ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಸ್ವಾವಲಂಬನೆ ಸಾಧಿಸಬೇಕು. ಕುಸುಬೆ, ಶೇಂಗಾ ಮತ್ತು ಸೂರ್ಯಕಾಂತಿಯಂತಹ ಬೆಳೆಗಳನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಮೂಲಕ ಇತರ ಜಿಲ್ಲೆ ಹಾಗೂ ರಾಜ್ಯಗಳಿಗೂ ಪೂರೈಸಲು ರೈತರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸಲಹೆ ನೀಡಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಖಾದ್ಯತೈಲ ಅಭಿಯಾನ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಾಗಾರ ಮತ್ತು ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ವಸ್ತುಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಖಾದ್ಯತೈಲ ಅಭಿಯಾನದಡಿ ಎಣ್ಣೆಕಾಳು ಬೆಳೆಗಳ ಕ್ಷೇತ್ರ ವಿಸ್ತರಣೆ ಹಾಗೂ ಉತ್ಪಾದನೆ ಹೆಚ್ಚಳಕ್ಕೆ ಕೃಷಿ ಇಲಾಖೆ ಆದ್ಯತೆ ನೀಡುತ್ತಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಎಣ್ಣೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು.

ಬೀದರ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್.ಮಾತನಾಡಿ, “ಎಣ್ಣೆಕಾಳು ಕೃಷಿಗೆ ರೈತರು ಹೆಚ್ಚಿನ ಒಲವು ತೋರಿ, ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದಕತೆ ಹೆಚ್ಚಿಸಬೇಕು. ಆರೋಗ್ಯದ ದೃಷ್ಟಿಯಿಂದ ಶುದ್ಧ ಖಾದ್ಯತೈಲ ಬಳಕೆಯೂ ಮುಖ್ಯವಾಗಿದೆ. ಎಣ್ಣೆಕಾಳು ಬೆಳೆಗಳ ಉತ್ತೇಜನಕ್ಕಾಗಿ ಯೋಜನೆಯಡಿ ಕೋಯ್ಲೋತ್ತರ ಸಂಸ್ಕರಣಾ ಘಟಕಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಖರೀದಿಸಲು ರೈತರು, ಸರ್ಕಾರೇತರ ಸಂಸ್ಥೆಗಳು, ರೈತ ಉತ್ಪಾದಕ ಸಂಘಗಳು (ಎಫ್‌ಪಿಒ) ಹಾಗೂ ಸ್ವಸಹಾಯ ಗುಂಪುಗಳಿಗೆ ಯೋಜನಾ ವೆಚ್ಚದ ಶೇ.33ರಷ್ಟು ಅಥವಾ ಗರಿಷ್ಠ ₹9.90 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ” ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, “ಕೃಷಿ ಹಾಗೂ ಇತರೆ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ವಿವರಿಸಿ, ರೈತರು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು” ಎಂದರು.

ಔರಾದ್ (ಬಿ) ಸಹಾಯಕ ಕೃಷಿ ನಿರ್ದೇಶಕ ಮಾರ್ತಾಂಡ ಅವರು ಎಣ್ಣೆಕಾಳುಗಳ ಉತ್ಪಾದನೆ ಮತ್ತು ರೈತರ ಆದಾಯ ಹೆಚ್ಚಿಸುವಲ್ಲಿ ಆಧುನಿಕ ತಂತ್ರಜ್ಞಾನಗಳ ಪಾತ್ರದ ಕುರಿತು ಮಾಹಿತಿ ನೀಡಿದರು.
ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ.ಭವಾನಿ ಅವರು ಆರೋಗ್ಯದಲ್ಲಿ ಖಾದ್ಯತೈಲಗಳ ಮಹತ್ವ, ವಿಜ್ಞಾನಿ ಡಾ. ಆರ್.ಎಲ್. ಜಾಧವ ಅವರು ಎಣ್ಣೆಕಾಳು ಬೆಳೆಗಳ ಸುಧಾರಿತ ಬೇಸಾಯ ಕ್ರಮ, ಡಾ.ಸುನಿಲ್ ಎಂ.ಎನ್. ಅವರು ಕೀಟ ಮತ್ತು ರೋಗಗಳ ನಿರ್ವಹಣೆ ಹಾಗೂ ಡಾ. ಜ್ಞಾನದೇವ ಬುಳ್ಳ ಅವರು ಬೀಜೋತ್ಪಾದನೆ ಕುರಿತು ಮಾಹಿತಿ ನೀಡಿದರು.
ಜನವಾಡ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜಶೇಖರ ಬಸನಾಯಕ ಅವರು ನೈಸರ್ಗಿಕ ಕೃಷಿ ಮತ್ತು ಎಣ್ಣೆಕಾಳು ಬೆಳೆಗಳ ಕ್ಷೇತ್ರ ವಿಸ್ತರಣೆಯ ಕುರಿತು ವಿವರಿಸಿದರು. ಜಂಟಿ ತೋಟಗಾರಿಕೆ ನಿರ್ದೇಶಕರು ತಾಳೆಎಣ್ಣೆ ಅಭಿಯಾನ ಹಾಗೂ ಜೇನುಸಾಕಣೆಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ರೈತರು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕೃಷಿ ಸಖಿಯರು ಭಾಗವಹಿಸಿದ್ದರು. ಉಪ ಕೃಷಿ ನಿರ್ದೇಶಕ ಅನ್ಸಾರಿ ಎಂ.ಎ.ಕೆ. ಸೇರಿದಂತೆ ಅನೇಕರಿದ್ದರು.
ಇದನ್ನೂ ಓದಿ : ಬೀದರ್ | ಸೋಯಾಬೀನ್: ತಗ್ಗಿದ ಇಳುವರಿ, ಧಾರಣೆ ಏರಿಕೆ





