ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿದ್ದು, ನಿರಂತರ ಮಳೆಯ ಪರಿಣಾಮ ಜಿಲ್ಲೆಯ ಹಲವು ಭಾಗಗಳಲ್ಲಿ ಭೂಕುಸಿತ, ಮರ ಉರುಳುವಿಕೆ ಹಾಗೂ ಕಡಲ ಕೊರೆತದ ಘಟನೆಗಳು ವರದಿಯಾಗಿವೆ. ದೇವಿಮನೆ ಘಟ್ಟದಲ್ಲಿ ಗುಡ್ಡದ ಮಣ್ಣು ಜಾರಿದ್ದು, ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದರೆ, ಅಂಕೋಲ ತಾಲೂಕಿನ ಹಾರವಾಡ ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರದಿಂದ ತಡೆಗೋಡೆಯ ಒಂದು ಭಾಗ ಹಾನಿಗೊಳಗಾಗಿದೆ.
ಕುಮಟಾ–ಶಿರಸಿ ರಾಷ್ಟ್ರೀಯ ಹೆದ್ದಾರಿ 766Eರ ದೇವಿಮನೆ ಘಟ್ಟದ ಸಮೀಪ ಗುಡ್ಡದ ಒಂದು ಭಾಗ ಜಾರಿದ ಪರಿಣಾಮ ಮರ ರಸ್ತೆ ಮಧ್ಯೆ ಬಿದ್ದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಾಹಿತಿ ತಿಳಿಯುತ್ತಿದ್ದಂತೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಂಕೋಲಾ | ನಾಡಬಾಂಬ್ ಪ್ರಕರಣ ಭೇದಿಸಿದ ಪೋಲಿಸರು; ಮೂವರು ಬಂಧನ, ಜೀವಂತ ಬಾಂಬ್ ವಶ
ಇದೇ ವೇಳೆ ನಿರಂತರ ಮಳೆಯಿಂದ ಕುಮಟಾ ತಾಲೂಕಿನ ಮೂರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಮಚಂದ್ರ ಪಿ. ಭಟ್ ಅವರ ಮನೆಯ ಮೇಲ್ಭಾಗದ ಧರೆ ಕುಸಿದು ಮನೆ ಹಾಗೂ ಸಮೀಪದ ಬಾವಿಯ ಮೇಲೆ ಬಿದ್ದಿದೆ. ಘಟನೆಯಿಂದ ಮನೆಯ ಕಟ್ಟಡಕ್ಕೆ ಹಾನಿಯಾಗಿದ್ದು, ಸುಮಾರು ₹40 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿರುವುದಾಗಿ ಪ್ರಾಥಮಿಕ ಅಂದಾಜು ಮಾಡಲಾಗಿದೆ.
ಘಟನೆ ವೇಳೆ ಮನೆಯಲ್ಲಿದ್ದವರು ಸುರಕ್ಷಿತರಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ, ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ಕಡಲ ಕೊರೆತ ಆರಂಭವಾಗಿದೆ.
ಅಂಕೋಲ ತಾಲೂಕಿನ ಹಾರವಾಡ ಕಡಲತೀರದಲ್ಲಿ ಅಲೆಗಳ ಹೊಡೆತಕ್ಕೆ ರಕ್ಷಣಾ ತಡೆಗೋಡೆಯ ಒಂದು ಭಾಗ ಹಾನಿಗೊಳಗಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಕಳೆದ ವರ್ಷ ಇದೇ ಪ್ರದೇಶದಲ್ಲಿ ಕಡಲ ಕೊರೆತದಿಂದ ಮನೆಗಳು ಹಾಗೂ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದ ಘಟನೆ ಇನ್ನೂ ಜನರ ನೆನಪಿನಲ್ಲಿದೆ. ಈ ಬಾರಿಯೂ ಮುಂಗಾರು ಆರಂಭದಲ್ಲೇ ಅಲೆಗಳ ತೀವ್ರತೆ ಹೆಚ್ಚಿರುವುದರಿಂದ ಕರಾವಳಿ ನಿವಾಸಿಗಳು ಆತಂಕದಲ್ಲಿದ್ದಾರೆ.
ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಭಾರೀ ಮಳೆಯ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಗುಡ್ಡ ಪ್ರದೇಶಗಳಲ್ಲಿ ಭೂಕುಸಿತ, ಮರ ಉರುಳುವಿಕೆ ಮತ್ತು ಕರಾವಳಿ ಭಾಗಗಳಲ್ಲಿ ಕಡಲ ಕೊರೆತದ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ವಿಶೇಷವಾಗಿ ಘಟ್ಟ ಪ್ರದೇಶಗಳಲ್ಲಿ ಅನಗತ್ಯ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವುದು, ವಾಹನ ಚಾಲನೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಹಾಗೂ ಸಮುದ್ರ ತೀರಗಳಿಗೆ ತೆರಳದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.




