ದೇಶದ ರೈತರಿಗೆ ಮಾರಕವಾದ ಕಾನೂನು ರದ್ದು ಮಾಡಲು ಈ ಹಿಂದೆ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯನವರು ನಮ್ಮ ಹೋರಾಟಕ್ಕೆ ಬೆಂಬಲಿಸಿ ಭಾಗವಹಿಸಿದ್ದರು. ಆದರೆ, ಪ್ರಸ್ತುತ ಸಿದ್ದರಾಮಯ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದರು
ಈ ಕುರಿತು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ರೈತರ ಭೂಮಿಯನ್ನು ವ್ಯಾಪಾರೀಕರಣ ಮಾಡುವ ಉದ್ದೇಶಕ್ಕಾಗಿ ರಾಜ್ಯದಲ್ಲಿರುವ ವಿಷಕಾರಿ ಕೃಷಿ ಕಾನೂನು ರದ್ದು ಮಾಡಬೇಕು. ಭೂಸುಧಾರಣಾ 1961ರ ಕಾಯ್ದೆ ರದ್ದುಪಡಿಸಿ 2020ರ ಕಾಯ್ದೆ ಜಾರಿಗೆ ಬಂದ ಮೇಲೆ ರೈತರಿಗೆ ಕೃಷಿ ಭೂಮಿ ಕೈತಪ್ಪಿ ಹೋಗುತ್ತಿದೆ. ಇದರಿಂದ ರಾಜ್ಯ ಸರ್ಕಾರ ಖಜಾನೆಗೆ ನೋಂದಣಿ ಶುಲ್ಕ 25 ಸಾವಿರದಿಂದ 30 ಸಾವಿರ ಕೋಟಿಗೆ ತಲುಪುತ್ತಿದೆ. ಅದ್ದರಿಂದ ರಾಜ್ಯ ಸರ್ಕಾರ ಹಣಕ್ಕೆ ಜೋತು ಬಿದ್ದಿದೆ” ಎಂದು ಕಿಡಿಕಾರಿದರು.
“2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಜಾರಿಗೆ ತಂದಾಗ ರೈತರೊಂದಿಗೆ ಧರಣಿ ನಡೆಸಿದ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಈ ಕಾಯ್ದೆ ವಿರೋಧಿಸಿದರು. ಇಡೀ ದೇಶದಲ್ಲಿ ಬಿಜೆಪಿ ತಂದಿರುವ ಕೃಷಿ ಕಾಯ್ದೆ ವಾಪಸ್ ಪಡೆಯಲಾಗಿದೆ. ಆದರೆ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕೃಷಿ ಕಾಯ್ದೆ ಜಾರಿಗೆ ತಂದಿದೆ. ಆಗ ರಾಜ್ಯದಲ್ಲಿ ಕೃಷಿ ಕಾಯ್ದೆ ರದ್ದಾಗಲೆಂದು ನಡೆದ ರೈತರ ಚಳವಳಿಗಳಿಗೆ ಕಾಂಗ್ರೆಸ್ ಬೆಂಬಲಿಸಿತು. ಅಧಿಕಾರಕ್ಕೆ ಬರುವ ಮುನ್ನ ಈ ಕಾಯ್ದೆ ರದ್ದುಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಅದನ್ನು ರದ್ದುಗೊಳಿಸದೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ” ಎಂದರು.
ಓಟಿಗಾಗಿ ಗ್ಯಾರಂಟಿ:
“ರಾಜ್ಯ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಕೇವಲ ಓಟಿಗಾಗಿ ಗ್ಯಾರಂಟಿ ಜಾರಿಗೆ ತಂದಿದೆ. ಇವರಿಗೆ ರೈತರ ಅಭಿವೃದ್ಧಿ ಬಗ್ಗೆ, ಸಾಮಾನ್ಯ ಜನರ ಉದ್ಧಾರ ಬೇಕಾಗಿಲ್ಲ.ರಾಜ್ಯ ಸರ್ಕಾರ ರೈತರ ಬಾಯಿಗೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ” ಎಂದು ಕೋಡಿಹಳ್ಳಿ ಆಕ್ಷೇಪಿಸಿದರು.
ನ.22ರಂದು ಹೈದರಾಬಾದ್‌ನಲ್ಲಿ ಧರಣಿ:
“ರಾಜ್ಯದಲ್ಲಿರುವ ರೈತ ವಿರೋಧಿ ಕಾನೂನು ಬಗ್ಗೆ ಬೇರೆ ರಾಜ್ಯದ ರೈತರಿಗೆ ತಿಳಿಸಿ ಅರಿವು ಮೂಡಿಸಲು ಪಕ್ಕದ ತೆಲಂಗಾಣ ರಾಜ್ಯದ ಹೈದ್ರಾಬಾದ್‌ನ ಇಂದಿರಾ ಪಾರ್ಕ್‌ನಲ್ಲಿ ನ.22ರಂದು ಪ್ರತಿಭಟನೆ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಬರುವ ಬೆಳಗಾವಿ ಅಧಿವೇಶನದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ
ಪತ್ರಿಕಾ ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ದಯಾನಂದ ಸ್ವಾಮಿ ಸಿರ್ಸಿ ಹಾಗೂ ಮಲ್ಲಿಕಾರ್ಜುನ ಚಕ್ಕಿ, ಶ್ರೀಮಂತ ಮಹಾದೇವ ನಾಗುರೆ ಸೇರಿದಂತೆ ಇತರರಿದ್ದರು.