ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರಲ್ಲಿ ಗುರುವಾರ ಕಲಬುರಗಿ ರಂಗಾಯಣದ ಕಲಾವಿದರು ಪ್ರಸ್ತುತ ಪಡಿಸಿದ ‘ಕಾಲಚಕ್ರ’ ನಾಟಕಕ್ಕೆ ಪ್ರೇಕ್ಷಕರು ಕಂಬನಿ ಮಿಡಿದರು.
ʼಗಳಿಸಿದ್ದ ಯಾರೇನು ಒಯ್ಯೋಲ್ಲ ಮನವೆ ಸಾವಿಗೆ ಮದ್ದೇ ತಿಳಿದಿಲ್ಲʼ ಹಾಡಿನೊಂದಿಗೆ ಶುರುವಾಗುವ ‘ಕಾಲಚಕ್ರ’ ರಂಗಮಂದಿರ ನೀರವ ಮೌನಕ್ಕೆ ಕರೆದೊಯ್ಯುತ್ತದೆ. ಕತ್ತಲಾವರಿಸಿದ ರಂಗದ ಮೇಲೆ ಬೆಳಕು ಮೂಡುತ್ತಿದ್ದಂತೆ ಇನಾಂದಾರ ಪಾತ್ರ ನಿರ್ವಹಿಸಿದ ಮಹಾಂತೇಶ ರಾಯಚೂರು ಅವರ ಮಾತು, ಅಭಿನಯ ಆರಂಭದಲ್ಲೇ ಎಲ್ಲರನ್ನೂ ಸೆಳೆದಿಡುತ್ತದೆ. ಅವರೊಂದಿಗೆ ರುಕ್ಕಿಣಿ (ಭಾಗ್ಯಶ್ರೀ ಪಾಳಾ), ವಿಶ್ವನಾಥ (ಅಭಿಷೇಕ ಎಸ್.), ಲೀಲಾ (ವಾಣಿಶ್ರೀ ಮಾಳಗಿ) ಅವರ ಸಂಭಾಷಣೆಗಳು ಭಾವನಾ ಲೋಕಕ್ಕೆ ಕರೆದೊಯ್ಯುತ್ತವೆ.
ಹೆತ್ತವರನ್ನು ವಯಸ್ಸಾದ ನಂತರ ಅವರನ್ನು ಮಕ್ಕಳು ಹಾಗೂ ಸೊಸೆಯಂದಿರು ನೋಡಿಕೊಳ್ಳುವ ಸಾಂದರ್ಭಿಕ ದೃಶ್ಯಾವಳಿಗಳು ನಾಟಕದಲ್ಲಿ ಪ್ರದರ್ಶನಗೊಂಡವು. ತಂದೆ-ತಾಯಯಿಂದರು ಮಕ್ಕಳ ಮೇಲೆ ಇಟ್ಟಿರುವ ಪ್ರೀತಿಯ ಋಣಾನುಬಂಧದವನ್ನು ಗಟ್ಟಿಗೊಳಿಸುವ ಪ್ರದರ್ಶನಗಳು ಪ್ರೇಕ್ಷಕರು ಮನತಟ್ಟಿದವು. ನಾಟಕದ ದೃಶ್ಯಗಳು ಪ್ರೇಕ್ಷಕರಿಗೆ ಕಣ್ಣಾಲಿಗಳನ್ನು ತೇವಗೊಳಿಸಿದವು.

ವೃದ್ಧ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ದೃಶ್ಯ, ಹೆತ್ತವರಿಗೆ ಎದುರು ವಾದಿಸುವ ಮಕ್ಕಳು-ಸೊಸೆಯಂದಿರ ಸಂಭಾಷಣೆ, ವೃದ್ಧರ ನೋವು, ಅಸಹಾಯಕತೆ, ಒಂಟಿತನ ಕಣ್ಣಲ್ಲಿ ನೀರು ತರಿಸುತ್ತವೆ. ಇದರ ಮಧ್ಯೆಯೇ ಹಾಸ್ಯ ಚಟಾಕಿಗಳು ನಗು ತರಿಸದೇ ಇರದು. ನಾಟಕದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ʼಚಿನ್ನದಂತ ನಾಡಿಗೆ ರನ್ನದಂತ ರಾಜ, ರನ್ನದಂತ ರಾಜನಿಗೆ ಮುತ್ತಿನಂತ ರಾಣಿ, ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳುʼ ಎಂಬಂತ ಹಾಡುಗಳು ಹಸಿವು-ನೀರಡಿಕೆ ಮರೆಸಿತು, ಪ್ರೇಕ್ಷಕರನ್ನು ಕುರ್ಚಿ ಬಿಟ್ಟು ಹೊರಹೋಗದಂತೆ ಕೂರಿಸಿತು. ಕೊನೆಯಲ್ಲಿ ವೃದ್ಧ ದಂಪತಿಯ ಬದುಕಿನ ಅಂತ್ಯವು ʼಆಡಿಸಿದಾತಾ ಬೇರಸಗೊಂಡು ಆಟ ಮುಗಿಸಿದʼ ಹಾಡಿನೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ.
ಮರಾಠಿಯಲ್ಲಿ ಜಯವಂತ ದಳ್ಳಿ ಅವರು ರಚಿಸಿದ ಈ ನಾಟಕವನ್ನು ಎಚ್.ಕೆ. ಕರ್ಕೇರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ನಾಟಕದ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ ಎಸ್.ಕೆ. ಅವರ ರಂಗ ಸಜ್ಜಿಕೆಗೆ ಶ್ರೀನಿವಾಸ ದೋರನಹಳ್ಳಿ ಅವರ ಧ್ವನಿ-ಬೆಳಕಿನ ಬೆಳಕಿನ ವಿನ್ಯಾಸ ನಾಟಕದ ದೃಶ್ಯಗಳಿಗೆ ಮತ್ತಷ್ಟು ಮೆರುಗು ತಂದುಕೊಟ್ಟಿತು.
ಪಾತ್ರಧಾರಿಗಳಾದ ಮಹಾಂತೇಶ ಶಿವಣ್ಣ, ಸಿದ್ದಪ್ಪ ಹುಣಚಪ್ಪ, ಅಂಬಿಕಾ ಸಾಯಬಣ್ಣ, ಅಂಬರೀಶ ಶಿವಶರಣಪ್ಪ ನಿಲೋಳ್ಳಿ, ಮಹೇಶ್ ರಾಜಶೇಖರ್, ಭೀಮಾಸಾಗರ ಚಂದ್ರಕಾಂತ, ಸಾಗರ ಮಲ್ಲಿಕಾರ್ಜುನ ಘಾಳೆ, ಶ್ರೀನಿವಾಸ ಲಕ್ಷ್ಮಣ ದೋರನಹಳ್ಳಿ ನಾಟಕಕ್ಕೆ ಜೀವ ತುಂಬಿದರು. ನಾಟಕ ಮುಗಿಯುತ್ತಿದ್ದಂತೆಯೇ ಪ್ರೇಕ್ಷಕರು ಎದ್ದು ನಿಂತು ತಮ್ಮ ಅಭಿಪ್ರಾಯ ಹಂಚಿಕೊಂಡು ಚಪ್ಪಾಳೆ ತಟ್ಟಿ ಕಲಾವಿದರಿಗೆ ಪ್ರೋತ್ಸಾಹಿಸಿದರು.
ರಂಗಭೂಮಿ ಎಂಬುದು ಕೇವಲ ಮನರಂಜನೆಯ ಸಾಧನವಲ್ಲ
ರಂಗಭೂಮಿ ಎನ್ನುವುದು ಸಮಾಜದ ಚಿಂತನೆಗಳನ್ನು ಜನರಿಗೆ ತಲುಪಿಸುವ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣೆ
ತಹಶೀಲ್ದಾರ ಮಲಶೆಟ್ಟಿ ಚಿದ್ರೆ ಹೇಳಿದರು.
ಗುರುವಾರ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಂಗಾಯಣ ಕಲಬುರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ, ಜನಪದ ಕಲಾವಿದರ ಬಳಗ, ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮಹರ್ಷಿ ವಾಲ್ಮೀಕಿ ಸೋಶಿಯಲ್ ಐಂಡ್ ಕಲ್ಚರಲ್ ಟ್ರಸ್ಟ್, ಬೀದರ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ʼಕಾಲಚಕ್ರʼ ನಾಟಕ ಪ್ರದರ್ಶನವನ್ನು ಆಯೋಜಿಸಿರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ʼಕಾಲಚಕ್ರ ನಾಟಕವು ಸಮಾಜದ ವಿವಿಧ ಮುಖಗಳನ್ನು ಅನಾವರಣಗೊಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇಂತಹ ನಾಟಕಗಳು ಯುವ ಜನತೆಗೆ ಉತ್ತಮ ಸಂದೇಶ ನೀಡುವುದರ ಜೊತೆಗೆ ಕನ್ನಡದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೂ ಸಹಕಾರಿಯಾಗುತ್ತವೆʼ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ʼಗಡಿ ಜಿಲ್ಲೆ ಬೀದರದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ಕಾಲಚಕ್ರ ನಾಟಕವು ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದ ನೈಜ ಸ್ಥಿತಿಗತಿಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಕೆಲಸ ಮಾಡುತ್ತಿದೆ. ಇಂದಿನ ಯುವಜನತೆ ರಂಗಭೂಮಿ ಹಾಗೂ ಜನಪದ ಕಲೆಯ ಕಡೆ ಹೆಚ್ಚು ಆಸಕ್ತಿ ತೋರಬೇಕಾದ ಅಗತ್ಯವಿದೆʼ ಎಂದು ಹೇಳಿದರು.
ಕರ್ನಾಟಕ ರಂಗಾಯಣ ನಿರ್ದೇಶಕರಾದ ಡಾ.ಸುಜಾತಾ ಜಂಗಮಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼರಂಗಭೂಮಿ ಎಂಬುದು ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜದ ಬದುಕು, ಸಂಸ್ಕೃತಿ ಹಾಗೂ ಜನ ಜೀವನದ ಕನ್ನಡಿಯಾಗಿದೆ. ಕಾಲಚಕ್ರ ನಾಟಕವು ಈಗಾಗಲೇ ಇಡೀ ರಾಜ್ಯದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದು, ಹಲವೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ವಿಶೇಷವಾಗಿ ಬಸವಕಲ್ಯಾಣದಲ್ಲಿ ನಡೆದ ಪ್ರದರ್ಶನದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಒಟ್ಟಾಗಿ ವೀಕ್ಷಣೆ ಮಾಡುವ ಮೂಲಕ ಈ ನಾಟಕ ಹೊಸ ಇತಿಹಾಸ ನಿರ್ಮಿಸಿದೆ. ಇದು ಕನ್ನಡ ರಂಗಭೂಮಿಯ ಶಕ್ತಿ ಹಾಗೂ ಜನರ ಕಲಾಭಿಮಾನಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಅವರು ಮಾತನಾಡಿ, ‘ಗಡಿ ಭಾಗಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಯುವ ಜನರಲ್ಲಿ ಕಲೆ, ಸಾಹಿತ್ಯ ಮತ್ತು ರಂಗಭೂಮಿಯ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ಕರ್ನಾಟಕ ರಂಗಾಯಣವು ಮುಂದಿನ ದಿನಗಳಲ್ಲಿಯೂ ಜನಮನ ಮುಟ್ಟುವ ನಾಟಕಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಲಿದೆ’ ಎಂದು ತಿಳಿಸಿದರು.

ನಾಟಕ ಆರಂಭಕ್ಕೂ ಮುನ್ನ ಕಲಾವಿದ ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಕನ್ನಡದ ಭಾವಗೀತೆಗಳು ಹಾಗೂ ಮನಮುಟ್ಟುವ ಹಾಡುಗಳ ಮೂಲಕ ತಂಡವು ಪ್ರೇಕ್ಷಕರ ಮನರಂಜನೆ ಮಾಡಿತು. ಬಳಿಕ ಪ್ರದರ್ಶನಗೊಂಡ ಕಾಲಚಕ್ರ ನಾಟಕವು ಸಾಮಾಜಿಕ ಬದುಕಿನ ವಿವಿಧ ಆಯಾಮಗಳನ್ನು ತೆರೆದಿಟ್ಟಿತು. ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.
ಇಂದು ಶುಕ್ರವಾರ ಕೂಡ ಬೀದರ್ ರಂಗಮಂದಿರದಲ್ಲಿ ʼಕಾಲಚಕ್ರʼ ನಾಟಕ ಪ್ರದರ್ಶನಗೊಳ್ಳಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉಚಿತವಾಗಿ ನಾಟಕ ವೀಕ್ಷಿಸಬೇಕೆಂದು ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ‘ಅಹಿಂದ’ ನಾಯಕನ ನಿರ್ಗಮನ
ರಂಗಾಯಣ ಕಲಬುರ್ಗಿ ಮಾಜಿ ನಿರ್ದೇಶಕ ಮಹೇಶ ವಿ, ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ್ ಅತಿವಾಳೆ, ಮಾತನಾಡಿದರು. ಹೋರಾಟಗಾರ ಮಾರುತಿ ಬೌದ್ದೆ, ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಎಂ.ಎಸ್.ಮನೋಹರ್, ಎಸ್.ಎಂ.ಜನವಾಡಕರ್, ಶಿವಕುಮಾರ್ ತುಂಗಾ ಮತ್ತಿತರರು ಉಪಸ್ಥಿತರಿದ್ದರು.




