ಶಿಕ್ಷಕರು ಉತ್ತಮ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಹೇಳಿದರು.
ಬೀದರ್ ನಗರದ ಸ್ಪರ್ಧಾ ಸಂಕಲ್ಪ ಅಕಾಡೆಮಿ ವತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕ, ಪದವೀಧರ ಶಾಲಾ ಶಿಕ್ಷಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಕುರಿತು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, “ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕು” ಎಂದು ಸಲಹೆ ಮಾಡಿದರು.
ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, ಶಿಕ್ಷಣದಲ್ಲಿ ಮೌಲ್ಯಗಳ ಕುಂಠಿತದಿಂದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಶಿಕ್ಷಕರು ಮೌಲ್ಯಯುತ ವಿಚಾರಗಳನ್ನು ಮಕ್ಕಳಿಗೆ ಬೋಧಿಸಬೇಕು. ಕನ್ನಡ ಶಾಲೆಗಳ ಉಳಿವಿಗಾಗಿ ಕನ್ನಡ ಭಾಷಾ ಬೋಧಕರ ಆಯ್ಕೆ ಬಹಳ ಅವಶ್ಯಕವಾಗಿದೆ” ಎಂದರು.
ಬಸವೇಶ್ವರ ಬಿ.ಎಡ್. ಕಾಲೇಜು ಉಪನ್ಯಾಸಕ ರಾಜಕುಮಾರ ಸಿಂಧೆ ಮಾತನಾಡಿ, “ಮಕ್ಕಳಿಗೆ ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳನ್ನು ತಿಳಿಸುವ ಶಿಕ್ಷಣ ಅವಶ್ಯಕವಾಗಿದೆ” ಎಂದು ಹೇಳಿದರು.
ಧಾರವಾಡದ ವಿಷಯ ತಜ್ಞ ಯಲ್ಲಪ್ಪ ಕಮದಾಳ ಅವರು ಮನೋವಿಜ್ಞಾನ ಮತ್ತು ಬೋಧನಾ ವಿಷಯ ಕುರಿತು ಉಪನ್ಯಾಸ ನೀಡಿ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳಿಗೆ ಕೆಲ ಉಪಯುಕ್ತ ಸಲಹೆ ನೀಡಿ, ಅವರಲ್ಲಿದ್ದ ಅನೇಕ ಸಂದೇಹಗಳನ್ನು ನಿವಾರಿಸಿದರು.
ಯಲ್ಲಪ್ಪ ಕಮದಾಳ ರಚಿತ ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸ್ಪರ್ಧಾ ಸಂಕಲ್ಪ ಅಕಾಡೆಮಿ ಅಧ್ಯಕ್ಷ ನಾಗೇಶ ಸ್ವಾಮಿ ಮಸ್ಕಲ್ ಅವರು, “ಶಿಕ್ಷಕ ಆಕಾಂಕ್ಷಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಹು ಎಚ್ಚರಿಕೆಯಿಂದ ರಚಿಸಿದ ಈ ಕೃತಿ ಅತ್ಯಮೂಲ್ಯವಾಗಿದೆ” ಎಂದು ತಿಳಿಸಿದರು.
ಅಕಾಡೆಮಿಯು ಗಡಿ ಜಿಲ್ಲೆಯ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳಿಗೆ ನೆರವಾಗಲು ವಿಶೇಷ ತರಬೇತಿ ಹಾಗೂ ಉಚಿತ ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿದೆ. ಅಕಾಡೆಮಿಯಲ್ಲಿ ತರಬೇತಿ ಪಡೆದ ಬಹಳಷ್ಟು ಜನ ಸರ್ಕಾರಿ ಉದ್ಯೋಗ ಗಿಟ್ಟಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ವಚನ ಕಲ್ಯಾಣ | ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ!
ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಮಲಿಂಗ, ಸೋಮನಾಥ ಬಿರಾದಾರ, ಅಂಬಿಕಾ ಹಳ್ಳಿಖೇಡ, ಸ್ವರೂಪರಾಣಿ ನಾಗೂರೆ ಮತ್ತಿತರರು ಇದ್ದರು.




