ಬೀದರ್ ಜಿಲ್ಲೆಯಲ್ಲಿನ ಪ್ರಸ್ತುತ ಬರಗಾಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಜಾರಿಯಲ್ಲಿರುವ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆಯಡಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದ್ದು, ಆಸಕ್ತರು ತಮ್ಮ ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಿ ಯೋಜನೆಯ ಸೌಲಭ್ಯವನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ಯೋಜನೆಯಡಿ ಕೇವಲ ಉದ್ಯೋಗ ನೀಡುವುದಷ್ಟೇ ಅಲ್ಲದೆ, ಗ್ರಾಮೀಣ ಭಾಗದಲ್ಲಿ ಶಾಶ್ವತ ಮತ್ತು ಬಾಳಿಕೆ ಬರುವ ಮೂಲಸೌಕರ್ಯಗಳ ನಿರ್ಮಾಣಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಫಲಾನುಭವಿಗಳು ತಮ್ಮ ಜೀವಿತಾವಧಿಯಲ್ಲಿ ₹5 ಲಕ್ಷದವರೆಗೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವ ಅವಕಾಶವಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಮೋದಿತ ಕಾಮಗಾರಿಗಳಲ್ಲಿ ಈಗಾಗಲೇ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ವೈಯಕ್ತಿಕ ಕಾಮಗಾರಿಗಳಲ್ಲಿ ಜಾನುವಾರು ಶೆಡ್, ಎರೆಹುಳು ತೊಟ್ಟಿ ಘಟಕ, ತೋಟಗಾರಿಕೆ ಪ್ರದೇಶ ವಿಸ್ತರಣೆ, ತೆರೆದ ಬಾವಿ, ಕೃಷಿ ಹೊಂಡ (ಫಾರ್ಮ್ ಪಾಂಡ್) ಸೇರಿದಂತೆ ಹಲವು ಕಾಮಗಾರಿಗಳಿವೆ.
ಸಮುದಾಯ ಕಾಮಗಾರಿಗಳಲ್ಲಿ ಬರಗಾಲ ನಿಯಂತ್ರಣ ಕಾಮಗಾರಿಗಳು, ಮಣ್ಣಿನ ಚೆಕ್ ಡ್ಯಾಂ, ಮುಖ್ಯ ಕಾಲುವೆ ನಿರ್ಮಾಣ, ಪ್ರವಾಹ ತಿರುವು ಚರಂಡಿ ನಿರ್ಮಾಣ, ಸಮುದಾಯ ಮೆಟ್ಟಿಲು ಬಾವಿ ಪುನಶ್ಚೇತನ, ಜಲ ಕೊಯ್ಲು ಹೊಂಡ ನಿರ್ಮಾಣ, ನೀರಾವರಿ ಬಾವಿ ನಿರ್ಮಾಣ, ಕ್ರಾಸ್ ಡ್ರೈನೇಜ್ ಕಾಮಗಾರಿಗಳು, ಸರ್ಕಾರಿ ಶಾಲೆಗಳ ಕಂಪೌಂಡ್ ಗೋಡೆ, ಅಡುಗೆ ಕೋಣೆ, ಶೌಚಾಲಯ ನಿರ್ಮಾಣ ಹಾಗೂ ದುರಸ್ತಿ, ಆಟದ ಮೈದಾನ ಅಭಿವೃದ್ಧಿ, ಸಮುದಾಯ ಸ್ಮಶಾನ ನಿರ್ಮಾಣ ಸೇರಿದಂತೆ ವಿವಿಧ ಅನುಮೋದಿತ ಕಾಮಗಾರಿಗಳಲ್ಲಿ ಸ್ಥಳೀಯರು ಕೆಲಸ ಮಾಡಿ ಯೋಜನೆಯ ಲಾಭ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಸೋನಂ ವಾಂಗ್ಚೂಕ್ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲು ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಮನವಿ
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬಹುದು. ಅಲ್ಲದೆ, ಉಚಿತ ಸಹಾಯವಾಣಿ ಸಂಖ್ಯೆ: 8277506000 ಗೆ ಕರೆ ಮಾಡುವ ಮೂಲಕವೂ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




