ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಕಟಾವಿಗೆ ಬಂದಿದ್ದ ಜಿಲ್ಲೆಯ ನಾಲ್ವರು ರೈತರಿಗೆ ಸೇರಿದ ಸುಮಾರು 7.5 ಎಕರೆ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಬುಧವಾರ ನಡೆದಿದೆ.
ಭಾಲ್ಕಿ ತಾಲ್ಲೂಕಿನ ಬೀರಿ (ಬಿ) ಗ್ರಾಮದ ರೈತರಾದ ನರಸಿಂಗ ಬಿರಾದಾರ ಅವರ 1.5 ಹಾಗೂ ರಾಜಕುಮಾರ ಬಿರಾದಾರ ಅವರ ಜಮೀನಿನಲ್ಲಿದ್ದ ಒಂದು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಇನ್ನು ಹುಲಸೂರ ಪಟ್ಟಣದ ಹೊರವಲಯದ ಜಮೀನಿನಲ್ಲಿ ಬೆಳೆದಿದ್ದ ರೈತರಾದ ಧನರಾಜ ಕಾಶೆಪ್ಪ ಹಾಗೂ ಸಚಿನ್ ಪ್ರಕಾಶ ಅವರಿಗೆ ಸೇರಿದ ಒಟ್ಟು ನಾಲ್ಕು ಎಕರೆ ಕಬ್ಬು ನಾಶವಾಗಿದೆ.
ವಿದ್ಯುತ್ ಪರಿವರ್ತಕದಿಂದಾಗಿ ಕಬ್ಬಿನ ಹೊಲಕ್ಕೆ ಬೆಂಕಿ ಹೊತ್ತಿಕೊಂಡ ತಕ್ಷಣ ರೈತರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ವಾಹನಗಳ ಮೂಲಕ ಬೆಂಕಿ ನಂದಿಸಲು ಹರಸಾಹಸಪಟ್ಟರಾದರೂ, ಅಷ್ಟರಲ್ಲಾಗಲೇ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ.
ಸಾಲ ಮಾಡಿ, ವರ್ಷವಿಡೀ ಬೆವರು ಸುರಿಸಿ, ಗೊಬ್ಬರ ಹಾಕಿ, ನೀರುಣಿಸಿ ಕಷ್ಟಪಟ್ಟು ಬೆಳೆಸಿದ್ದ ಕಬ್ಬು ಕಣ್ಣೆದುರೇ ಬೆಂಕಿಗಾಹುತಿಯಾಗಿದ್ದನ್ನು ಕಂಡ ರೈತರು ಕಣ್ಣೀರಿಟ್ಟರು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅಪಾರ ನಷ್ಟದಿಂದ ಕಂಗಾಲಾಗಿದ್ದಾರೆ.
ಸರ್ಕಾರ ನೆರವಿಗೆ ಬರಲಿ: ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಸರ್ಕಾರ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಬೇಕು. ಸೂಕ್ತ ಪರಿಹಾರ ನೀಡಿ ಸಂಕಷ್ಟದಲ್ಲಿರುವ ತಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಅನುಭವ ಮಂಟಪ ಉತ್ಸವ | ಹಂಸಲೇಖ, ಸಿ.ಆರ್.ಚಂದ್ರಶೇಖರ್ ಸೇರಿ ನಾಲ್ವರಿಗೆ ಪ್ರಶಸ್ತಿ ಘೋಷಣೆ






