ಕರ್ನಾಟಕದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ರಜಪೂತ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ತಕ್ಷಣವೇ ರಜಪೂತ ಅಭಿವೃದ್ಧಿ ನಿಗಮ ಮಂಡಳಿಯನ್ನು ಸ್ಥಾಪಿಸಬೇಕೆಂದು ರಜಪೂರ ಸಮಾಜ ಆಗ್ರಹಿಸಿದೆ.
ಹುಮನಾಬಾದ್ ತಾಲೂಕು ರಜಪೂತ ಸಮಾಜದ ವತಿಯಿಂದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಹೆಸರಿಗೆ ಬರೆದ ಮನವಿಯನ್ನು ಹುಮನಾಬಾದ್ ತಹಶೀಲ್ದಾರರ್ ಅವರಿಗೆ ಸಲ್ಲಿಸಿದರು.
ಸಮಾಜದ ಮುಖಂಡರು ಮಾತನಾಡಿ, “ರಾಜ್ಯದಲ್ಲಿ ರಜಪೂತ ಸಮುದಾಯವು ಗಮನಾರ್ಹ ಜನಸಂಖ್ಯೆಯನ್ನು ಹೊಂದಿದ್ದರೂ, ರಾಜಕೀಯ ಮತ್ತು ಆರ್ಥಿಕ ಪ್ರಾತಿನಿಧ್ಯದಿಂದ ವಂಚಿತವಾಗಿದೆ. ಸಮುದಾಯದ ಬಡ ಕುಟುಂಬಗಳು, ಕೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ. ನಮ್ಮ ಸಮಾಜದ ಯುವಕರಿಗೆ ಉದ್ಯೋಗಾವಕಾಶ ಹಾಗೂ ಉನ್ನತ ಶಿಕ್ಷಣಕ್ಕೆ ನೆರವು ನೀಡಲು ಪ್ರತ್ಯೇಕ ನಿಗಮದ ಅಗತ್ಯತೆ ಹೆಚ್ಚಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರವು ಇತರೆ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನಿಗಮಗಳನ್ನು ಸ್ಥಾಪಿಸಿರುವ ಮಾದರಿಯಲ್ಲೇ, ರಜಪೂತ ಸಮಾಜದ ಕಲ್ಯಾಣಕ್ಕಾಗಿಯೂ ವಿಶೇಷ ಅನುದಾನದೊಂದಿಗೆ ನಿಗಮ ಸ್ಥಾಪಿಸಬೇಕು. ಹಿಂದುಳಿದ ರಜಪೂತ ಸಮುದಾಯಕ್ಕೆ ನ್ಯಾಯ ಒದಗಿಸಲು ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ನಿಯೋಗದ ಪ್ರಮುಖರು ಎಚ್ಚರಿಸಿದ್ದಾರೆ.
ಮನವಿ ಸ್ವೀಕರಿಸಿದ ತಹಶೀಲ್ದಾರರು, ಈ ಮನವಿಯನ್ನು ಸರ್ಕಾರದ ಗಮನಕ್ಕೆ ತರಲು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಕಚೇರಿಗೆ ತಕ್ಷಣವೇ ರವಾನಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ : ಬೀದರ್ | ಗೂಡ್ಸ್ ವಾಹನ-ಕಾರು ಡಿಕ್ಕಿ : ಓರ್ವ ಯುವಕ ಸಾವು
ಹುಮನಾಬಾದ್ ತಾಲೂಕು ರಜಪೂತ ಸಮಾಜದ ರಾಮಲಾಲ್ ಸಿಂಗ್, ಪ್ರಶಾಂತ್ ಠಾಕೂರ್ ವರವಟ್ಟಿ (ಕೆ), ಕಲಾವತಿ, ಮಹಾದೇವ್ ಠಾಕೂರ್, ಗೋವಿಂದ್ ಸಿಂಗ್, ಅಮರ್ ಸಿಂಗ್, ಗಣೇಶ್ ಹಜಾರೆ, ಮದನ್ ಸಿಂಗ್, ಮಹೇಶ ಹಜಾರೆ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಪದಾಧಿಕಾರಿಗಳು, ಹಿರಿಯ ಮುಖಂಡರು ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.




