ತೀವ್ರ ಮಳೆ ಕೊರತೆಯಿಂದ ಸೋಯಾಬೀನ್ ಇಳುವರಿ ಕುಸಿತವಾಗಿದ್ದು, ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದೆ. ಪರಿಣಾಮವಾಗಿ ಸೋಯಾಬೀನ್ ಧಾರಣೆ ಏರುಮುಖವಾಗಿದ್ದು, ಕ್ವಿಂಟಲ್‌ಗೆ ₹7,479ರವರೆಗೆ ದರ ದೊರೆಯುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರುಕಟ್ಟೆಯಲ್ಲಿ ಸೋಯಾಬೀನ್‌ಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರಲ್ಲಿ ತುಸು ಸಮಾಧಾನ ಮೂಡಿದೆ. ಆದರೆ, ಇಳುವರಿ ಕುಸಿತದಿಂದ ನಿರೀಕ್ಷಿತ ಆದಾಯ ಕೈಗೆಟುಕದ ಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಕ್ವಿಂಟಲ್‌ಗೆ ₹5,708 ದರ ನಿಗದಿಪಡಿಸಲಾಗಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಇದಕ್ಕಿಂತ ಹೆಚ್ಚಿನ ಬೆಲೆ ದೊರೆಯುತ್ತಿರುವುದರಿಂದ ಜಿಲ್ಲೆಯಾದ್ಯಂತ ತೆರೆಯಲಾಗಿರುವ 75 ಸೋಯಾಬೀನ್ ಖರೀದಿ ಕೇಂದ್ರಗಳಲ್ಲಿ ನೋಂದಣಿಗೆ ರೈತರು ಆಸಕ್ತಿ ತೋರಿಸುತ್ತಿಲ್ಲ. ಖರೀದಿ ಪ್ರಕ್ರಿಯೆ ಆರಂಭವಾಗಿ 20 ದಿನ ಕಳೆದರೂ ಒಬ್ಬರೂ ನೋಂದಣಿ ಮಾಡಿಸಿಕೊಳ್ಳದಿರುವುದು ಗಮನಾರ್ಹವಾಗಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಸೋಯಾಬೀನ್ ಬೆಳೆಯುವ ಜಿಲ್ಲೆಗಳಲ್ಲಿ ಬೀದರ್ ಮುಂಚೂಣಿಯಲ್ಲಿದೆ. ಕಳೆದ ಒಂದು ದಶಕದಿಂದ ಸೋಯಾಬೀನ್ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 4.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆಯಿಂದ ಬಿತ್ತನೆ ಪ್ರಮಾಣ ಶೇ 6ರಷ್ಟು ಕುಸಿದು, 3.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಈ ಪೈಕಿ 2.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಬೆಳೆಯಲಾಗಿದೆ. ಮಳೆಯ ತೀವ್ರ ಅಭಾವದಿಂದ ಬೆಳೆಗಳು ಹಾನಿಗೀಡಾಗಿದ್ದು, ಇಳುವರಿ ಗಣನೀಯವಾಗಿ ಕುಸಿದಿದೆ. ಸಾಮಾನ್ಯವಾಗಿ ಎಕರೆಗೆ 10 ಕ್ವಿಂಟಾಲ್‌ವರೆಗೆ ಇಳುವರಿ ಪಡೆಯುತ್ತಿದ್ದ ರೈತರು, ಈ ಬಾರಿ ಅರ್ಧದಷ್ಟು ಬೆಳೆ ಬಂದರೂ ಸಾಕು ಎನ್ನುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಸೋಯಾಬೀನ್‌ಗೆ ಬಂಪರ್ ಬೆಲೆಯಿದ್ದರೂ, ಬರ ಹೊಡೆತ ಹಾಗೂ ಇಳುವರಿ ಕುಸಿತದಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ.
“ಬರ ಹೊಡೆತದಿಂದ ಸೋಯಾಬೀನ್ ಇಳುವರಿ ಪ್ರಮಾಣ ಕುಗ್ಗಿದೆ, ಇದರಿಂದ ಸಹಜವಾಗಿ ಧಾರಣೆ ಏರಿಕೆಯಾಗಿದೆ. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿಯೇ ಹೆಚ್ಚಿನ ದರ ಸಿಗುತ್ತಿರುವುದರಿಂದ ಖರೀದಿ ಕೇಂದ್ರದತ್ತ ರೈತರು ಹೋಗುತ್ತಿಲ್ಲ. ಮುಕ್ತ ಮಾರುಕಟ್ಟೆಗಿಂತ ಎಂಎಸ್‌ಪಿ ಬೆಲೆ ಕಡಿಮೆ ನಿಗದಿಯಾದರೆ ಅದರಿಂದ ಯಾವ ಉಪಯೋಗವಿಲ್ಲ. ಸರ್ಕಾರ ಕ್ವಿಂಟಾಲ್‌ಗೆ 10 ಸಾವಿರದಷ್ಟು ಬೆಂಬಲ ಬೆಲೆ ನಿಗದಿಪಡಿದರೆ ರೈತರಿಗೆ ಅನುಕೂಲ ಆಗುತ್ತದೆ” ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಂತೋಷ ಗುದುಗೆ ಹೇಳುತ್ತಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಬೆಳೆಯಲಾಗಿತ್ತು. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೂ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹3,500 ರಿಂದ ₹4,500ರ ಆಸುಪಾಸಿನಲ್ಲಿ ದರ ದೊರೆಯುತ್ತಿತ್ತು. ಆಗ ಸರ್ಕಾರ ನಿಗದಿಪಡಿಸಿದ್ದ ಬೆಂಬಲ ಬೆಲೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿದ್ದರಿಂದ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಆಸಕ್ತಿ ತೋರಿದ್ದರು. ಈ ಬಾರಿ ಅದು ತದ್ವಿರುದ್ಧವಾಗಿದೆ.
ಮಾರುಕಟ್ಟೆಯಲ್ಲಿ ಸೋಯಾಬೀನ್ ಕ್ವಿಂಟಲ್‌ಗೆ ₹6,000ರಿಂದ ಗರಿಷ್ಠ ₹7,479ರವರೆಗೆ ದರ ದೊರೆಯುತ್ತಿದೆ. ಹೀಗಾಗಿ ಸರ್ಕಾರದ ಬೆಂಬಲ ಬೆಲೆಗಿಂತ ಮುಕ್ತ ಮಾರುಕಟ್ಟೆಯಲ್ಲಿ ₹1500ಕ್ಕೂ ಅಧಿಕ ಹೆಚ್ಚುವರಿ ಹಣ ಸಿಗುತ್ತಿದೆ. ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂಬ ನಿರೀಕ್ಷೆಯೂ ಇರುವುದರಿಂದ ಅನೇಕ ರೈತರು ಸೋಯಾಬೀನ್ ರಾಶಿ ಮಾಡಿ ಮನೆಯಲ್ಲಿಯೇ ಸಂಗ್ರಹಿಸಿಟ್ಟಿದ್ದಾರೆ.

75 ಖರೀದಿ ಕೇಂದ್ರಗಳು
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೋಯಾಬೀನ್ ಖರೀದಿಸಲು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಅಕ್ಟೋಬರ್ 1 ರಿಂದ ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 75 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಸರ್ಕಾರ ಕ್ವಿಂಟಲ್‌ಗೆ ₹5,708 ಬೆಂಬಲ ಬೆಲೆ ನಿಗದಿಪಡಿಸಿದ್ದು, ಪ್ರತಿ ಎಕರೆಗೆ ಐದು ಕ್ವಿಂಟಾಲ್‌ನಂತೆ ಒಬ್ಬ ರೈತರಿಂದ ಗರಿಷ್ಠ 25 ಕ್ವಿಂಟಾಲ್ ಖರೀದಿಸಲು ಅವಕಾಶ ನೀಡಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಸಿಗುತ್ತಿರುವುದರಿಂದ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ರೈತರು ಖರೀದಿ ಕೇಂದ್ರಗಳತ್ತ ಸುಳಿಯುತ್ತಿಲ್ಲ. ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದ ಬಳಿಕ ಹಣಕ್ಕಾಗಿ ಹಲವು ದಿನ ಕಾಯಬೇಕಾಗುತ್ತದೆ. ಅಲ್ಲದೆ, ಮಾರಾಟದ ಪ್ರಮಾಣಕ್ಕೂ ಮಿತಿ ಇದೆ. ಹೀಗಾಗಿ ತಕ್ಷಣವೇ ಉತ್ತಮ ಬೆಲೆ ದೊರೆಯುವ ಮುಕ್ತ ಮಾರುಕಟ್ಟೆಯತ್ತ ರೈತರು ಮುಖ ಮಾಡುತ್ತಿರುವುದು ವಾಸ್ತವ.
ದಿನಕ್ಕೆ 10 ಸಾವಿರ ಕ್ವಿಂಟಾಲ್ ಆವಕ
ಬೀದರ್ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಕ್ಟೋಬರ್ 12 ರಿಂದ 23 ರವರೆಗೆ ಪ್ರತಿದಿನ ಸರಾಸರಿ 10-13 ಸಾವಿರ ಕ್ವಿಂಟಾಲ್ ಸೋಯಾಬೀನ್ ಆವಕವಾಗಿದೆ. ಈ ವರ್ಷ ಗರಿಷ್ಠ ದರ ₹6,762ರಿಂದ ₹7,479ರವರೆಗೆ ಇದೆ. ಕಳೆದ ಐದಾರು ವರ್ಷಗಳಿಗೆ ಹೋಲಿಸಿದರೆ ಸೋಯಾಬೀನ್ ದರದಲ್ಲಿ ಏರಿಕೆ ಕಂಡಿದೆ ಎಂದು ಎಪಿಎಂಸಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೀದರ್ ಜಿಲ್ಲೆಯ ವಿವಿಧ ಭಾಗಗಳಲ್ಲದೆ ನೆರೆಯ ತೆಲಂಗಾಣ, ಮಹಾರಾಷ್ಟ್ರ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಆಳಂದ ತಾಲ್ಲೂಕುಗಳಿಂದಲೂ ಸೋಯಾಬೀನ್ ಮಾರುಕಟ್ಟೆಗೆ ಬರುತ್ತಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 15 ಸಾವಿರ ಕ್ವಿಂಟಾಲ್‌ನಷ್ಟು ಸೋಯಾಬೀನ್ ಆವಕವಾಗುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ನಿರೀಕ್ಷಿತ ಇಳುವರಿ ಬಂದಿಲ್ಲ. ಬೆಲೆ ಉತ್ತಮವಾಗಿದ್ದರೂ ಮಾರಾಟ ಮಾಡಲು ಸಾಕಷ್ಟು ಬೆಳೆ ಇಲ್ಲದಿರುವುದು ರೈತರ ಆರ್ಥಿಕ ಸಂಕಷ್ಟ ಹೆಚ್ಚಿಸಿದೆ.

1.73 ಲಕ್ಷ ಹೆಕ್ಟೇರ್ ಸೋಯಾಬೀನ್ ಹಾನಿ
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 2.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್, 90,199 ಹೆಕ್ಟೇರ್‌ನಲ್ಲಿ ತೊಗರಿ, 11,127 ಹೆಕ್ಟೇರ್‌ನಲ್ಲಿ ಹೆಸರು ಹಾಗೂ 8,921 ಹೆಕ್ಟೇರ್‌ನಲ್ಲಿ ಉದ್ದು ಬಿತ್ತನೆ ಮಾಡಲಾಗಿತ್ತು. ಮಳೆ ಕೊರತೆಯಿಂದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ.
ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿಯ ಪ್ರಕಾರ, ಸೋಯಾಬೀನ್ 1.73 ಲಕ್ಷ ಹೆಕ್ಟೇರ್, ಉದ್ದು 8,921 ಹೆಕ್ಟೇರ್, ತೊಗರಿ 90,199 ಹೆಕ್ಟೇರ್, ಹೆಸರು 11,127 ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆಗಳು 195 ಹೆಕ್ಟೇರ್ ಸೇರಿದಂತೆ ಒಟ್ಟು 2,83,932 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರ ಅಂದಾಜು ಮೌಲ್ಯ ₹234 ಕೋಟಿ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಬೀದರ್ | ಜಾತಿರಹಿತ, ಶೋಷಣೆರಹಿತ ಲಿಂಗಾಯತ ಧರ್ಮ : ಎಂ.ಬಿ.ಪಾಟೀಲ್
ಸೋಯಾಬೀನ್ ಬೆಲೆ ಏರಿಕೆ ರೈತರಿಗೆ ನಿರೀಕ್ಷಿತ ಮಟ್ಟದ ನೆಮ್ಮದಿ ನೀಡಿಲ್ಲ. ಇಳುವರಿ ಕುಸಿತದಿಂದ ಆದಾಯ ಕಡಿಮೆಯಾಗಿರುವುದರ ಜತೆಗೆ, ಸರ್ಕಾರದ ಬೆಂಬಲ ಬೆಲೆ ಮಾರುಕಟ್ಟೆ ದರಕ್ಕಿಂತ ಕಡಿಮೆಯಿರುವುದರಿಂದ ಖರೀದಿ ಕೇಂದ್ರಗಳು ರೈತರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ರೈತರಿಗೆ ಅನುಕೂಲವಾಗುವಂತೆ ಬೆಂಬಲ ಬೆಲೆಯನ್ನು ಮಾರುಕಟ್ಟೆ ಧಾರಣೆಗೆ ಅನುಗುಣವಾಗಿ ಪರಿಷ್ಕರಿಸಬೇಕೆಂಬುದು ರೈತ ಸಮೂಹದ ಹಕ್ಕೊತ್ತಾಯವಾಗಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




