ನಗರದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಯ ಸಾವಿಗೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ ಎಂದು ದಲಿತ ಸಂಘರ್ಷ ಸಮಿತಿ ಭೀಮಮಾರ್ಗ (ರಿ) ಆರೋಪಿಸಿದೆ.
ವಸತಿ ನಿಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಅಧಿಕಾರಿಗಳು ರಾಜಕಾರಣಿಗಳ ಹಾಗೂ ಅವರ ಹಿಂಬಾಲಕರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಮಧ್ಯರಾತ್ರಿ ಸುಮಾರು 2 ಗಂಟೆಗೆ ವಿದ್ಯಾರ್ಥಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನ್, ಜಂಟಿ ನಿರ್ದೇಶಕ ಹಾಗೂ ಸಹಾಯಕ ನಿರ್ದೇಶಕರನ್ನು ಕೂಡಲೇ ಅಮಾನತುಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಒಂದು ಎಕರೆ ಭೂಮಿ ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಸರ್ಕಾರಿ ಶಾಲೆಗಳನ್ನು ಖಾಸಗಿಯವರೊಂದಿಗೆ ಜೋಡಿಸುವ ಯೋಜನೆಗೆ ಎಸ್‌ಎಫ್‌ಐ ತೀವ್ರ ವಿರೋಧ
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಕೈಲಾಸ ದೊಡ್ಡಮನಿ, ಮಲ್ಲಿಕಾರ್ಜುನ ಬನಸೋಡೆ, ಶಿವಕುಮಾರ ಬಂದಗೆ, ವಿಜಯಕುಮಾರ ಕೌಲಗಿ, ಮಹಾಂತೇಶ ಮಹಾಂತನೂರ, ಡಾ. ಕಾಶೀನಾಥ ಊಡಗಿ, ಸುನೀತಾ ನಂದೂರಕರ್, ಮಾರುತಿ ತೇಗಲತಿಪ್ಪಿ, ರಾಹುಲ್ ಹಾಗರಗಿ, ಅನುರಾಧಾ ಕಾಂಬಳೆ, ಅಮರನಾಥ ಪಟ್ನಾಯಕ್, ಸೋಮಶೇಖರ ವಠಾರ, ಸಿದ್ಧಾರ್ಥ ಗಿರಿ ಹಾಗೂ ಭಾರತ ಸಿಂಧೆ ಉಪಸ್ಥಿತರಿದ್ದರು.





