ಫಾರ್ಮ್‌-7 ವಿವಾದ | ಆರೋಪಿಗಳ ರಕ್ಷಣೆಗೆ ನಿಂತರೇ ಎಚ್‌ಡಿಕೆ?

Date:

ರಾಜ್ಯದಲ್ಲಿ ಸದ್ಯ ಭಾರೀ ಗದ್ದಲ ಎಬ್ಬಿಸಿರುವ SIR ಮತ್ತು ದಂಡು ದಂಡಾಗಿ ಫಾರ್ಮ್‌-7 ಅರ್ಜಿಗಳನ್ನು ಸಲ್ಲಿಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಘರ್ಷ, ಕೋಮು ಧ್ರುವೀಕರಣದ ಆತಂಕ ಮತ್ತು ಆಡಳಿತ-ವಿರೋಧ ಪಕ್ಷಗಳ ನಡುವಿನ ತೀವ್ರ ಜಟಾಪಟಿಗೆ ಕಾರಣವಾಗಿದೆ. ಚುನಾವಣಾ ಪಟ್ಟಿಯಿಂದ ಮತದಾರರ ಹೆಸರುಗಳನ್ನು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ಬಳಸಲಾಗುವ ಫಾರ್ಮ್-7 ಅನ್ನು ವ್ಯವಸ್ಥಿತವಾಗಿ ಹಾಗೂ ಸಾಮೂಹಿಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ನಿರ್ದಿಷ್ಟವಾಗಿ ಮುಸ್ಲಿಂ ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳ ಮತದಾರರನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.

- Advertisement -

ಬಬಲೇಶ್ವರ, ಭಾಲ್ಕಿ, ಬೆಳಗಾವಿ ಹಾಗೂ ಬೀದರ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಕಲಿ ಅಥವಾ ಮ್ಯಾನಿಪುಲೇಟೆಡ್ ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿರುವ ನಿದರ್ಶನಗಳು ಬೆಳಕಿಗೆ ಬಂದಿವೆ. ಜೂನ್ 16 ರಿಂದ ಅಕ್ಟೋಬರ್ 4ರ ಅವಧಿಯಲ್ಲಿ ಚುನಾವಣಾ ಆಯೋಗದ ಕಚೇರಿಗೆ ಒಟ್ಟು 91,278 ಫಾರ್ಮ್-7 ಅರ್ಜಿಗಳು ಬಂದಿದ್ದು, ಕೇವಲ ಸೆಪ್ಟೆಂಬರ್ ಅಂತ್ಯದಿಂದ ಅಕ್ಟೋಬರ್ ಮೊದಲ ವಾರದೊಳಗೆ ಈ ಅರ್ಜಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಶೇಷವಾಗಿ ಮುಸ್ಲಿಂ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದೇ ಹೇಳಲಾಗುತ್ತಿದೆ. ಬೂತ್ ಮಟ್ಟದಲ್ಲಿ ಜೀವಂತವಾಗಿರುವವರನ್ನು ಮೃತಪಟ್ಟಿದ್ದಾರೆಂದೋ ಅಥವಾ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆಂದೋ ಸುಳ್ಳು ಮಾಹಿತಿ ನೀಡಿ ಅರ್ಜಿಗಳನ್ನು ಸಲ್ಲಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಬೃಹತ್ ಪ್ರಮಾಣದ ಬೋಗಸ್ ಅರ್ಜಿಗಳ ಸಲ್ಲಿಕೆಯು ಪ್ರಜಾಪ್ರಭುತ್ವದ ಮೂಲಾಧಾರವಾದ ಮುಕ್ತ ಮತ್ತು ನ್ಯಾಯಸಮ್ಮತ ಮತದಾನದ ಹಕ್ಕಿನ ಮೇಲಿನ ನೇರ ದಾಡಿಯಾಗಿದೆ ಎಂಬ ಕಳವಳ ವ್ಯಕ್ತವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಈ ಗಂಭೀರ ವಿದ್ಯಮಾನದ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ರಾಜಕೀಯ ತಿಕ್ಕಾಟವೂ ಆರಂಭವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸುಮಾರು ಐದು ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಬಳಿಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಫಾರ್ಮ್-7 ಭರ್ತಿ ಮಾಡುವಾಗ ಸುಳ್ಳು ಘೋಷಣೆಗಳನ್ನು ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ. ಆದಾಗ್ಯೂ, ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬು ಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ, ಇಲ್ಲಿಯವರೆಗೆ ಯಾವುದೇ ಪ್ರಕರಣದಲ್ಲೂ ಇಆರ್‌ಒ ಕಡೆಯಿಂದ ವಿಚಾರಣೆ ಆರಂಭವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕೇವಲ ಫಾರ್ಮ್-7 ಅರ್ಜಿ ಬಂದ ಮಾತ್ರಕ್ಕೆ ಯಾವುದೇ ಮತದಾರರ ಹೆಸರನ್ನು ನೇರವಾಗಿ ಅಳಿಸಲು ಬರುವುದಿಲ್ಲವೆಂದೂ, ಕಡ್ಡಾಯವಾಗಿ ನೋಟಿಸ್ ಜಾರಿ ಮಾಡಿ, ವಿಚಾರಣೆ ನಡೆಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಫಾರ್ಮ್-7 ಬಂದಾಕ್ಷಣ ಯಾರ ಹೆಸರನ್ನೂ ನೇರವಾಗಿ ಡಿಲೀಟ್ ಮಾಡುವುದಿಲ್ಲ, ನಿಯಮಾವಳಿಗಳ ಪ್ರಕಾರ ನೋಟಿಸ್ ನೀಡಿ ವಿಚಾರಣೆ ನಡೆಸಿದ ಮೇಲೆಯೇ ತೀರ್ಮಾನವಾಗುತ್ತದೆ ಎಂದು ಸಿಇಒ ಅನ್ಬುಕುಮಾರ್ ಸಮರ್ಥಿಸಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಬಲ್ಕ್ ಆಗಿ, ಅದರಲ್ಲೂ ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯಗಳ ಮತಗಳನ್ನು ಗುರಿಯಾಗಿಸಿ ನಕಲಿ ಮಾಹಿತಿಯೊಂದಿಗೆ ಅರ್ಜಿಗಳು ಸಲ್ಲಿಕೆಯಾಗಿರುವುದು ವ್ಯವಸ್ಥಿತ ಸಂಚು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಹಂತದಲ್ಲಿ ಆಯೋಗವು ಕೇವಲ ʼಇನ್ನೂ ಯಾರ ಹೆಸರೂ ಡಿಲೀಟ್ ಆಗಿಲ್ಲʼ ಎಂದು ಹೇಳಿಕೆ ನೀಡುವುದು ಅಕ್ರಮ ಎಸಗುವವರಿಗೆ ಪರೋಕ್ಷ ಧೈರ್ಯ ತುಂಬಿದಂತಾಗುತ್ತದೆ. ಸುಳ್ಳು ಘೋಷಣೆ ಅಥವಾ ತಪ್ಪು ಮಾಹಿತಿ ನೀಡಿ ಫಾರ್ಮ್-7 ಭರ್ತಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದರೂ, ಇದರ ಹಿಂದೆ ಇರುವ ಸಂಘಟಿತ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಿಮಿನಲ್ ಮೊಕದ್ದಮೆ ಹೂಡುವಲ್ಲಿ ಆಯೋಗ ಹಿಂದೇಟು ಹಾಕುತ್ತಿರುವುದು ಅದರ ನಿಷ್ಪಕ್ಷಪಾತತೆಯ ಮೇಲೆಯೇ ಅನುಮಾನ ಮೂಡಿಸುತ್ತದೆ.

ಮತ್ತೊಂದೆಡೆ, ಈ ಇಡೀ ವಿವಾದ ಮತ್ತೊಂದು ರೂಪ ಪಡೆದುಕೊಂಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟ(ಬಿಜೆಪಿ-ಜೆಡಿಎಸ್)ವು ರಾಜ್ಯ ಸರ್ಕಾರದ ವಿರುದ್ಧ ತೊಡೆತಟ್ಟಿದ್ದು, ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಮತ್ತು ಪೊಲೀಸ್ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ನೈಸ್ ಯೋಜನೆ, ಬಿಡದಿ ಟೌನ್‌ಶಿಪ್ ಯೋಜನೆ ಹಾಗೂ ಕೆಪಿಎಸ್‌ಸಿ ಹಗರಣಗಳಂತಹ ಗಂಭೀರ ಸಾರ್ವಜನಿಕ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ರಾಜ್ಯ ಸರ್ಕಾರವೇ ಈ ಎಸ್‌ಐಆರ್ ವಿವಾದವನ್ನು ಸೃಷ್ಟಿಸಿದೆ ಎಂದು ಎಚ್‌ಡಿಕೆ ಆರೋಪಿಸಿದ್ದಾರೆ. ಫಾರ್ಮ್-7 ಅರ್ಜಿಗಳ ಸಲ್ಲಿಕೆ ಸ್ವತಃ ಕಾನೂನುಬಾಹಿರವಲ್ಲ ಎಂದು ನ್ಯಾಯಾಲಯದ ಸ್ಪಷ್ಟನೆಯನ್ನು ಉಲ್ಲೇಖಿಸಿರುವ ಅವರು, ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸ್ ದಬ್ಬಾಳಿಕೆ ಮುಂದುವರಿದರೆ ರಾಜ್ಯಾದ್ಯಂತ ಪೊಲೀಸ್ ಠಾಣೆಗಳ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಫಾರ್ಮ್-7 ಅರ್ಜಿಗಳನ್ನು ಸಲ್ಲಿಸುವುದು ಕಾನೂನುಬಾಹಿರವಲ್ಲ ಎಂದು ವಾದಿಸುತ್ತಾ, ಈ ಪ್ರಕ್ರಿಯೆಯನ್ನು ಸಮರ್ಥಿಸಿಕೊಳ್ಳುವುದು ಮತ್ತು ಈ ಅಕ್ರಮಗಳಿಗೆ ಕಾರಣರಾಗಿ ಎಫ್‌ಐಆರ್ ಎದುರಿಸುತ್ತಿರುವ ಬಿಜೆಪಿ-ಜೆಡಿಎಸ್ ಪದಾಧಿಕಾರಿಗಳ ವಿರುದ್ಧದ ಕ್ರಮವನ್ನು ವಿರೋಧಿಸುತ್ತಿರುವ ಎಚ್‌ಡಿಕೆ ದ್ವಂದ್ವ ನಿಲುವುಗಳು ಟೀಕೆಗೆ ಒಳಗಾಗಿವೆ. ಒಂದು ನಿರ್ದಿಷ್ಟ ಸಮುದಾಯದ ಮತಗಳನ್ನು ಕಡಿತಗೊಳಿಸುವ ಕುತಂತ್ರಕ್ಕೆ ಬೆಂಬಲ ನೀಡುವಂತೆ ಬಿಂಬಿಸಿಕೊಳ್ಳುವುದು ಅಥವಾ ಅಂತಹ ಕೃತ್ಯ ಎಸಗಿದವರನ್ನು ರಕ್ಷಿಸಲು ಮುಂದಾಗುವುದು ನೈತಿಕವಾಗಿ ಒಪ್ಪಿಕೊಳ್ಳಲಾಗದ ಸಂಗತಿ. ರಾಜಕೀಯ ದ್ವೇಷ ಸಾಧನೆ ಅಥವಾ ಸರ್ಕಾರದ ವಿರುದ್ಧದ ಸಮರಕ್ಕೆ ಪೊಲೀಸ್ ದುರ್ಬಳಕೆ ಆರೋಪ ಮಾಡುವುದು ಬೇರೆ ವಿಚಾರ, ಆದರೆ ಮತದಾರರ ಪಟ್ಟಿಯನ್ನು ತಿರುಚುವಂತಹ ಅರಾಜಕತಾನ್ವಯ ಕೃತ್ಯಗಳನ್ನು ಸಮರ್ಥಿಸುವುದು ಯಾವುದೇ ಜವಾಬ್ದಾರಿಯುತ ನಾಯಕನಿಗೆ ಶೋಭೆ ತರುವುದಿಲ್ಲ.

ಈ ವಿದ್ಯಮಾನಗಳನ್ನು ಗಮನಿಸಿದರೆ, ಇದು ಕೇವಲ ಚುನಾವಣಾ ದಾಖಲೆಗಳ ತಿದ್ದುಪಡಿಯ ಮೇಲಿನ ವಿವಾದ ಮಾತ್ರವಲ್ಲದೆ, ಭಾರತೀಯ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಂಬಿಕೆ ಹಾಗೂ ಸಾಂಸ್ಥಿಕ ಸ್ವಾಯತ್ತತೆಯ ಮೇಲೆ ಬಿದ್ದಿರುವ ದೊಡ್ಡ ಕಳಂಕ ಎನ್ನಲಾಗುತ್ತಿದೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಮತದಾನದ ಹಕ್ಕು ಅತ್ಯಂತ ಪವಿತ್ರವಾದದ್ದು ಮತ್ತು ಅದನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವು ದೇಶದ ಒಕ್ಕೂಟ ವ್ಯವಸ್ಥೆಯ ಬುಡಕ್ಕೇ ಕೊಡಲಿಪೆಟ್ಟು ಇಟ್ಟಂತೆ. ಚುನಾವಣಾ ಆಯೋಗವು ಕೇವಲ ಅಂಕಿಅಂಶಗಳನ್ನು ನೀಡಿ ಕೈಕಟ್ಟಿ ಕೂರದೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಬಲ್ಕ್ ಅರ್ಜಿಗಳನ್ನು ಸೃಷ್ಟಿಸಿ ವ್ಯವಸ್ಥಿತ ಜಾಲವನ್ನು ನಡೆಸುತ್ತಿರುವ ಕಾಣದ ಕೈಗಳ ಹಿಂದಿನ ರಾಜಕೀಯ ಅಥವಾ ಕೋಮು ಸಂಚನ್ನು ಬೇರುಸಹಿತ ಕಿತ್ತುಹಾಕಬೇಕಿದೆ. ಒಂದು ವೇಳೆ ಆಯೋಗವು ಈ ವಿಷಯದಲ್ಲಿ ಮೌನ ವಹಿಸಿದರೆ ಅಥವಾ ಕೇವಲ ತಾಂತ್ರಿಕ ನೆಪಗಳನ್ನು ಮುಂದಿಟ್ಟು ಜಾರಿಕೊಳ್ಳಲು ನೋಡಿದರೆ, ಜನಸಾಮಾನ್ಯರಿಗೆ ಚುನಾವಣಾ ಪ್ರಕ್ರಿಯೆಯ ಮೇಲಿರುವ ವಿಶ್ವಾಸ ಸಂಪೂರ್ಣವಾಗಿ ಕುಸಿದುಹೋಗುವುದು ಗ್ಯಾರಂಟಿ.

ಜೊತೆಗೆ, ವಿರೋಧ ಪಕ್ಷಗಳು ಈ ಸೂಕ್ಷ್ಮ ವಿಷಯವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ದುರಂತ. ಮತದಾರರ ಪಟ್ಟಿಯಂತಹ ಸಂವೇದನಾಶೀಲ ವಿಷಯವನ್ನು ಎಲ್ಲಾ ಪಕ್ಷಗಳು ಒಟ್ಟಾಗಿ ನಿಜವಾದ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸಲು ಪಾರದರ್ಶಕ ಸಹಕಾರ ನೀಡಬೇಕಿದೆ. ಆದರೆ, ಎನ್‌ಡಿಎ ನಾಯಕರಿಗೆ ಇದು ಬೇಕಿಲ್ಲ. ಈ ಎಸ್‌ಐಆರ್ ವಿವಾದವು ಮುಂದಿನ ದಿನಗಳಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಮುನ್ನ, ಚುನಾವಣಾ ಆಯೋಗವು ಸಂಪೂರ್ಣ ನಿಷ್ಪಕ್ಷಪಾತದಿಂದ ಮಧ್ಯಪ್ರವೇಶಿಸಿ, ನಕಲಿ ಅರ್ಜಿಗಳನ್ನು ತಿರಸ್ಕರಿಸಿ, ಅರ್ಹ ಮತದಾರರಿಗೆ ನ್ಯಾಯ ಒದಗಿಸುವ ಮೂಲಕ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಬೇಕಾದ ಅನಿವಾರ್ಯತೆ ಇದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹ್ಯಾಟ್ರಿಕ್ ಗೆಲುವಿನ ಬೆನ್ನಲ್ಲೇ ನಾಯಕತ್ವಕ್ಕೆ ವಿದಾಯ: ದಿಟ್ಟ ನಿರ್ಧಾರದೊಂದಿಗೆ ನಿರ್ಗಮಿಸಿದ ಹರ್ಮನ್‌ಪ್ರೀತ್ ಕೌರ್

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಹರ್ಮನ್‌ಪ್ರೀತ್ ಕೌರ್...

ಈ ದಿನ ಸಂಪಾದಕೀಯ | ಎದ್ದು ನಿಂತ ಯುವಜನತೆ, ಹೊಸ ಬೆಳವಣಿಗೆಯತ್ತ ಭಾರತ

ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಸರ್ಕಾರ ರಚನೆ, ಆಡಳಿತ ನಡೆಸುವುದಷ್ಟೇ ಅಲ್ಲ, ದನಿ...

ಮತದಾರರ ಪಟ್ಟಿಯಿಂದ ನಾಗರಿಕರನ್ನು ಕೈಬಿಡುವುದಾದರೆ, ‘SIR’ ಉದ್ದೇಶವೇನು? ಚುನಾವಣಾ ಆಯೋಗಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ

ಎಲ್ಲ ನಾಗರಿಕರು ಮತದಾರರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿ....