ಬೀದರ್ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಸಲಹೆ ನೀಡಿದ್ದಾರೆ.
ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಬಿಸಿಲಿನ ತೀವ್ರತೆಯಿಂದ ನಿರ್ಜಲೀಕರಣ, ಬಿಸಿಲಘಾತ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಸಾಕಷ್ಟು ನೀರು ಕುಡಿಯಬೇಕು. ದಾಹವಾಗದಿದ್ದರೂ ಆಗಾಗ ನೀರು ಸೇವಿಸಬೇಕು. ಪ್ರಯಾಣದ ವೇಳೆ ಕುಡಿಯುವ ನೀರಿನ ಬಾಟಲಿ ಕಡ್ಡಾಯವಾಗಿ ಜೊತೆಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ದೇಹವನ್ನು ತಂಪಾಗಿರಿಸಿಕೊಳ್ಳಲು ಎಳೆನೀರು, ಮಜ್ಜಿಗೆ, ನಿಂಬೆಹಣ್ಣಿನ ಶರಬತ್ತು, ಬೆಲ್ಲದ ಪಾನಕ ಹಾಗೂ ರಾಗಿ ಅಂಬಲಿಯಂತಹ ನೈಸರ್ಗಿಕ ಪಾನೀಯಗಳನ್ನು ಸೇವಿಸಬೇಕು. ತೆಳುವಾದ, ಹಗುರವಾದ ಹಾಗೂ ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಅನಿವಾರ್ಯವಾಗಿ ಹೊರಗೆ ಹೋಗುವಾಗ ಛತ್ರಿ, ಟೋಪಿ ಅಥವಾ ಟವೆಲ್‌ನಿಂದ ತಲೆಯನ್ನು ಮುಚ್ಚಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಹಳೆಯ ಹಾಗೂ ಹಾಳಾದ ಆಹಾರ ಸೇವಿಸಬಾರದು. ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಸೇರಿದಂತೆ ನೀರಿನ ಅಂಶ ಹೆಚ್ಚಿರುವ ತಾಜಾ ಹಣ್ಣುಗಳು ಮತ್ತು ಲಘು ಆಹಾರಕ್ಕೆ ಆದ್ಯತೆ ನೀಡಬೇಕು. ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಶ್ರಮದಾಯಕ ಕೆಲಸ ಹಾಗೂ ಹೊರಾಂಗಣ ಕ್ರೀಡೆಗಳನ್ನು ತಪ್ಪಿಸಬೇಕು. ಖಾಲಿ ಹೊಟ್ಟೆಯಲ್ಲಿ ಹೊರಗೆ ಹೋಗಬಾರದು. ಅತಿಯಾದ ಕಾಫಿ, ಟೀ, ಮದ್ಯಪಾನ ಹಾಗೂ ಸಕ್ಕರೆಯುಕ್ತ ಕೃತಕ ಪಾನೀಯಗಳ ಸೇವನೆಯಿಂದ ದೂರವಿರಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಬಿಟ್ಟು ಹೋಗಬಾರದು ಎಂದು ಎಚ್ಚರಿಸಿದ್ದಾರೆ.
ತಲೆಸುತ್ತು, ಅತಿಯಾದ ಆಯಾಸ, ತಲೆನೋವು, ವಾಂತಿ, ತೀವ್ರ ಜ್ವರ ಅಥವಾ ಮೂರ್ಛೆ ತಪ್ಪುವ ಲಕ್ಷಣಗಳು ಕಂಡುಬಂದರೆ ಸಂಬಂಧಪಟ್ಟ ವ್ಯಕ್ತಿಯನ್ನು ತಕ್ಷಣ ನೆರಳಿನ ತಂಪಾದ ಸ್ಥಳಕ್ಕೆ ಕರೆದೊಯ್ಯಬೇಕು. ದೇಹವನ್ನು ತಂಪಾಗಿಸಲು ಒದ್ದೆ ಬಟ್ಟೆಯಿಂದ ಒರೆಸಬೇಕು. ವ್ಯಕ್ತಿ ಪ್ರಜ್ಞೆಯಲ್ಲಿದ್ದು ಸುರಕ್ಷಿತವಾಗಿ ನುಂಗಲು ಸಾಧ್ಯವಿದ್ದರೆ ನೀರು ಅಥವಾ ಒಆರ್‌ಎಸ್ ದ್ರಾವಣ ನೀಡಬಹುದು. ಬಿಸಿಲಘಾತದ ಶಂಕೆ ಅಥವಾ ಗಂಭೀರ ಲಕ್ಷಣಗಳಿದ್ದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು ಎಂದು ತಿಳಿಸಿದ್ದಾರೆ.

ವೃದ್ಧರು, ಗರ್ಭಿಣಿಯರು, ಎಳೆಯ ಮಕ್ಕಳು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಬಿಸಿಲಿನಿಂದ ಹೆಚ್ಚಿನ ರಕ್ಷಣೆ ಪಡೆಯಬೇಕು. ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಬೀದಿಬದಿಯ ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಗಿತ್ತೆ ಮಾಧವ ವಿಠ್ಠಲರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಸೋಯಾಬೀನ್: ತಗ್ಗಿದ ಇಳುವರಿ, ಧಾರಣೆ ಏರಿಕೆ






