ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಇಂದು(ಶುಕ್ರವಾರ) ಬೆಳಗಿನ ಜಾವ ನಿಧನರಾಗಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವೆಂಕಟರಮಣಪ್ಪ ಅವರು ನಾಲ್ಕು ಬಾರಿ ಪಾವಗಡ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಒಮ್ಮೆ ಪಕ್ಷೇತರ ಆಭ್ಯರ್ಥಿಯಾಗಿ ಗೆದ್ದಿದ್ದ ವೆಂಕಟರಮಣಪ್ಪ ಸರ್ಕಾರ ಉಳಿಯಲು ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಅವರು 2008ರ ಅವಧಿಯಲ್ಲಿ ರೇಷ್ಮೆ ಮತ್ತು ಸಣ್ಣ ಕೈಗಾರಿಕಾ ಸಚಿವರಾಗಿ, 2018ರಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಮಗ ಶಾಸಕ ವೆಂಕಟೇಶ್ ಸೇರಿದಂತೆ ಕುಟಂಬವನ್ನು ಅಗಲಿದ್ದಾರೆ. ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಹೊಂದಿದ್ದರು ಎನ್ನಲಾಗುತ್ತಿದೆ.
ಪಟ್ಟಣದ ಗುರುಭವನದಲ್ಲಿ ಮಧ್ಯಾಹ್ನ ಮೃತರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೂಡಿಗೆರೆ: ವಿದ್ಯುತ್ ತಗುಲಿ ಮಗು ಮೃತ್ಯು
ಮಾಜಿ ಸಚಿವ ಕೆ ಎನ್ ರಾಜಣ್ಣ ಮಾತನಾಡಿ, “ಪಾವಗಡದ ಹಿರಿಯ ನಾಯಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಆತ್ಮೀಯ ಸ್ನೇಹಿತರಾದ ವೆಂಕಟರಮಣಪ್ಪ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಭಗವಂತನು ನೋವು ಬರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ” ಎಂದು ನಮನ ಸಲ್ಲಿಸಿದ್ದಾರೆ. ಹಲವು ರಾಜಕೀಯ ನಾಯಕರು, ಗಣ್ಯರು ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.




