ಪೊಲೀಸ್ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್ ತಂತ್ರಜ್ಞಾನ, ಡಿಜಿಟಲ್ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್ ಆಗುತ್ತಿರುವ ಪೊಲೀಸ್ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ? ಠಾಣೆಯಲ್ಲಿ ದೂರು ದಾಖಲಿಸುವುದರಿಂದ ಹಿಡಿದು ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಸಾಮಾನ್ಯ ನಾಗರಿಕ ಎದುರಿಸುವ ಸಮಸ್ಯೆಗಳೇನು? ಸಿಬ್ಬಂದಿ ಕೊರತೆ, ಹೆಚ್ಚುತ್ತಿರುವ ಕೆಲಸದ ಹೊರೆ, ತರಬೇತಿಯ ಕೊರತೆ ನಡುವೆ ಜನಸಾಮಾನ್ಯರ ನಿರೀಕ್ಷೆಗಳೇನು? ಜನಕೇಂದ್ರಿತ ಪೊಲೀಸ್ ಸುಧಾರಣೆಯ ಸಾಧ್ಯವೇ?
ನಾವು ದುಡಿಯುವ ಜನ
ನಮ್ಮ ಅಧಿಕಾರ ಬಂದಾಗ:
ಪೊಲೀಸರನ್ನು, ನ್ಯಾಯಾಧೀಶರನ್ನು
ಮನುಷ್ಯರನ್ನಾಗಿ ಮಾಡುತ್ತೇವೆ.
ಟ್ಯಾಂಕುಗಳು ಬುಲ್‌ಡೋಜರ್ ಆಗುತ್ತವೆ
ತಗ್ಗು ದಿನ್ನೆಯ ನೆಲ ಸಮನಾಗುತ್ತದೆ.
ಬಂದೂಕಿನ ಬಾಯಲ್ಲಿ
ಗುಬ್ಬಿ ಗೂಡು ಕಟ್ಟುತ್ತದೆ…
ಇವು ಖ್ಯಾತ ಪ್ರಗತಿಪರ ಬರಹಗಾರ ರಂಜಾನ್ ದರ್ಗಾ ಅವರ ʼಪ್ರಣಾಳಿಕೆʼ ಕವಿತೆಯ ಕೆಲ ಸಾಲುಗಳು. ಈ ಅದ್ಭುತ ಸಾಲುಗಳು ನಮ್ಮ ಪೊಲೀಸ್ ಸುಧಾರಣೆಗಳು ಮತ್ತು ವ್ಯವಸ್ಥೆಯ ಬದಲಾವಣೆಯ ಆಶಯಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತವೆ. ದಶಕಗಳಿಂದ ಚರ್ಚೆಯಲ್ಲಿರುವ ಪೊಲೀಸ್ ಸುಧಾರಣೆಗಳ ಕುರಿತು ಮಾತನಾಡುವಾಗ ನೀತಿಗಳ ಘೋಷಣೆಯಿಂದಾಗಲೀ, ನಾಮಕಾವಸ್ಥೆಯ ಕಾಯ್ದೆಗಳಿಂದಾಗಲೀ ನೆಲಮಟ್ಟದ ವ್ಯವಸ್ಥೆ ಬದಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಬ್ರಿಟಿಷರ ಕಾಲದಲ್ಲಿ ಭಾರತೀಯರನ್ನು ದಮನ ಮಾಡಲು ರೂಪಿಸಲಾಗಿದ್ದ ವಸಾಹತುಶಾಹಿ ಆಡಳಿತ ಶೈಲಿಯ ನೆರಳು ಇಂದಿಗೂ ಪೊಲೀಸ್ ಠಾಣೆಗಳ ಆವರಣದಲ್ಲಿ ಜೀವಂತವಾಗಿದೆ. ಸಾಮಾನ್ಯ ನಾಗರಿಕನೋರ್ವ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾದರೆ ಇಂದಿಗೂ ಆತಂಕ ಮತ್ತು ಅಸುರಕ್ಷತೆಯ ಭಾವನೆಯನ್ನು ಎದುರಿಸಬೇಕಾದ ಪರಿಸ್ಥಿತಿಯಿದೆ. “ದೂರು ನೀಡಲು ಹೋದರೆ ನಮಗೆ ನ್ಯಾಯ ಸಿಗುತ್ತದೋ ಅಥವಾ ನಾವೇ ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತೇವೋ?” ಎಂಬ ಈ ಆತಂಕವೇ ವ್ಯವಸ್ಥೆ ಮತ್ತು ಪ್ರಜೆಗಳ ನಡುವಿನ ಅಂತರಕ್ಕೆ ಅತಿ ದೊಡ್ಡ ಉದಾಹರಣೆಯಾಗಿದೆ.
ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ (BPR&D) ಹಾಗೂ ಸ್ಟೇಟಸ್ ಆಫ್ ಪೊಲೀಸಿಂಗ್ ಇನ್ ಇಂಡಿಯಾ ವರದಿಗಳ ಪ್ರಕಾರ, ದೇಶದ ಒಟ್ಟು ಪೊಲೀಸ್ ಸಿಬ್ಬಂದಿಯಲ್ಲಿ ಬಹುಪಾಲು ಕೆಳಹಂತದ ಸಿಬ್ಬಂದಿ ಪ್ರತಿದಿನ ಸರಾಸರಿ 12 ರಿಂದ 14 ಗಂಟೆಗಳಿಗೂ ಅಧಿಕ ಕಾಲ ಯಾವುದೇ ನಿಗದಿತ ರಜೆಗಳಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ ಕೇವಲ ಒಟ್ಟು ಸಿಬ್ಬಂದಿಯ ಸಂಖ್ಯೆಯನ್ನು ಲೆಕ್ಕಹಾಕುವುದಕ್ಕಿಂತ ನಿರ್ದಿಷ್ಟ ಕರ್ತವ್ಯಗಳಿಗೆ ಎಷ್ಟು ಮಾನವ ಸಂಪನ್ಮೂಲ ಅಗತ್ಯವಿದೆ? ಎಂಬ ವೈಜ್ಞಾನಿಕ ವಿಶ್ಲೇಷಣೆಯ (Workload Assessment) ಕೊರತೆ ಇಂದಿಗೂ ಕಾಡುತ್ತಿದೆ. ರಾಜ್ಯದ ಬಹುತೇಕ ಠಾಣೆಗಳಲ್ಲಿ ಸಿಬ್ಬಂದಿಯ ತೀವ್ರ ಕೊರತೆಯಿರುವುದರಿಂದ, ಒಂದೇ ತನಿಖಾ ತಂಡ ಅಪರಾಧ ತನಿಖೆ, ಕಾನೂನು-ಸುವ್ಯವಸ್ಥೆ ನಿರ್ವಹಣೆ, ವಿಐಪಿ ಬಂದೋಬಸ್ತ್ ಮತ್ತು ಸೈಬರ್ ಪ್ರಕರಣಗಳ ನಿರ್ವಹಣೆ ಹೀಗೆ ಬಹುಮುಖಿ ಒತ್ತಡಗಳನ್ನು ಏಕಕಾಲದಲ್ಲಿ ಎದುರಿಸಬೇಕಾಗಿ ಬರುತ್ತದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ವರದಿಗಳು ಪ್ರತಿವರ್ಷ ಸಾವಿರಾರು ಪ್ರಕರಣಗಳ ತನಿಖೆ ವಿಳಂಬವಾಗುತ್ತಿರುವುದಕ್ಕೆ ಸಿಬ್ಬಂದಿಯ ಕೊರತೆಯೇ ಪ್ರಮುಖ ಕಾರಣ ಎಂದು ಎಚ್ಚರಿಸುತ್ತಿದ್ದರೂ, ಮಂಜೂರಾದ ಹುದ್ದೆಗಳ (Sanctioned Strength) ಸಮಗ್ರ ಮರುಪರಿಶೀಲನೆ ಮತ್ತು ದೋಷರಹಿತ ಕೇಡರ್ ರಚನೆ (Cadre Structure) ಆಡಳಿತ ಮಟ್ಟದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ
ಸುಧಾರಣೆಯ ಅಂತಿಮ ಫಲಿತಾಂಶ ಸಾಮಾನ್ಯ ನಾಗರಿಕನಿಗೆ ಪೊಲೀಸ್ ಸೇವೆ ಎಷ್ಟು ಸರಳವಾಗಿ ಮತ್ತು ಕಾಲಮಿತಿಯೊಳಗೆ ಲಭ್ಯವಾಯಿತು ಎಂಬುದರ ಮೇಲೆ ನಿರ್ಧಾರವಾಗಬೇಕು. ಬೀಟ್ ಪೊಲೀಸಿಂಗ್, ಸಮುದಾಯ ಆಧಾರಿತ ಪೊಲೀಸಿಂಗ್ (Community Policing) ಮತ್ತು ಸಿಟಿಜನ್ ಚಾರ್ಟರ್ ವ್ಯವಸ್ಥೆಯನ್ನು ಪೊಲೀಸ್ ಮತ್ತು ಜನರ ನಡುವಿನ ಪರಸ್ಪರ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಾನ್ವಯಗೊಳಿಸಬೇಕಿದೆ.
ಠಾಣೆಗೆ ಬರುವ ಪ್ರತಿ ದೂರು ಅಥವಾ ಅರ್ಜಿಗೂ ಒಂದು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಬೇಕು. FIR ದಾಖಲಿಸುವುದು, ಪಾಸ್‌ಪೋರ್ಟ್ ಅಥವಾ ವಿಳಾಸ ದೃಢೀಕರಣದ ಪರಿಶೀಲನೆ, ಕಳೆದುಹೋದ ವಸ್ತುಗಳ (Missing/Lost Report) ವರದಿ ನೀಡುವುದು ಮತ್ತು ಸೈಬರ್ ವಂಚನೆಗಳ ದೂರುಗಳಿಗೆ ಕಡ್ಡಾಯವಾಗಿ ಗರಿಷ್ಠ ಸಮಯದ ಮಿತಿಯನ್ನು (Time Frame) ವಿಧಿಸಬೇಕು. ಈ ಕಾಲಮಿತಿಯನ್ನು ಉಲ್ಲಂಘಿಸುವ ಸಿಬ್ಬಂದಿಯ ಜವಾಬ್ದಾರಿಯನ್ನು ಪ್ರಶ್ನಿಸುವ ಸ್ವತಂತ್ರ ಮೇಲ್ವಿಚಾರಣಾ ವ್ಯವಸ್ಥೆ ಪ್ರತಿ ಕಮಿಷನರೇಟ್ ಮತ್ತು ಜಿಲ್ಲಾ ಮಟ್ಟದಲ್ಲಿ ಸಕ್ರಿಯವಾಗಿರಬೇಕು.
ಇದನ್ನೂ ಓದಿ: ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ? – ಭಾಗ 1
ಪ್ರತಿ ಬೀಟ್ ಕಾನ್‌ಸ್ಟೆಬಲ್ ತನ್ನ ವ್ಯಾಪ್ತಿಯ ಹಿರಿಯ ನಾಗರಿಕರು, ಯುವಕರು ಮತ್ತು ಸ್ಥಳೀಯ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಬೇಕು. ಬ್ರಿಟಿಷ್ ಕಾಲದ ದಂಡಿಸುವ ಮನಸ್ಥಿತಿಯನ್ನು ಬದಲಿಸಿ, ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿಯನ್ನು ಬೀಟ್ ಸಿಬ್ಬಂದಿಗೆ ವಹಿಸಬೇಕು. ಅಪರಾಧ ತಡೆಗಟ್ಟುವಿಕೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಪಡೆಯಲು ಠಾಣೆ ಮಟ್ಟದಲ್ಲಿ ಸಾರ್ವಜನಿಕ-ಪೊಲೀಸ್ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು.
ಠಾಣೆಗೆ ಬರುವ ಪ್ರತಿಯೊಬ್ಬ ನಾಗರಿಕನಿಗೆ ಮೊದಲು ಸಿಗಬೇಕಾಗಿರುವುದು ಭದ್ರತೆಯ ಭಾವನೆ. ದೂರು ಸ್ವೀಕರಿಸುವ ಹಂತದಲ್ಲೇ ಸಾರ್ವಜನಿಕರನ್ನು ಸೌಜನ್ಯದಿಂದ ನಡೆಸಿಕೊಳ್ಳುವ ಹಾಗೂ ಯಾವುದೇ ಮುಜುಗರ ಅಥವಾ ಒತ್ತಡವಿಲ್ಲದೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಮುಕ್ತ ವಾತಾವರಣವನ್ನು ಠಾಣೆಗಳಲ್ಲಿ ಸೃಷ್ಟಿಸಬೇಕು. ಇದಕ್ಕಾಗಿ ಸಿಬ್ಬಂದಿಗೆ ವಾರ್ಷಿಕವಾಗಿ ಮಾನಸಿಕ ಆರೋಗ್ಯ (Mental Health Counselling) ಮತ್ತು ಸಂವಹನ ಕೌಶಲ್ಯದ ತರಬೇತಿಗಳನ್ನು ಕಡ್ಡಾಯಗೊಳಿಸಬೇಕು.
ಪೊಲೀಸ್ ಇಲಾಖೆಗೂ ಜನಸಾಮಾನ್ಯರಿಗೂ ಇರುವ ಅಂತರವನ್ನು ಕಡಿಮೆ ಮಾಡಲು ತಂತ್ರಜ್ಞಾನವನ್ನು ಸಾರ್ವಜನಿಕರ ಪರವಾಗಿ ಬಳಸಿಕೊಳ್ಳಬೇಕು. ತುರ್ತು ಸಂಖ್ಯೆ 112 ಅಥವಾ ಡಿಜಿಟಲ್ ಪೋರ್ಟಲ್‌ಗಳ ಮೂಲಕ ದಾಖಲಾಗುವ ದೂರುಗಳ ಸ್ಥಿತಿಗತಿಯನ್ನು (Status Tracking) ದೂರುದಾರರಿಗೆ ನಿರಂತರವಾಗಿ ಎಸ್.ಎಂ.ಎಸ್ ಅಥವಾ ಆ್ಯಪ್ ಮೂಲಕ ತಿಳಿಸುವ ಪಾರದರ್ಶಕ ವ್ಯವಸ್ಥೆ ಬಲಗೊಳ್ಳಬೇಕು. ದೂರು ತಿರಸ್ಕರಿಸಲ್ಪಟ್ಟರೆ ಅಥವಾ ವಿಳಂಬವಾದರೆ ಅದಕ್ಕೆ ಸ್ಪಷ್ಟ ಕಾರಣವನ್ನು ಲಿಖಿತವಾಗಿ ನೀಡುವ ನಿಯಮ ಕಠಿಣವಾಗಿ ಜಾರಿಗೆ ಬರಬೇಕು.
ಪೊಲೀಸ್ ವ್ಯವಸ್ಥೆಯಲ್ಲಿ ಬರಲೇಬೇಕಾದ ಬದಲಾವಣೆಗಳನ್ನ ಸರ್ಕಾರಿ ಶಿಕ್ಷಕರೊಬ್ಬರು ವಿವರಿಸುವುದು ಹೀಗೆ.. “ನಾವು ಚಿಕ್ಕವರಿದ್ದಾಗ ಪೊಲೀಸೋರು ಅಂದ್ರೆನೆ ಎದೆಬಡಿತ ಜೋರಾಗೋದು. ಇನ್ನು ಸ್ಟೇಷನ್ನಿಗೆ ಹೋಗಬೇಕಾಗಿ ಬರೋದಂತೂ ಹೈಟೆನ್ಷನ್ ಕೆಲಸ. ಇಷ್ಟು ವಿದ್ಯಾವಂತರಾಗಿ ಸರ್ಕಾರಿ ನೌಕರರಾದ ಮೇಲೆಯೂ ಆ ಭಾವನೆ ಬದಲಾಗಿಲ್ಲ. ವ್ಯವಸ್ಥೆಯೇ ಹಾಗಿದೆ. ಸೈಬರ್ ವಂಚನೆಗೊಳಗಾಗಿಯೋ, ಮೊಬೈಲ್ ಕಳೆದುಕೊಂಡೋ ಅಥವಾ ಬೇರೆ ಯಾವುದೋ ತೊಂದರೆಗೋ ಅಲ್ಲಿಗೆ ಹೋದರೆ, ಅಲ್ಲಿ ನಮ್ಮನ್ನೇ ಒಂದು ರೀತಿಯ ಅನುಮಾನದಿಂದ ನೋಡ್ತಾರೆ. ಜತೆಗೆ ಅಲೆದಾಟ. ಸಾಮಾನ್ಯ ಜನರಿಗೆ ಹೈ-ಟೆಕ್ ಲ್ಯಾಬ್‌ಗಳು, ಎಐ ಅಥವಾ ಸೈಬರ್ ಸೆಲ್‌ಗಳ ತಾಂತ್ರಿಕ ಭಾಷೆಗಳು ಅರ್ಥವಾಗುವುದಿಲ್ಲ. ನಮಗೆ ಬೇಕಿರೋದು ಇಷ್ಟೇ, ಠಾಣೆಗೆ ಹೋದ ತಕ್ಷಣ ನಮ್ಮ ದೂರು ಸ್ವೀಕರಿಸಿ, ಒಂದು ರಶೀದಿ ಕೊಡಲು ಇಡೀ ದಿನ ಕಾಯಿಸಬಾರದು. ‘ನಿಮ್ಮ ಕೇಸ್ ನಮ್ ಏರಿಯಾಕ್ಕೆ ಬರುವುದಿಲ್ಲ’, ‘ಮೇಲಧಿಕಾರಿಗಳು ಬರಬೇಕು’ ಅಂತ ಅಲೆದಾಡಿಸುವುದು ನಿಲ್ಲಬೇಕು. ರಸ್ತೆಗಳಲ್ಲಿ ನಡೆಯುವ ʼವಸೂಲಿʼ ಕ್ರಮ ಮೊದಲು ನಿಲ್ಲಬೇಕು” ಎನ್ನುತ್ತಾರವರು.
“ಮತ್ತೊಂದು ಕಡೆ, ನಾವೂ ನೋಡುತ್ತೇವಲ್ವಾ? ಒಬ್ಬ ಕಾನ್‌ಸ್ಟೆಬಲ್ ಬೆಳಗ್ಗೆಯಿಂದ ರಾತ್ರಿವರೆಗೆ ರಸ್ತೆಯಲ್ಲಿ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡಬೇಕು, ಇಲ್ಲವೇ ವಿಐಪಿ ಬಂದೋಬಸ್ತ್‌ಗೆ ಹೋಗಬೇಕು. ಅವರಿಗೆ ಸರಿಯಾದ ರಜೆ ವ್ಯವಸ್ಥೆಯೂ ಇರುವುದಿಲ್ಲ. ಅಂತಹ ಒತ್ತಡದಲ್ಲಿರುವ ಸಿಬ್ಬಂದಿ ಬಳಿ ನಾವು ಸೌಜನ್ಯವನ್ನು ನಿರೀಕ್ಷಿಸುವುದೂ ಕಷ್ಟವೇ. ಆಯಾಸದಿಂದ ಸಿಡಿಮಿಡಿಗೊಳ್ಳುವ ಸಿಬ್ಬಂದಿ ನಮ್ಮ ಕಷ್ಟವನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವುದಾದರೂ ಹೇಗೆ? ಮೊದಲು ಸರ್ಕಾರ ಅವರ ಮೇಲಿನ ಕೆಲಸದ ಭಾರವನ್ನು ಇಳಿಸಬೇಕು, ಅವರಿಗೆ ಸರಿಯಾದ ವಿಶ್ರಾಂತಿ ಸಿಗುವಂತೆ ಮಾಡಬೇಕು”
ಇದನ್ನೂ ಓದಿ: ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್ ವ್ಯವಸ್ಥೆಯ ಶಾಪವೇ? – ಭಾಗ 2
“ಹಾಗಾಗಿ ಹೊಸ ವಾಹನಗಳು, ಕ್ಯಾಮೆರಾಗಳು ಅಥವಾ ಹೈ-ಟೆಕ್ ಉಪಕರಣಗಳನ್ನು ತರುವುದರಿಂದ ಪೊಲೀಸ್ ಇಲಾಖೆ ಬದಲಾಗುವುದಿಲ್ಲ. ಬೀಟ್ ವ್ಯವಸ್ಥೆ ಸರಿಯಾಗಬೇಕು, ಜನರೊಂದಿಗೆ ಸೌಜನ್ಯದಿಂದ ವರ್ತಿಸುವ ತರಬೇತಿ ಸಿಗಬೇಕು ಮತ್ತು ಮುಖ್ಯವಾಗಿ ಠಾಣೆಗಳು ದೂರುದಾರರನ್ನು ಅಂಜಿಸುವ ಬದಲು ಆಸರೆಯಾಗುವ ಜಾಗವಾಗಿ ರೂಪುಗೊಳ್ಳಬೇಕು. ಆಗ ಮಾತ್ರ ರಂಜಾನ್ ದರ್ಗಾ ಅವರ ಕವಿತೆಯಲ್ಲಿ ಹೇಳಿದಂತೆ, ವ್ಯವಸ್ಥೆಯು ಕೇವಲ ದಂಡಿಸುವ ಯಂತ್ರವಾಗದೆ, ಮನುಷ್ಯತ್ವದ ನಿಜವಾದ ರಕ್ಷಕನಾಗಿ ಬದಲಾಗಲು ಸಾಧ್ಯ”
ಪೊಲೀಸ್ ಸುಧಾರಣೆಯ ಭಾಗವಾಗಿ ಸಿಬ್ಬಂದಿ ಕೊರತೆ ನೀಗಿಸುವುದು, ಕೆಲಸದ ಹೊರೆಯನ್ನು ವೈಜ್ಞಾನಿಕವಾಗಿ ಮರುಹಂಚಿಕೆ ಮಾಡುವುದು, ನಿರಂತರ ತರಬೇತಿ, ಆಧುನಿಕ ತನಿಖಾ ಸಾಮರ್ಥ್ಯ ಮತ್ತು ತಂತ್ರಜ್ಞಾನ ಬಳಕೆಯ ಜತೆಗೆ ಠಾಣೆಯ ಬಾಗಿಲಿಗೆ ಬರುವ ನಾಗರಿಕನಿಗೆ ಗೌರವಯುತ ಸೇವೆ ಸಿಗುವಂತೆ ಮಾಡುವುದು ಅತ್ಯಗತ್ಯ. AI ಬರಲಿ, ಸೈಬರ್ ಲ್ಯಾಬ್‌ಗಳು ಬಲಗೊಳ್ಳಲಿ, ಡಿಜಿಟಲ್ ತನಿಖೆ ವೇಗ ಪಡೆಯಲಿ. ಆದರೆ ಇವೆಲ್ಲದರ ನಡುವೆ ಮನುಷ್ಯತ್ವ ಮರೆಯಾಗದಿರಲಿ. ಆಗ ಮಾತ್ರ ಜನಕೇಂದ್ರಿತ ಪೊಲೀಸ್ ಸುಧಾರಣೆ ಸಾಧ್ಯವಿದೆ.




