ಮನೆಯ ಮುಂದೆ ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ, ಮನಬಂದಂತೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬೀದರ್ ನಗರದ ನಾವದಗೇರಿ ಬಡಾವಣೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ನಾವದಗೇರಿ ನಿವಾಸಿ ಅಂಬಾದಾಸ ಅವರ ಮಕ್ಕಳಾದ 6 ವರ್ಷದ ಶರತ್ ಹಾಗೂ 12 ವರ್ಷದ ಸಾಯಿನಾಥ್ ಗಂಭೀರವಾಗಿ ಗಾಯಗೊಂಡ ಸಹೋದರರು. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಬೀದಿ ನಾಯಿ ಇಬ್ಬರನ್ನೂ ಬೆನ್ನಟ್ಟಿ ಕಚ್ಚಿದೆ ಎನ್ನಲಾಗಿದೆ.
ನಾಯಿಯ ದಾಳಿಯಿಂದ ಶರತ್‌ನ ಮೂಗು, ಕಪಾಳ, ಕೈ ಹಾಗೂ ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. 6 ವರ್ಷದ ಬಾಲಕನ ಮೇಲೆ ನಡೆದ ದಾಳಿಯ ದೃಶ್ಯ ಆತಂಕ ಮೂಡಿಸುವಂತಿದೆ. ಸಾಯಿನಾಥ್‌ಗೂ ನಾಯಿ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಇಬ್ಬರು ಸಹೋದರರನ್ನು ತಕ್ಷಣ ಬೀದರ್‌ನ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಬೀದರ್ | ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ, ಅವುಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಗಾಯಾಳುಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.




