಡು ಅಧಿಕಾರಿಗಳ ಮೇಲೆ ದರ್ಪ ತೋರಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಹರಸಾಹಸ ಪಡಬೇಕಾಯಿತು
ಸರ್ಕಾರಿ ಭೂಮಿಯನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಲು ಅಧಿಕಾರಿಗಳು ಕಾನೂನು ರೀತ್ಯಾ ಕ್ರಮ ಕೈಗೊಳ್ಳುತ್ತಿದ್ದರೆ,ಅದಕ್ಕೆ ಸ್ಥಳೀಯರು ಅಡ್ಡಿಪಡಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಇದೇ ವೇಳೆ ಸ್ಥಳೀಯ ನಿವಾಸಿ ಮುನಿಯಮ್ಮ ಎಂಬುವವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ,”ನಾವು ಕಳೆದ 30 ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದೇವೆ. ಇಲ್ಲೇ ಕೂಲಿ ಮಾಡಿಕೊಂಡು, ಮಕ್ಕಳನ್ನು ಸಾಕಿ ಮದುವೆ ಮಾಡಿದ್ದೇವೆ.ನಮಗೆ ಸರ್ಕಾರದಿಂದಲೇ ಲಕ್ಷಾಂತರ ರೂಪಾಯಿಗಳ ಬಿಲ್ (ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ) ಕೂಡ ಬಂದಿದೆ.ಈಗ ದಿಢೀರ್ ಎಂದು ಮನೆ ಖಾಲಿ ಮಾಡಿ ಎಂದರೆ ನಾವು ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು?ನಮಗೆ ಬೇರೆಲ್ಲೂ ಜಾಗವಿಲ್ಲ,”ಎಂದು ಅಳಲು ತೋಡಿಕೊಂಡರು.
ಇದನ್ನು ಓದಿದ್ದೀರಾ..? ಅಗತ್ಯವಿರುವಷ್ಟು ರಸಗೊಬ್ಬರ ಪೂರೈಸಬೇಕು: ಸರ್ಕಾರಕ್ಕೆ ರೈತರ ಆಗ್ರಹ
ಸದ್ಯ ಸ್ಥಳೀಯರ ತೀವ್ರ ಪ್ರತಿರೋಧದಿಂದಾಗಿ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು,ಕಂದಾಯ ಇಲಾಖೆಯ ಮುಂದಿನ ನಡೆ ಏನೆಂಬುದನ್ನು ಕಾದು ನೋಡಬೇಕಿದೆ.





