ದೇವರಾಜ ಅರಸು ಹಾಕಿಕೊಟ್ಟ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿನ ಭದ್ರ ಬುನಾದಿಯ ಮೇಲೆ ಸಿದ್ದರಾಮಯ್ಯನವರು ಭವ್ಯ ಸೌಧವನ್ನೇ ನಿರ್ಮಿಸುವ ಅಪೂರ್ವ ಅವಕಾಶವಿತ್ತು. ಅದಕ್ಕೆ ಅಧಿಕಾರವೆಂಬ ಅಸ್ತ್ರವಿತ್ತು. ಪಕ್ಷದ, ಶಾಸಕರ, ಸಚಿವರ ಮತ್ತು ಹೈಕಮಾಂಡಿನ ಬೆಂಬಲವೂ ಇತ್ತು. ಆದರೆ, ಸಿದ್ದರಾಮಯ್ಯನವರ ನಿರಾಸಕ್ತಿ ಎಲ್ಲವನ್ನು ಮಣ್ಣುಗೂಡಿಸಿತು.
ಅತಿ ಹೆಚ್ಚು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು, ಇಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ, ಅಹಿಂದ ವರ್ಗ ಅನಾಥವಾಗಿದೆ. ಜನಸಮೂಹವನ್ನು ಪ್ರಭಾವಿಸಬಲ್ಲ ನಾಯಕನಿಂದ ವಂಚಿತವಾಗಿದೆ.
ರಾಜೀನಾಮೆ ಎನ್ನುವುದು, ಒಬ್ಬ ವ್ಯಕ್ತಿ ಒಂದು ಹುದ್ದೆಯಿಂದ ಕೆಳಗಿಳಿಯುವ, ಮತ್ತೊಬ್ಬ ಮೇಲೇರುವ ಪ್ರಕ್ರಿಯೆಯಂತೆ ಕಂಡರೂ, ರಾಜಕಾರಣದಲ್ಲಿ ಇಂಥದ್ದೆಲ್ಲ ಸಹಜ ಎನಿಸಿದರೂ, ಸಿದ್ದರಾಮಯ್ಯನವರ ವಿಚಾರದಲ್ಲಿ ಕೊಂಚ ಭಿನ್ನವಾಗಿದೆ. ಮೊದಲಿಗೆ ಸ್ವತಃ ಸಿದ್ದರಾಮಯ್ಯನವರೇ ಇದಕ್ಕೆ ಸಿದ್ಧರಾಗಿರಲಿಲ್ಲ. ಅದಕ್ಕೆ ಕಾರಣ ಸಿದ್ದರಾಮಯ್ಯನವರ ವ್ಯಕ್ತಿತ್ವ, ನಾಯಕತ್ವ ಮತ್ತು ಆಡಳಿತದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗಿದ್ದ ವಿಶ್ವಾಸ. ಜೊತೆಗೆ ಸೋನಿಯಾ, ರಾಹುಲ್ ಗಾಂಧಿಯವರೊಂದಿಗಿದ್ದ ಒಡನಾಟ. ಅಷ್ಟು ಸುಲಭವಾಗಿ ರಾಜೀನಾಮೆ ಕೇಳುವುದಿಲ್ಲ ಎಂಬುದು ಸಿದ್ದರಾಮಯ್ಯನವರ ಅಚಲ ನಂಬಿಕೆಯಾಗಿತ್ತು. ಹಾಗಾಗಿ ಇದು ಸ್ವತಃ ಸಿದ್ದರಾಮಯ್ಯನವರಿಗೆ ಶಾಕ್ ನೀಡುವ ಸಂಗತಿಯಾಗಿ ಮೌನಕ್ಕೆ ದೂಡಿತ್ತು.
ಇಂದು ಸಚಿವ ಸಂಪುಟ ಸಹದ್ಯೋಗಿಗಳೊಂದಿಗೆ ನಡೆದ ಬ್ರೇಕ್‌ಫಾಸ್ಟ್‌ನಲ್ಲಿ, ಡಿ.ಕೆ. ಶಿವಕುಮಾರ್ ಭಾಗಿಯಾಗಿ, ಸಿದ್ದರಾಮಯ್ಯನವರ ಕಾಲಿಗೆ ಎರಗಿದ್ದು, ಬೆಂಬಲ ಕೋರಿದ್ದು- ಸಿದ್ದರಾಮಯ್ಯನವರನ್ನು ಸಹಜಸ್ಥಿತಿಗೆ ಮರಳಿ ತಂದಿತ್ತು.
1983ರಿಂದ ರಾಜಕಾರಣದಲ್ಲಿರುವ ಸಿದ್ದರಾಮಯ್ಯನವರಿಗೆ ಇದೆಲ್ಲ ಸಹಜ ಎನಿಸಬಹುದು. ಆದರೆ, ಸಿದ್ದರಾಮಯ್ಯನವರನ್ನು ನಂಬಿದ ಅಹಿಂದ ವರ್ಗ, ಇದನ್ನು ಅಷ್ಟೇ ಸುಲಭವಾಗಿ ಸ್ವೀಕರಿಸುವುದಿಲ್ಲ. ಹಾಗಾಗಿ ರಾಜ್ಯದ ಬಹಳ ದೊಡ್ಡ ಸಂಖ್ಯೆಯಲ್ಲಿರುವ ಅಹಿಂದ ವರ್ಗಕ್ಕೆ ಇದು ಬೇರೆಯದೇ ಸಂದೇಶವನ್ನು ರವಾನಿಸುತ್ತದೆ. ನಾಯಕನ ನಿರ್ಗಮನದಿಂದ ‘ಅಹಿಂದ’ ವರ್ಗ ನಿಜಕ್ಕೂ ದಿಕ್ಕಿಲ್ಲದಂತಾಗುತ್ತದೆ.
70ರ ದಶಕದ ಹಿಂದಕ್ಕೆ ಕರ್ನಾಟಕದ ರಾಜಕಾರಣದಲ್ಲಿ ಬಲಾಢ್ಯ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರದೇ ಮೇಲುಗೈಯಾಗಿತ್ತು. ಅವರ ನಡುವೆಯೇ ಅಧಿಕಾರ ಹಂಚಿಕೆಯಾಗುತ್ತಿತ್ತು. ಆ ಬಿಗಿ ಹಿಡಿತದಿಂದ ಕರ್ನಾಟಕದ ರಾಜಕಾರಣವನ್ನು ಬಿಡಿಸಿದವರು; ದುರ್ಬಲರು, ದಮನಿತರು ಕೂಡ ರಾಜಕೀಯ ಅಧಿಕಾರ ಪಡೆಯಬೇಕೆಂಬ ಕನಸು ಕಂಡವರು ದೇವರಾಜ ಅರಸು. ಅರಸು, ಬರೀ ಕನಸು ಕಾಣಲಿಲ್ಲ, ಅಧಿಕಾರದಲ್ಲಿದ್ದಷ್ಟು ದಿನವೂ ಅದನ್ನು ಪ್ರಜ್ಞಾಪೂರ್ವಕವಾಗಿ ಜಾರಿಗೆ ತಂದರು. ಅದು ಕರ್ನಾಟಕದ ರಾಜಕಾರಣದಲ್ಲಿ ಬಹಳ ದೊಡ್ಡ ಬದಲಾವಣೆಗೆ ಕಾರಣವಾಯಿತು.
ಇದನ್ನು ಓದಿದ್ದೀರಾ?: ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಏರುತ್ತಲೇ ಇದೆ, ಸರ್ಕಾರವೇಕೆ ಸುಮ್ಮನಿದೆ?
ಅರಸು ಅಂದು ತೋರಿದ ಅಂಚಿನ ಜನರ ಬಗೆಗಿನ ಅಂತಃಕರಣದ ಫಲವಾಗಿಯೇ ಇಂದು ಆ ಸಮುದಾಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಂತಾಯಿತು. ಹಲವಾರು ಜನ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ, ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ಹತ್ತುವಂತೆ, ಸಚಿವರಾಗಿ ಕಾಯ್ದೆ-ಕಾನೂನು ರೂಪಿಸುವ ಮಹತ್ವದ ಪಾತ್ರ ವಹಿಸುವಂತಾಯಿತು. ಅದರಲ್ಲೂ ಹಿಂದುಳಿದ ವರ್ಗದಿಂದ ಬಂದ ಎಸ್.ಬಂಗಾರಪ್ಪ, ಎಂ. ವೀರಪ್ಪ ಮೊಯ್ಲಿ, ಧರಂ ಸಿಂಗ್ ಮತ್ತು ಸಿದ್ದರಾಮಯ್ಯನವರು- ರಾಜ್ಯದ ಅತ್ಯುನ್ನತ ಸ್ಥಾನವಾದ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವಂತಾಯಿತು. ಇದು ಅಂತಿಂಥ ಸಾಧನೆಯಲ್ಲ, ಇವತ್ತಿನವರೆಗೆ ಯಾರಿಗೂ ಸಾಧ್ಯವಾಗಿಲ್ಲ.
ದೇವರಾಜ ಅರಸು ಅವರು ರಾಜಕಾರಣದಿಂದ ನಿರ್ಗಮಿಸಿದ್ದು 1982ರಲ್ಲಿ. 1982ರಲ್ಲಿಯೇ ಸಿದ್ದರಾಮಯ್ಯನವರು ರಾಜಕಾರಣಕ್ಕೆ ಅಡಿಯಿಟ್ಟಿದ್ದರು. ಮೊದಲಿಗೆ ತಾಲೂಕು ಬೋರ್ಡ್ ಸದಸ್ಯರಾದರು. ನಂತರ 1983ರಲ್ಲಿ, ಭಾರತೀಯ ಲೋಕದಳ ಪಕ್ಷದಿಂದ, ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಆಗ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಿತ್ತು. ಅದು ಕೂಡ ದೇವರಾಜ ಅರಸು ಅವರ ಕೊಡುಗೆಯೇ ಆಗಿತ್ತು.
ಸಿದ್ದರಾಮಯ್ಯನವರು, ಅರಸು ಅವರ ಕೊಡುಗೆಗಳನ್ನು, ಅದರಿಂದಾದ ಬದಲಾವಣೆಗಳನ್ನು ಕಣ್ಣಾರೆ ಕಂಡಿದ್ದರು. ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್‌ರಂತಹ ಮಹಾನ್ ನಾಯಕರ ನಡುವೆ ಪಳಗಿದ್ದರು. ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. ರಾಜ್ಯ ರಾಜಕಾರಣದಲ್ಲಿ ಹೊಸ ಭರವಸೆ ಹುಟ್ಟಿಸಿದ್ದರು. ಅದಕ್ಕೆ ಪೂರಕವಾಗಿ ಅಹಿಂದ ಸಮುದಾಯ ಅವರ ಬೆನ್ನಿಗಿದ್ದು ಬೆಂಬಲಿಸಿತ್ತು. ಜೆಡಿಎಸ್‌ನಲ್ಲಿದ್ದಷ್ಟು ದಿನವೂ ಪಕ್ಷದ ಅಧ್ಯಕ್ಷ, ಸಚಿವ, ಉಪಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದರೆ; ಕಾಂಗ್ರೆಸ್ ಪಕ್ಷ ಸೇರಿದ ನಂತರ, ಪಕ್ಷ 17 ವರ್ಷಗಳ ಕಾಲ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಿತ್ತು. ಎರಡು ಬಾರಿ ವಿರೋಧ ಪಕ್ಷದ ನಾಯಕ ಹಾಗೂ ಎರಡು ಬಾರಿ ಮುಖ್ಯಮಂತ್ರಿಯನ್ನಾಗಿಸಿತ್ತು. ಅತ್ಯಂತ ಹೆಚ್ಚು ಅವಧಿ ಪೂರೈಸಿದ ಮುಖ್ಯಮಂತ್ರಿ ಎಂಬ ದಾಖಲೆಗೂ ಅವಕಾಶ ಮಾಡಿಕೊಟ್ಟಿತ್ತು. ಇಷ್ಟೆಲ್ಲ ಅವಕಾಶಗಳನ್ನು ಕಲ್ಪಿಸಿಕೊಟ್ಟ ಪಕ್ಷಗಳು ಮತ್ತು ರಾಜ್ಯದ ಜನತೆ ಸಿದ್ದರಾಮಯ್ಯನವರಿಂದ ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿತ್ತು.
ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದಾಗ- 2013ರಿಂದ 2018ರವರೆಗಿನ ಅವಧಿಯಲ್ಲಿ- ಡಿನೋಟಿಫಿಕೇಷನ್, ಲೋಕಾಯುಕ್ತ ರದ್ದು ಮಾಡಿದ್ದನ್ನು ಬಿಟ್ಟರೆ, ಜನ ಮೆಚ್ಚುವ ಆಡಳಿತವನ್ನೇ ಕೊಟ್ಟಿದ್ದರು. ಅಧಿಕಾರಕ್ಕೆ ಬರುತ್ತಿದ್ದಂತೆ ಅರಸು ಅವರಂತೆಯೇ 2014ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿಸಿದರು. ಪರಿಶಿಷ್ಟ ಜಾತಿ-ಪಂಗಡಗಳ ಅಭಿವೃದ್ಧಿಗಾಗಿ ಎಸ್ಸಿಎಸ್ಪಿ/ಟಿಎಸ್ಪಿ ಕಾಯಿದೆ ಜಾರಿಗೆ ತಂದರು. ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಿದರು. ಬಡ್ತಿ ಮೀಸಲಾತಿಗಳನ್ನು ತಂದರು. ಬಡವರಿಗೆ ಅಕ್ಕಿ ಕೊಟ್ಟು, ಅನ್ನರಾಮಯ್ಯ ಎನಿಸಿಕೊಂಡರು. ನುಡಿದಂತೆ ನಡೆದ ಸರ್ಕಾರ ಎನ್ನುವುದನ್ನು ಕೆಲಸಗಳ ಮೂಲಕ ಮಾಡಿ ತೋರಿಸಿದರು.
ಹಾಗಾಗಿ ಎರಡನೇ ಬಾರಿಗೆ, 2023ರಲ್ಲಿ ಮುಖ್ಯಮಂತ್ರಿಯಾದಾಗ- ನಾಡಿನ ಜನರ ನಿರೀಕ್ಷೆ ಬೆಟ್ಟದಷ್ಟಿತ್ತು. ಆ ನಿರೀಕ್ಷೆಗೆ ತಕ್ಕಂತೆ ಅಧಿಕಾರಕ್ಕೇರುತ್ತಿದ್ದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಆದರೆ, ಅವುಗಳಿಂದ ಆದ ಆರ್ಥಿಕ ಚಲನಶೀಲತೆಯನ್ನು, ಸಾಮಾಜಿಕ ಬದಲಾವಣೆಯನ್ನು ಮತ್ತು ಮಹಿಳಾ ಸಬಲೀಕರಣವನ್ನು- ನಮ್ಮ ಸಾಧನೆ ಎಂದು ಹೇಳಿಕೊಳ್ಳುವಲ್ಲಿ ಎಡವಿದರು. ಇಂದು ಬಿಜೆಪಿಯ ಮೋದಿಯವರೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಪ್ರೇರಣೆ ಪಡೆದು, ಇತರ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿದರೂ, ಇಲ್ಲಿ ಪಕ್ಷದ ಶಾಸಕರೇ ವ್ಯಂಗ್ಯವಾಡತೊಡಗಿದರು. ಇನ್ನು ಸಚಿವರಲ್ಲಿ ದಕ್ಷತೆ, ಭ್ರಷ್ಟಾಚಾರ ಮುಕ್ತ ಆಡಳಿತ ಎನ್ನುವುದು, ಹಿಂದಿನಂತಿರದಿದ್ದರೂ ತೊಂದರೆಯಿಲ್ಲ; ಬಿಜೆಪಿ ಸರ್ಕಾರಕ್ಕಿಂತ ಕಡಿಮೆಯಾಗಲಿಲ್ಲ.
ಜೊತೆಗೆ ಮುಡಾ ಹಗರಣ, ವಾಲ್ಮೀಕಿ ನಿಗಮದ ಅಕ್ರಮ, ಸಚಿವರ ರಾಜೀನಾಮೆ, ಕ್ರಿಕೆಟ್ ಕಾಲ್ತುಳಿತ- ಈ ವೈಫಲ್ಯಗಳ ಜೊತೆಗೆ, ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು, ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳುವುದರಲ್ಲಿಯೇ ಕಾಲ ಕಳೆದರು. ಅವರಷ್ಟೇ ಅಲ್ಲ, ಅವರ ಸಚಿವ ಸಂಪುಟ ಸದಸ್ಯರು ಕೂಡ ಅದಕ್ಕೆ ಸ್ವರ ಸೇರಿಸಿ, ಸಮಯ ವ್ಯರ್ಥ ಮಾಡಿದರು. ಸಚಿವ ರಾಜಣ್ಣರನ್ನು ಬಲಿ ಕೊಟ್ಟರು. ಜನರ ಆಶೋತ್ತರಗಳನ್ನು ಮರೆತರು.
ಎಸ್ಸಿಪಿ, ಟಿಎಸ್ಪಿ ಕಾಯ್ದೆಯ ಮೂಲಕ ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಬೇರೆಡೆಗೆ ವರ್ಗಾಯಿಸಿ, ಈ ಸರ್ಕಾರವನ್ನು ಅಸ್ತಿತ್ವಕ್ಕೆ ತಂದ ಸಮುದಾಯಗಳಿಗೆ ಸ್ಪಷ್ಟನೆ ನೀಡಿದೆ ಸುಮ್ಮನಾದರು. ಹಾಗೆಯೇ ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ, ದೃಢ ನಿರ್ಧಾರ ತಳೆಯದ ಸಿದ್ದರಾಮಯ್ಯನವರು, ಅಂಚಿನ ಜನರನ್ನು ವಂಚಿಸಿದರು. ಉಪಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ಪರ ಧ್ವನಿ ಎತ್ತದೆ, ವಂಶ ಪಾರಂಪರ್ಯ ರಾಜಕಾರಣಕ್ಕೆ ಮಣೆ ಹಾಕಿ ಮುಸ್ಲಿಮರಿಗೆ ದ್ರೋಹ ಬಗೆದರು.
ಇದನ್ನು ಓದಿದ್ದೀರಾ?: ಮೂರು ವರ್ಷ ಮುಗಿಸಿದ್ದೇ ಸರ್ಕಾರದ ಮಹಾನ್ ಸಾಧನೆ!
ಬಿಜೆಪಿ ಹಾಗೂ ಆರ್‍ಎಸ್ಎಸ್‌ನ ಕೋಮುವಾದಿ ಅಜೆಂಡಾವನ್ನು ಎದುರಿಸಲೆಂದೇ ಈ ರಾಜ್ಯದ ಅಲ್ಪಸಂಖ್ಯಾತರು, ದಲಿತರು, ಕೋಮುವಾದ ವಿರೋಧಿ ಮನೋಭಾವದ ಜನರು ಕಾಂಗ್ರೆಸ್ ಪಕ್ಷದ ಬೆನ್ನಿಗಿದ್ದು ಬೆಂಬಲಿಸಿದ್ದರು. ಆದರೆ, ಆ ವಿಚಾರದಲ್ಲಿ ಅಗತ್ಯವಿರುವ ತಾತ್ವಿಕ, ರಾಜಕೀಯ ನಿಲುವು ತಳೆಯುವಲ್ಲಿ ಸಿದ್ದರಾಮಯ್ಯನವರು ಸೋತರು. ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಅನುಕೂಲವಾಗುವಂತೆ, ಸೌಜನ್ಯ ಕೇಸು ಕಿಲುಬು ಹಿಡಿಯುವಂತೆ ವರ್ತಿಸಿದರು. ನಾಡಿನ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದರು.
ಅದಕ್ಕಿಂತಲೂ ಹೆಚ್ಚಾಗಿ, ದೇವರಾಜ ಅರಸು ಹಾಕಿಕೊಟ್ಟ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿನ ಭದ್ರ ಬುನಾದಿಯ ಮೇಲೆ ಸಿದ್ದರಾಮಯ್ಯನವರು ಭವ್ಯ ಸೌಧವನ್ನೇ ನಿರ್ಮಿಸುವ ಅಪೂರ್ವ ಅವಕಾಶವಿತ್ತು. ಅದಕ್ಕೆ ಅಧಿಕಾರವೆಂಬ ಅಸ್ತ್ರವಿತ್ತು. ಪಕ್ಷದ, ಶಾಸಕರ, ಸಚಿವರ ಮತ್ತು ಹೈಕಮಾಂಡಿನ ಬೆಂಬಲವೂ ಇತ್ತು. ಆದರೆ, ಸಿದ್ದರಾಮಯ್ಯನವರ ನಿರಾಸಕ್ತಿ ಎಲ್ಲವನ್ನು ಮಣ್ಣುಗೂಡಿಸಿತು. ಸಿದ್ದರಾಮಯ್ಯನವರನ್ನು ಪೊರೆದ, ಪೋಷಿಸಿದ ‘ಅಹಿಂದ’ ಸಮುದಾಯಗಳು, ಇಂದು ಅನಾಥವಾಗಿವೆ. ಸಾಮಾಜಿಕವಾಗಿ, ರಾಜಕೀಯವಾಗಿ ದಶಕದಷ್ಟು ಹಿಂದಕ್ಕೆ ಜಾರಲಿವೆ. ಅಹಿಂದ ಕೊಂದ ನಾಯಕ ಎಂಬ ಪಟ್ಟಕ್ಕೆ ಸಿದ್ದರಾಮಯ್ಯನವರನ್ನು ಗುರಿ ಮಾಡಲಿವೆ.
ಅಧಿಕಾರದಿಂದ ನಿರ್ಗಮಿಸುತ್ತಿರುವ ಒಬ್ಬ ಹಿರಿಯ ನಾಯಕನಿಗೆ ಹೀಗೆ ಪಟ್ಟ ಕಟ್ಟುವುದು, ಆರೋಪಿಸುವುದು ಸೂಕ್ತವಲ್ಲ. ಆದರೆ, ಆ ಅಂಚಿನ ಸಮುದಾಯಗಳ ಸಂಕಟ, ಸ್ಥಿತಿಗತಿ, ತಬ್ಬಲಿತನ, ಅರಸು ಅಂತಹ ಮತ್ತೊಬ್ಬ ನಾಯಕನಿಗಾಗಿ ಕಾಯುವುದನ್ನು ಕಂಡರೆ- ಹೀಗೆ ಹೇಳದೆ ವಿಧಿಯಿಲ್ಲ. ಕ್ಷಮೆ ಇರಲಿ ಸಿದ್ದರಾಮಯ್ಯನವರೇ…




