ಎಸ್‌ಐಆರ್ ಅಕ್ರಮವಾಗಿ ನಡೆಸುವುದರ ವಿರುದ್ಧ, ಬಿಎಲ್‌ಒಗಳ ಕರ್ತವ್ಯಲೋಪದ ವಿರುದ್ಧ ರಾಜಕೀಯ ನಾಯಕರು ಮಾತ್ರವಲ್ಲ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಲೇಬೇಕಿದೆ. ಆದರೆ, ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನೀಡಲೇಬಾರದು ಎಂಬ ಧೋರಣೆಯಾಗಲಿ, ಇಲ್ಲಿನ ಮುಸ್ಲಿಮರನ್ನು ಬಾಂಗ್ಲಾದೇಶಿ ವಲಸಿಗರು ಎಂದು ಯಾವುದೇ ಪುರಾವೆ ತೋರಿಸದೇ ಆರೋಪಿಸುವುದು ಅಕ್ಷಮ್ಯ. ಇಂತಹ ಹೇಳಿಕೆಗಳು ಒಬ್ಬ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಿಂದ ಬಂದಿರುವುದು ಖಂಡನೀಯ.
ರಾಜ್ಯದಲ್ಲಿ ಜುಲೈ ಒಂದರಿಂದ SIR ಪ್ರಕ್ರಿಯೆ ಅಧಿಕೃತವಾಗಿ ಶುರುವಾಗಿದೆ. ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರಂ ತುಂಬುತ್ತಿದ್ದಾರೆ. ಕೆಲವೆಡೆ ಗೊಂದಲ ಉಂಟಾಗಿದೆ. ಈ ಮಧ್ಯೆ ನಿನ್ನೆ ಗುರುವಾರ ರಾಮನಗರದಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪ ಅಕ್ಷಮ್ಯ. ಕೇಂದ್ರ ಸಚಿವರಾಗಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ಕುಮಾರಸ್ವಾಮಿ ತಮ್ಮ ಸ್ಥಾನದ ಘನತೆ, ಜವಾಬ್ದಾರಿ ಎರಡನ್ನೂ ಮರೆತು ಪಕ್ಕಾ ಕೋಮುವಾದಿ ಹೇಳಿಕೆ ನೀಡಿದ್ದಾರೆ.
ರಾಮನಗರದ ಮುಸ್ಲಿಂ ಮುಖಂಡ ಮಾಜಿ ಕಾರ್ಪೊರೇಟರ್ ಒಬ್ಬರು ತಮ್ಮ ಸಮುದಾಯದ ಕೂಲಿ ಕಾರ್ಮಿಕರು, ಅನಕ್ಷರಸ್ಥರಿಗಾಗಿ ಶಾಲೆಯೊಂದರ ಕೊಠಡಿಯಲ್ಲಿ ಸಂಜೆ ನಾಲ್ಕರ ನಂತರ ಸಾಮೂಹಿಕವಾಗಿ ಎಸ್‌ಐಆರ್ ದಾಖಲೀಕರಣ ನಡೆಸಲು ಬಿಎಲ್‌ಒ ಅವರಿಗೆ ಮನವಿ ಮಾಡಿಕೊಂಡ ಮೇರೆಗೆ ಅಲ್ಲಿ ಎನ್ಯುಮರೇಷನ್ ಫಾರಂ ತುಂಬುವ ಪ್ರಕ್ರಿಯೆ ನಡೆಸಲಾಗಿದೆ. ಅದರ ವಿಡಿಯೋವನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿ ಕುಮಾರಸ್ವಾಮಿಯವರು ಇವರೆಲ್ಲ ಬಾಂಗ್ಲಾದೇಶದ ವಲಸಿಗರು. ರಾಮನಗರದಲ್ಲಿ ಸುಮಾರು ಹತ್ತು ಸಾವಿರದಷ್ಟು ಬಾಂಗ್ಲಾ ವಲಸಿಗರಿದ್ದಾರೆ. ಅವರಿಗೆ ಕಾಂಗ್ರೆಸ್ ರಕ್ಷಣೆ ಕೊಡುತ್ತಿದೆ. ಮುಂದಿನ ಚುನಾವಣೆಯಲ್ಲಿ ನಕಲಿ ಮತದಾನ ಮಾಡಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸೂಚನೆಯ ಮೇರೆಗೆ ಅಕ್ರಮವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಎಸ್‌ಐಆರ್ ಅಕ್ರಮ ನಡೆಸುವುದರ ವಿರುದ್ಧ, ಬಿಎಲ್‌ಒಗಳ ಬೇಜವಾಬ್ದಾರಿತನ, ಕರ್ತವ್ಯಲೋಪದ ವಿರುದ್ಧ ರಾಜಕೀಯ ನಾಯಕರು ಮಾತ್ರವಲ್ಲ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಲೇಬೇಕಿದೆ. ಆದರೆ, ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನೀಡಲೇಬಾರದು ಎಂಬ ಧೋರಣೆ, ಇಲ್ಲಿನ ಮುಸ್ಲಿಮರನ್ನು ಬಾಂಗ್ಲಾದೇಶಿ ವಲಸಿಗರು ಎಂದು ಯಾವುದೇ ಪುರಾವೆ ತೋರಿಸದೇ ಆರೋಪಿಸುವುದು ಅಕ್ಷಮ್ಯ. ಇಂತಹ ಹೇಳಿಕೆಗಳು ಒಬ್ಬ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಿಂದ ಬಂದಿರುವುದು ಖಂಡನೀಯ. ತಮ್ಮನ್ನು ಮತ್ತು ತಮ್ಮ ಪತ್ನಿಯನ್ನು ಗೆಲ್ಲಿಸುವ ತನಕ ರಾಮನಗರ ಕ್ಷೇತ್ರದಲ್ಲಿ ಬಾಂಗ್ಲಾದೇಶದ ಮುಸಲ್ಮಾನರು ಇರಲಿಲ್ಲ. ತಮ್ಮ ಮಗನನ್ನು ಸೋಲಿಸಿದ ತಕ್ಷಣವೇ ಬಾಂಗ್ಲಾದೇಶಿಗಳು ಹುಟ್ಟಿ ಬಂದರು! ಕುಮಾರಸ್ವಾಮಿಯವರು ಬಿಜೆಪಿಯ ಮುಸ್ಲಿಮ್ ದ್ವೇಷ ತಂತ್ರದಲ್ಲಿ ಇನ್ನೂ ಪಳಗಿಲ್ಲ ಎಂಬುದನ್ನು ಈ ‘ಕಸಬುಗೇಡಿತನ’ ಎತ್ತಿ ತೋರುತ್ತಿದೆ.
ಕುಮಾರಸ್ವಾಮಿ ಅವರು ರಾಮನಗರದ ಮತದಾರರು. ಅವರೇ ಹೇಳಿಕೊಂಡಂತೆ ಅವರ ಪತ್ನಿ, ಮಗ, ಸೊಸೆ ಕೂಡಾ ರಾಮನಗರದ ಮತದಾರರು. ಅಷ್ಟೇ ಅಲ್ಲ ರಾಜ್ಯದ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷ ಹೊರತುಪಡಿಸಿದರೆ ಇತ್ತೀಚಿನ ವರ್ಷಗಳ ತನಕ ನೆಚ್ಚಿಕೊಂಡು ಬಂದದ್ದು ಜೆಡಿಎಸ್ ಪಕ್ಷವನ್ನು. ಕುಮಾರಸ್ವಾಮಿ-ದೇವೇಗೌಡರ ಪಕ್ಷದ ದೊಡ್ಡ ಪ್ರಮಾಣದ ಮತದಾರರು ಮುಸ್ಲಿಮರೇ ಆಗಿದ್ದರು. ರಾಮನಗರ, ಚನ್ನಪಟ್ಟಣದಲ್ಲಿ ಮುಸ್ಲಿಮರು ಜೆಡಿಎಸ್ ಪಕ್ಷವನ್ನು ಗೆಲ್ಲಿಸುತ್ತಲೇ ಬಂದಿದ್ದರು. ಅದರ ಮೊದಲ ಫಲಾನುಭವಿಗಳು ಎಚ್‌ಡಿ ಕುಮಾರಸ್ವಾಮಿ ಕುಟುಂಬ. ಆದರೆ ಕಳೆದ ಚುನಾವಣೆಯಲ್ಲಿ ಮುಸ್ಲಿಮರು ತಮ್ಮ ಪಕ್ಷವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಿಲ್ಲ, ಮಗನನ್ನು ಗೆಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕುಮಾರಸ್ವಾಮಿ ಪಕ್ಕಾ ಕೋಮುವಾದಿಯಾಗಿ ಮಾತನಾಡುವುದು ಸರಿಯಲ್ಲ. ಲೋಕಸಭಾ ಚುನಾವಣೆಗೆ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡ ನಂತರ ಮುಸ್ಲಿಮರು ಜೆಡಿಎಸ್ ನಿಂದ ದೂರ ಸರಿದಿದ್ದರೆ ಅದಕ್ಕೆ ಸಕಾರಣ ಇದೆ. ಸದಾ ಮುಸ್ಲಿಮರ ವಿರುದ್ಧ ದ್ವೇಷ ಕಾರುವ, ಕೋಮು ಗಲಭೆಗೆ ಪ್ರಚೋದನೆ ನೀಡುವ, ಆಹಾರ-ಉಡುಗೆ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಮುಸ್ಲಿಮರು ಜೆಡಿಎಸ್ ಬೆಂಬಲಿಸುವುದಾದರೂ ಹೇಗೆ? ಜೆಡಿಎಸ್ ಬೆಂಬಲಿಸಿದರೆ ಬಿಜೆಪಿಯನ್ನೂ ಬೆಂಬಲಿಸಿದಂತೆಯೇ ಸರಿ. ಈ ಭಯದಿಂದ ಮುಸ್ಲಿಂ ಸಮುದಾಯ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದೆ.
ಸದ್ಯ ಜೆಡಿಎಸ್‌ಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿಯವರು ಅಡ್ಡ ಮತದಾನ ಮಾಡಿದ ನಂತರ ಬಿಜೆಪಿಯೊಂದಿಗಿನ ಮೈತ್ರಿಯೂ ಮುರಿದು ಬೀಳುವ ದಿನ ಹತ್ತಿರದಲ್ಲೇ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಸಮಯದಲ್ಲಿ ಬಹಳ ಕಾಲದಿಂದ ಪಕ್ಷದ ಜೊತೆಗೆ ನಿಂತ ಸಮುದಾಯವನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡದೇ ಆ ಸಮುದಾಯವನ್ನೇ ಅಕ್ರಮ ವಲಸಿಗರು ಎಂದು ದೂರುವುದು ಕುಮಾರಸ್ವಾಮಿಯವರು ಮಾನಸಿಕವಾಗಿ ಕುಗ್ಗಿರುವ ಸೂಚನೆ. ವೈಯಕ್ತಿಕ ಸಂಕಟಗಳು ಏನೇ ಇದ್ದರೂ, ಅದಕ್ಕಾಗಿ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದರಿಂದ ಜೆಡಿಎಸ್‌ಗೆ ಇನ್ನಷ್ಟು ನಷ್ಟವೇ ವಿನಾ ಲಾಭವಾಗುವುದಿಲ್ಲ. ಜಾತ್ಯತೀತ ಜನತಾದಳ ಬಹುಕಾಲ ರಾಜ್ಯ ರಾಜಕೀಯದಲ್ಲಿ ಉಳಿಯುವುದಿಲ್ಲ ಎಂಬುದರ ಸೂಚನೆ ನೀಡಿದಂತಾಗುತ್ತದೆ. ಬಹುಕಾಲ ರಾಜಕೀಯದಲ್ಲಿ ಉಳಿಯುವಂತಿದ್ದರೆೆ , ಮುಸ್ಲಿಮರ ಮೇಲೆ ಕುಮಾರಸ್ವಾಮಿ ಇಂತಹ ಆಧಾರರಹಿತ ಆರೋಪ ಮಾಡುತ್ತಿರಲಿಲ್ಲ. ತನಗೆ ರಾಜಕೀಯ ಭವಿಷ್ಯವಿಲ್ಲ ಎಂದು ಕಾಲಕೆಳಗಿನ ನೋಟವನ್ನು ಮತ್ತು ಸದ್ಯದ ಲಾಭಗಳ ಮೇಲೆೆ ಮಾತ್ರವೇ ಕಣ್ಣಿಟ್ಟ ರಾಜಕೀಯ ನಾಯಕ ಮಾತ್ರವೇ ಕುಮಾರಸ್ವಾಮಿಯವರಂತೆ ಮಾತಾಡುವುದು ಸಾಧ್ಯ. ದೇವೇಗೌಡರು ತಮ್ಮ ಕುಟುಂಬದ ರಕ್ಷಣೆಗಾಗಿ ಮೋದಿಯವರಿಗೆ ಶರಣಾಗಿ ಬಹುಕಾಲವಾಯಿತು. ಮೋದಿ ಮತ್ತು ತಮ್ಮದು ಜನ್ಮಜನ್ಮಾಂತರದ ಸಂಬಂಧ ಎಂದೂ ಅವರು ಬಣ್ಣಿಸಿದ್ದಾರೆ. ಅವಿಭಕ್ತ ಜನತಾದಳದ ಈ ಹಿಂದೆ ಇಬ್ಭಾಗ ಆದಾಗ ತಮ್ಮ ಬಣಕ್ಕೆ ಸೆಕ್ಯೂಲರ್ ಅರ್ಥಾತ್ ಜಾತ್ಯತೀತ ಎಂದು ಸೇರಿಸಿಕೊಂಡಿದ್ದ ದೇವೇಗೌಡರು, ಆ ಪದದ ಅರ್ಥವನ್ನು ಮತ್ತೊಮ್ಮೆ ಓದಿಕೊಳ್ಳುವುದು ಸೂಕ್ತ.
ಬಿಹಾರ, ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ನಡೆದಿರುವ ಎಸ್‌ಐಆರ್ ನಲ್ಲಿ ಬಹುತೇಕ ಮುಸ್ಲಿಂ ಸಮುದಾಯದವರು ಮತದಾನದ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಎಸ್‌ಐಆರ್ ಮೂಲಕ ಮುಸ್ಲಿಂ ಸಮುದಾಯವನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ʼಅಕ್ರಮ ವಲಸಿಗರುʼ ಎಂಬ ಹಣೆಪಟ್ಟಿ ಕಟ್ಟಿ ಈ ದೇಶದ ಪ್ರಜೆಯಾಗಿದ್ದರೂ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರ ಮನೆಗಳ ಧ್ವಂಸ, ಸರ್ಕಾರದ ಯೋಜನೆಗಳ ನಿರಾಕರಣೆ, ಸುಳ್ಳು ಆರೋಪ ಹೊರಿಸಿ ಜೈಲಿಗಟ್ಟುವುದು, ವರ್ಷಗಟ್ಟಲೆ ಜಾಮೀನು ನಿರಾಕರಣೆಯಂತಹ ಅನ್ಯಾಯ ಎಸಗಲಾಗುತ್ತಿದೆ. ಕೋರ್ಟ್‌ಗಳೂ ಅಮಾಯಕರ ನೆರವಿಗೆ ಬರುತ್ತಿಲ್ಲ. ಯುಎಪಿಎ ಕಾಯ್ದೆಯನ್ನು ಮುಸ್ಲಿಮರ ವಿರುದ್ಧ ಬೇಕಾಬಿಟ್ಟಿ ಬಳಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿಂ ಆರೋಪಿಗಳ ಬಂಧನವಾಗುತ್ತಲೇ ಅವರ ಮನೆಗಳನ್ನು ಬುಲ್ಡೋಜರ್ ಹರಿಸಿ ಧ್ವಂಸ ಮಾಡಲಾಗುತ್ತಿದೆ. 2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಸ್ಲಿಮರ ಗುಂಪು ಹತ್ಯೆಗಳಾಗಿವೆ. ಗೋ ಕಳ್ಳರು ಎಂದು ಆರೋಪಿಸಿ ಅಮಾನುಷ ಹತ್ಯೆ ಮಾಡಲಾಗುತ್ತಿದೆ. ಗೋಮಾಂಸ ಮನೆ ಫ್ರಿಡ್ಜ್‌ನಲ್ಲಿಇಟ್ಟಿದ್ದ ಎಂಬ ಆರೋಪ ಹೊರಿಸಿ ವ್ಯಕ್ತಿಯೊಬ್ಬರನ್ನು ಹಿಂದುತ್ವವಾದಿ ಪುಂಡರು ಹೊಡೆದು ಸಾಯಿಸಿದ್ದಾರೆ. ಮಸೀದಿಗಳಿಗೆ ಕಲ್ಲು ತೂರುವುದು, ಆಜಾನ್‌ಗೆ ಅಡ್ಡಿಪಡಿಸುವುದು, ಹಿಜಾಬ್‌ಗೆ ನಿಷೇಧ, ಹುಸಿ ಲವ್ ಜಿಹಾದ್ ಆರೋಪ ಹೊರಿಸಿ ಕಿರುಕುಳ, ಆರೋಪ ಮಾತ್ರದಿಂದಲೇ ಅವರ ಮನೆಗಳ ಮೇಲೆ ಬುಲ್ಡೋಜರ್ ಹರಿಸಿ ನೆಲಸಮ ಮಾಡುವ ಕಾನೂನುಬಾಹಿರ ಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ. ಇತ್ತೀಚಿನವರೆಗೆ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿದ್ದ ಜೆಡಿಎಸ್, ಮುಸಲ್ಮಾನರ ಮೇಲೆ ನಡೆಯುವ ಇಂತಹ ದೌರ್ಜನ್ಯಗಳು- ಅನ್ಯಾಯಗಳ ಕುರಿತು ತುಟಿ ಬಿಚ್ಚಿಲ್ಲ. ಇದೀಗ ಇಲ್ಲಿನ ಮುಸ್ಲಿಮರನ್ನು ಬಾಂಗ್ಲಾ ನುಸುಳುಕೋರರು ಎಂದು ಹೇಳುವ ಮೂಲಕ ಬಿಜೆಪಿಗೂ ತಮಗೂ ಸೈದ್ಧಾಂತಿಕವಾಗಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಕುಮಾರಸ್ವಾಮಿ ಅವರು ತೋರಿಸಿಕೊಟ್ಟಿದ್ದಾರೆ. ಬಿಜೆಪಿಗೂ ತಮ್ಮ ಪಕ್ಷಕ್ಕೂ ವ್ಯತ್ಯಾಸವಿಲ್ಲ ಎಂದಾದಾಗ ಮತದಾರರು ಕುಮಾರಸ್ವಾಮಿಯವರ ಪಕ್ಷಕ್ಕೆ ಮಣೆ ಹಾಕುವ ಅಗತ್ಯ ಇರುವುದಿಲ್ಲ. ನೇರವಾಗಿ ಬಿಜೆಪಿಯನ್ನೇ ಆರಿಸಿಕೊಳ್ಳುತ್ತಾರೆೆ. ತಮ್ಮ ಕಾಲಿಗೆ ತಾವೇ ಕೊಡಲಿ ಹೊಡೆದುಕೊಳ್ಳುತ್ತಿದ್ದಾರೆಂಬ ಅರಿವು ಕುಮಾರಸ್ವಾಮಿ-ದೇವೇಗೌಡ ಅವರಿಗೆ ಇದ್ದಂತಿಲ್ಲ.
ನಿನ್ನೆ ಕುಮಾರಸ್ವಾಮಿಯವರು ಹಚ್ಚಿದ ಬೆಂಕಿಯಲ್ಲಿ ಇಂದು ಬಿಜೆಪಿ ನಾಯಕರು ಚಳಿ ಕಾಯಿಸಿಕೊಳ್ಳಲು ಹೊರಟಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಪ್ರೆಸ್ ಮೀಟ್ ಮಾಡಿ ಬಾಂಗ್ಲಾ ವಲಸಿಗರನ್ನು ಎಸ್‌ಐಆರ್‌ನಲ್ಲಿ ಸೇರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಇಸ್ಲಾಮೋಫೋಬಿಯಾ ಹರಡಲು ಕುಮಾರಸ್ವಾಮಿ ಅವರು ನೆರವಾಗಿದ್ದಾರೆ. ಇಂತಹ ನೀಚ ರಾಜಕಾರಣವನ್ನು ರಾಜ್ಯದ ಜನ ಬೆಂಬಲಿಸಕೂಡದು. ತಕ್ಕ ಪಾಠ ಕಲಿಸಬೇಕು.




