ಎರಡು ದಿನ ಶೋಧಕಾರ್ಯ ನಡೆಸಿದರೂ ಮಾಂಜ್ರಾ ನದಿಯಲ್ಲಿ ಈಜಲು ಹೋದ ಯುವಕನ ಪತ್ತೆಯಾಗದ ಹಿನ್ನೆಲೆ ಗ್ರಾಮಸ್ಥರು ಜಿಲ್ಲಾಡಳಿತ ವಿರುದ್ಧ ದಿಢೀರನೆ ಪ್ರತಿಭಟನೆ ನಡೆಸಿದರು
ಕಮಲನಗರ ತಾಲೂಕಿನ ಬಳತ(ಬಿ) ಗ್ರಾಮದ ಹೊರವಲಯದ ಮಾಂಜ್ರಾ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಬಳತ (ಬಿ) ಗ್ರಾಮದ ಯುವರಾಜ ಚಿದ್ರೆ (28) ನೀರುಪಾಲಾದ ಘಟನೆ ನಡೆಯಿತು.
ಯುವಕನ ಪತ್ತೆಗಾಗಿ ನಿನ್ನೆ ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿಸಿದರು. ಏ.10 ರಂದು ಬೆಳಗ್ಗೆ ಕಲಬುರಗಿಯಿಂದ ಎಸ್‌ಡಿಆರ್‌ಎಫ್ ತಂಡ ಆಗಮಿಸಿ ಇಡೀ ದಿನ ತೀವ್ರ ಶೋಧ ಕಾರ್ಯ ನಡೆಸಿದರೂ ಯುವಕನ ಸುಳಿವು ಸಿಗಲಿಲ್ಲ.
ಎರಡು ದಿನ ಕಳೆದರೂ ಯುವಕನ ಪತ್ತೆಯಾಗದ ಹಿನ್ನೆಲೆ ಯುವಕನ ಕುಟುಂಬಸ್ಥರು, ಗ್ರಾಮಸ್ಥರು ಹೋರಾಟಗಾರರು ಗ್ರಾಮದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ದಿಢೀರನೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಕೂಡಲೇ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಸೇರಿದಂತೆ ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು.
ಎಸ್ ಡಿಆರ್‌ಎಫ್ ತಂಡದವರು ಯುವಕನ ಪತ್ತೆಗಾಗಿ ಶತಪ್ರಯತ್ನ ನಡೆಸಿದರೂ ಸುಳಿವು ಸಿಗಲಿಲ್ಲ. ಅವರ ಬಳಿ ಕ್ಯಾಮೆರಾ ಸೇರಿದಂತೆ ಅಗತ್ಯ ಸಲಕರಣೆಗಳ ಕೊರತೆ ಕಾಡುತ್ತಿದೆ. ಇಷ್ಟಾದರೂ ಜಿಲ್ಲಾಡಳಿತ ಯುವಕನ ಪತ್ತೆಗೆ ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯವಹಿಸಿದೆ ಎಂದು ದೂರಿದರು.
ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಏ.11ರ ಬೆಳಿಗ್ಗೆ ತನಕ ಯುವಕನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬೀದರ್ | ವರ್ಷಗಳೇ ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಸಾರ್ವಜನಿಕ ಗ್ರಂಥಾಲಯಗಳು!
ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರರಾದ ರಾಹುಲ್ ಖಂದಾರೆ, ಸುಭಾಷ್ ಲಾಧಾ, ಶಿವಮೂರ್ತಿ ಸುಬಾನೆ, ಚರಣ ಆಣದೂರೆ, ಗಣಪತಿ ವಾಸುದೇವ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.




