ಚಾಕೋಲೆಟ್ ಕೊಡಿಸುವುದಾಗಿ ನಂಬಿಸಿ 12 ವರ್ಷದ ಬಾಲಕಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಘಟನೆ ಭೀ.ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ 30 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಕ್ಟೋಬರ್ 27ರಂದು ಮಧ್ಯಾಹ್ನ ಬಾಲಕಿ ಕಾಣಿಸದ ಹಿನ್ನೆಲೆಯಲ್ಲಿ ಆಕೆಯ ತಾಯಿ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸ್ಥಳೀಯರೊಬ್ಬರು ಬಾಲಕಿ ಆರೋಪಿಯ ಮನೆ ಕಡೆಗೆ ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ತಾಯಿ, ಸ್ಥಳೀಯರೊಂದಿಗೆ ಆರೋಪಿಯ ಮನೆಗೆ ತೆರಳಿದಾಗ ಬಾಲಕಿ ಅಲ್ಲಿ ಇರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಬಾಲಕಿಯನ್ನು ವಿಚಾರಿಸಿದಾಗ, ಚಾಕೋಲೆಟ್ ನೀಡುವುದಾಗಿ ಹೇಳಿ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಮಗಳ ಹೇಳಿಕೆಯಿಂದ ಆತಂಕಕ್ಕೊಳಗಾದ ತಾಯಿ, ಸ್ಥಳೀಯರ ಧೈರ್ಯದಿಂದ ಭೀ.ಗುಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ವಿರುದ್ಧ ಜನಾಕ್ರೋಶ; ಸಮಸ್ಯೆ ಪರಿಹಾರಕ್ಕೆ ಕಲ್ಯಾಣ ಜನಪರ ವೇದಿಕೆ ಆಗ್ರಹ
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ. ಅಪ್ರಾಪ್ತ ಬಾಲಕಿಯರ ಸುರಕ್ಷತೆ ಹಾಗೂ ಮಕ್ಕಳ ವಿರುದ್ಧದ ಅಪರಾಧಗಳ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಇಂತಹ ಘಟನೆಗಳು ಮತ್ತೊಮ್ಮೆ ಎತ್ತಿ ತೋರಿಸಿವೆ.





