ಗ್ರಂಥಾಲಯಗಳು ಕೇವಲ ಕಟ್ಟಡಗಳಲ್ಲ, ಅವುಗಳು ಜ್ಞಾನದ ದೀಪಗಳು ಯುವಜನರ ಮನಸ್ಸನ್ನು ಬೆಳಗುವ ಕೇಂದ್ರಗಳು. ಅವುಗಳಿಗೆ ಬೀಗ ಹಾಕಿ ಇಡುವುದು ಸಮಾಜದ ಬೆಳವಣಿಗೆಗೆ ತಡೆಯೊಡ್ಡುವಂತಹ ಕ್ರಮ. ಈ ಕಟ್ಟಡಗಳನ್ನು ತ್ವರಿತವಾಗಿ ಉದ್ಘಾಟಿಸಿ, ಪುಸ್ತಕಗಳನ್ನು ಸಂಗ್ರಹಿಸಿ, ಓದುಗರಿಗೆ ಅನುಕೂಲವಾಗುವಂತೆ ಸಜ್ಜುಗೊಳಿಸಬೇಕು. ಇಲ್ಲದಿದ್ದರೆ, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ನಡೆಯುವ ಈ ಬಗೆಯ ಜನ-ವಿರೋಧಿ ಕ್ರಮಗಳು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತವೆ.
ಓದುಗರಿಗೆ ಸುಸಜ್ಜಿತ ಗ್ರಂಥಾಲಯ ಇರಬೇಕೆಂಬ ಮಹತ್ವದ ಉದ್ದೇಶದಿಂದ ತಾಲೂಕು ಕೇಂದ್ರಗಳಲ್ಲಿ ಲಕ್ಷಾಂತರ ವೆಚ್ಚದಲ್ಲಿ ನೂತನ ಗ್ರಂಥಾಲಯ ಕಟ್ಟಡಗಳು ನಿರ್ಮಿಸಲಾಗಿದೆ. ಆದರೆ, ಹೊಸ ಗ್ರಂಥಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಗ್ರಂಥಾಲಯಗಳ ಉದ್ಘಾಟನೆಗೆ ಮುಹೂರ್ತ ನಿಗದಿಯಾಗದಿರುವುದು ಜನರಲ್ಲಿ ಮತ್ತು ಪುಸ್ತಕ ಪ್ರೇಮಿಗಳಿಗೆ ಬೇಸರವನ್ನುಂಟುಮಾಡಿದೆ.
ಹೌದು, ಜಿಲ್ಲೆಯ ಔರಾದ್, ಕಮಲನಗರ ಹಾಗೂ ಹುಲಸೂರ ತಾಲೂಕು ಕೇಂದ್ರಗಳಲ್ಲಿ ನಿರ್ಮಾಣಗೊಂಡು, ಉದ್ಘಾಟನೆಗೆ ಸಿದ್ಧಗೊಂಡ ಗ್ರಂಥಾಲಯಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ವೆಚ್ಚದಿಂದ ನಿರ್ಮಿಸಲಾದ ಗ್ರಂಥಾಲಯ ಕಟ್ಟಡಗಳು ಬಳಕೆಯಾಗದೆ ಹಾಳಾಗುತ್ತಿವೆ. ಗ್ರಂಥಾಲಯಗಳು ಯಾವಾಗ ಬಾಗಿಲು ತೆರೆಯಬಹುದೆಂಬ ನಿರೀಕ್ಷೆಯೊಂದಿಗೆ ಓದುಗರು ನಿತ್ಯ ಕಣ್ಣು ಹಾಯಿಸುವಂತಾಗಿದೆ.
ಪೂರ್ಣಗೊಂಡರೂ ಉದ್ಘಾಟನೆ ಇಲ್ಲ ಯಾಕೆ?
ಔರಾದ್ ಪಟ್ಟಣ ಪಂಚಾಯತ್ (ಹಳೆ ಕಟ್ಟಡ) ಪಕ್ಕದ ಪುಟ್ಟ ಕೋಣೆಯಲ್ಲಿ ತಾಲೂಕು ಗ್ರಂಥಾಲಯ ಕಾರ್ಯನಿರ್ವಹಿಸಿತು. ಅಲ್ಲಿ ಓದುಗರಿಗೆ ಹೆಚ್ಚಿನ ಸೌಕರ್ಯ ಕೊರತೆ ಹಾಗೂ ಇಕ್ಕಟಾದ ಕೊಠಡಿಯಲ್ಲಿ ಹೆಚ್ಚಿನ ಓದುಗರಿಗೆ ಕೂರಲು ಸ್ಥಳಾವಕಾಶ ಇರಲಿಲ್ಲ. ಅದನ್ನು ಮನಗಂಡು ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರ ಇಚ್ಛಾಶಕ್ತಿಯಿಂದ ಅನುದಾನ ಮಂಜೂರು ಮಾಡಿಸಿದ್ದರು. ಪಟ್ಟಣದ ಬಸವ ಗುರುಕುಲ ಸಮೀಪದಲ್ಲಿ ಐದು ವರ್ಷಗಳ ಹಿಂದೆ ಕೆಕೆಆರ್‌ಡಿಬಿ ಅನುದಾನದಲ್ಲಿ ₹90 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಗ್ರಂಥಾಲಯ ಇಂದಿಗೂ ಉದ್ಘಾಟನೆ ಭಾಗ್ಯ ಕಾಣದೇ ಹಾಳಾಗುತ್ತಿರುವುದು ಓದುಗರಲ್ಲಿ ಬೇಸರ ಮೂಡಿಸಿದೆ.
2021-22ರಲ್ಲಿ ನಿರ್ಮಿತಿ ಕೇಂದ್ರದಿಂದ ಸುಸಜ್ಜಿತ ಗ್ರಂಥಾಲಯ ಹಾಗೂ ಸುತ್ತುಗೋಡೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಐದಾರು ವರ್ಷಗಳು ಕಳೆಯುತ್ತಿದ್ದರೂ ಗ್ರಂಥಾಲಯ ಬಾಗಿಲು ಇನ್ನೂ ತೆರೆದಿಲ್ಲ. ಇದರಿಂದಾಗಿ ಕಟ್ಟಡ ಸುತ್ತಲೂ ಮುಳ್ಳು ಕಂಟಿ ಬೆಳೆದಿದ್ದು, ಕಟ್ಟಡ ಹಾಳಾಗುತ್ತಿದೆ. ಮಳೆ, ಬಿಸಿಲಿನ ಹೊಡೆತಕ್ಕೆ ಕಟ್ಟಡದ ಮೇಲೆ ಬರೆದಿರುವ ʼಗ್ರಂಥಾಲಯʼ ನಾಮಫಲಕ ಅಳಿಸುತ್ತಿದೆ. ದಿನನಿತ್ಯ ನೂರಾರು ಓದುಗರು ಭೇಟಿ ನೀಡಿ ಓದುವ ಹಸಿವು ನೀಗಿಸಿಕೊಳ್ಳುವ ಸಾಹಿತ್ಯಾಸಕ್ತರಿಗೆ ಸಹಜವಾಗಿ ಗ್ರಂಥಾಲಯ ಇಲ್ಲ ಎಂಬ ಕೊರಗು ಕಾಡುತ್ತಿದೆ. ಬಾಗಿಲು ತೆರೆಯದ ಗ್ರಂಥಾಯಲಯವನ್ನು ಸಾರ್ವಜನಿಕರು ಉದ್ಘಾಟನೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಟಿವಿ, ಕಂಪ್ಯೂಟರ್, ಮೊಬೈಲ್, ಸಾಮಾಜಿಕ ಜಾಲತಾಣಗಳ ರಭಸಕ್ಕೆ ಸಿಲುಕಿ ಹಲವರು ಓದಿನಿಂದ ವಿಮುಖಗೊಂಡಿದ್ದರೂ, ಇಂದಿಗೂ ಗ್ರಂಥಾಲಯಗಳು ತನ್ನದೇ ಆದ ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಅದರಲ್ಲೂ ನಿವೃತ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳ ಜ್ಞಾನ ವೃದ್ಧಿಗೆ ಗ್ರಂಥಾಲಯ ಪೂರಕವಾಗಿದೆ. ಮಾನವನ ಬೌದ್ಧಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅತ್ಯಗತ್ಯ ಗ್ರಂಥಾಲಯಗಳು ಮುಚ್ಚಿರುವುದು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಅಲ್ಲದೇ ಮತ್ತೇನು ಅಲ್ಲ.
ಹುಲಸೂರ-ಕಮಲನಗರದಲ್ಲೂ ಬಾಗಿಲು ತೆರೆಯದ ಗ್ರಂಥಾಲಯಗಳು!
ನೂತನ ತಾಲೂಕು ಕೇಂದ್ರಗಳಾದ ಹುಲಸೂರ ಹಾಗೂ ಕಮಲನಗರ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡಗಳು ನಿರ್ಮಣಗೊಂಡಿವೆ. ಗುತ್ತಿಗೆದಾರರು ಕಟ್ಟಡ ನಿರ್ಮಿಸಿ ಬಿಲ್ ಪಾವತಿಸಿಕೊಂಡು ಹೋದರೂ ಅಧಿಕಾರಿಗಳು ಇನ್ನೂ ತಮ್ಮ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳದಿರುವುದರಿಂದ ಎರಡೂ ಕಡೆಯೂ ಉದ್ಘಾಟನೆ ಕಾಲ ಕೂಡಿಬಂದಿಲ್ಲ.
ಹುಲಸೂರ ಪಟ್ಟಣದ ರಾಚಪ್ಪ ಗೌಡಗಾಂವ್ ರಸ್ತೆಯಲ್ಲಿ ಇರುವ ಸರ್ಕಾರಿ ಪ್ರೌಢ ಶಾಲೆಯ ಕೂಗಳತೆ ದೂರದಲ್ಲಿ 2023-24ರಲ್ಲಿ ₹35 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯವರು ಕಾಮಗಾರಿ ಪೂರ್ಣಗೊಳಿಸಿ ತೆರಳಿದ್ದಾರೆ. ಆದರೆ, ಅದರ ಉಪಯೋಗ ಮಾತ್ರ ಇಂದಿಗೂ ಯಾರೊಬ್ಬರಿಗೂ ಸಿಗದಂತಾಗಿದೆ.

ಕಮಲನಗರ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ (ಈಗಿರುವ ತಹಶೀಲ್ದಾರ್ ಕಚೇರಿ) 2022-23ರಲ್ಲಿ ಕೆಕೆಆರ್‌ಡಿಬಿಯ ₹35 ಲಕ್ಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಸುಂದರವಾಗಿ ಸುಣ್ಣ ಬಣ್ಣವನ್ನೂ ಬಳಿಯಲಾಗಿದೆ. ಆದರೆ, ಈ ಗ್ರಂಥಾಲಯ ಮಾತ್ರ ಇಂದಿಗೂ ಜನರ ಸೇವೆಗೆ ಅಣಿಯಾಗಿಲ್ಲ.
ಈ ಬಗ್ಗೆ ಜಿಲ್ಲಾ ಗ್ರಂಥಾಲಯ ಅಧಿಕಾರಿ ಸವಿತಾ ಈ ದಿನ.ಕಾಮ್‌ನೊಂದಿಗೆ ಮಾತಾನಾಡಿ, “ನಾನು ಹೊಸದಾಗಿ ಬಂದಿರುವೆ. ಗ್ರಂಥಾಲಯ ಕಟ್ಟಡಗಳ ಬಗ್ಗೆ ಮಾಹಿತಿ ಪಡೆಯುತ್ತಿರುವೆ. ಔರಾದ್ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಇನ್ನೂ ಫರ್ನಿಚರ್ ಕಾಮಗಾರಿ ಬಾಕಿ ಇರುವ ಕಾರಣ ಉದ್ಘಾಟನೆ ಆಗಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು ಕಮಲನಗರ, ಹುಲಸೂರ ಪಟ್ಟಣದಲ್ಲಿನ ಗ್ರಂಥಾಲಯಗಳು ಪರಿಶೀಲಿಸಿ ಶೀಘ್ರದಲ್ಲೇ ಉದ್ಘಾಟಿಸಲಾಗುವುದು” ಎಂದು ತಿಳಿಸಿದರು.
ʼದೇವರು ಕೊಟ್ಟರೂ ಪೂಜಾರಿ ಕೊಡಲ್ಲʼ ಎಂಬಂತೆ ಸರ್ಕಾರ ಗ್ರಂಥಾಲಯ ಕಟ್ಟಡಕ್ಕಾಗಿ ಲಕ್ಷಾಂತರ ಹಣ ಸುರಿದು ಮೂರು ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥಿತ ಕಟ್ಟಡವನ್ನೇನೊ ನಿರ್ಮಿಸಿದೆ. ಆದರೆ, ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಉದ್ಘಾಟನೆ ಆಗದಿದ್ದರೆ ನಿರ್ಮಾಣ ಮಾಡಿದ್ದಾದರೂ ಏಕೆ? ಇದೆಲ್ಲವೂ ಕಂಡೂ ಕಾಣದಂತೆ ಇರುವ ಜನಪ್ರತಿನಿಧಿಗಳ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.
“ಲಕ್ಷಾಂತರ ವೆಚ್ಚದಲ್ಲಿ ಸಕಲ ಸೌಕರ್ಯಗಳಿಂದ ನಿರ್ಮಾಣಗೊಂಡು ಓದುಗರಿಗೆ ದೇಗುಲವಾಗಬೇಕಿದ್ದ ಗ್ರಂಥಾಲಯಗಳು ಅನಾಥವಾಗಿವೆ. ಕಾಮಗಾರಿ ಪೂರ್ಣಗೊಂಡರೂ ಜನರ ಕೈಗೆಟುಕದೆ ಇಂದು-ನಾಳೆ ಎಂಬ ನಿರೀಕ್ಷೆಯಲ್ಲೇ ದಿನದೂಡಿಸುತ್ತಿದೆ ಆಡಳಿತ ವರ್ಗ. ಗ್ರಂಥಾಲಯಗಳ ಬಗ್ಗೆ ನಿರ್ಲಕ್ಷ್ಯವಹಿಸದೆ ಕೂಡಲೇ ಜನಪ್ರತಿನಿಧಿಗಳು ಗ್ರಂಥಾಲಯದ ನಿರ್ವಹಣೆಯ ಬಗ್ಗೆ ಗಮನಹರಿಸಬೇಕು. ಮೂರು ತಾಲೂಕಿನ ಹೊಸ ಗ್ರಂಥಾಲಯಗಳನ್ನು ಉದ್ಘಾಟಿಸಲು ಕ್ರಮ ಕೈಗೊಳ್ಳಬೇಕು” ಎಂದು ಕನ್ನಡಪರ ಹಿರಿಯ ಹೋರಾಟಗಾರ ಬಸವರಾಜ ಶೆಟಕಾರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಶೋಷಿತರ ಗಟ್ಟಿ ಧ್ವನಿ ಎನ್ ರಾಚಯ್ಯ ‘ಸಮಾನತೆಯ ಸಮಾಜʼದ ಕನಸುಗಾರ….
“ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ಗ್ರಂಥಾಲಯಗಳು ಪ್ರಮುಖ ಪಾತ್ರವಹಿಸಿವೆ. ಯುವಸಮೂಹಕ್ಕೆ ಓದುವ ಆಸಕ್ತಿ ಬೆಳೆಸಲು ಗ್ರಂಥಾಲಯಗಳ ಅಗತ್ಯವಿದೆ. ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಗ್ರಂಥಾಲಗಳು ಶೀಘ್ರ ಜನರ ಸೇವೆಗೆ ಸಿದ್ಧವಾಗಬೇಕಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಉದ್ಘಾಟನೆಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಲಾಗುವುದು” ಎಂದು ಗ್ರಾಮ ಕ್ರಾಂತಿ ಸೇನೆಯ ಅಧ್ಯಕ್ಷ ಸಂದೀಪ ಮುಕಿಂದೆ ಎಚ್ಚರಿಸಿದ್ದಾರೆ.
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಗ್ರಂಥಾಲಯ ಕಟ್ಟಡಗಳು ಪೂರ್ಣಗೊಂಡು ವರ್ಷಗಳೇ ಕಳೆದರೂ ಇನ್ನೂ ಉದ್ಘಾಟನೆಯಾಗದಿರುವುದು ಕೇವಲ ಆಡಳಿತದ ಲೋಪದೋಷವಲ್ಲ, ಬದಲಿಗೆ ಸಾರ್ವಜನಿಕ ಹಣದ ದುರ್ಬಳಕೆ ಮತ್ತು ಜನರ ಅಭಿವೃದ್ಧಿ ಆಕಾಂಕ್ಷೆಗಳಲ್ಲಿ ಉದಾಸೀನತೆಯ ಸ್ಪಷ್ಟ ಸಂಕೇತವಾಗಿದೆ.
ಗ್ರಂಥಾಲಯಗಳು ಕೇವಲ ಕಟ್ಟಡಗಳಲ್ಲ, ಅವುಗಳು ಜ್ಞಾನದ ದೀಪಗಳು ಯುವಜನರ ಮನಸ್ಸನ್ನು ಬೆಳಗುವ ಕೇಂದ್ರಗಳು. ಅವುಗಳಿಗೆ ಬೀಗ ಹಾಕಿ ಇಡುವುದು ಸಮಾಜದ ಬೆಳವಣಿಗೆಗೆ ತಡೆಯೊಡ್ಡುವಂತಹ ಕ್ರಮ. ಈ ಕಟ್ಟಡಗಳನ್ನು ತ್ವರಿತವಾಗಿ ಉದ್ಘಾಟಿಸಿ, ಪುಸ್ತಕಗಳನ್ನು ಸಂಗ್ರಹಿಸಿ, ಓದುಗರಿಗೆ ಅನುಕೂಲವಾಗುವಂತೆ ಸಜ್ಜುಗೊಳಿಸಬೇಕು. ಇಲ್ಲದಿದ್ದರೆ, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ನಡೆಯುವ ಈ ಬಗೆಯ ಜನ-ವಿರೋಧಿ ಕ್ರಮಗಳು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತವೆ.
ಇದನ್ನೂ ಓದಿ : ಬೀದರ್ | ಸ್ನೇಹಿತರೊಂದಿಗೆ ಈಜಲು ಹೋಗಿ ನೀರಿನಲ್ಲಿ ಕಣ್ಮರೆಯಾದ ಯುವಕ!
ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಗಮನ ಹರಿಸಿ, ಈ ಗ್ರಂಥಾಲಯಗಳನ್ನು ಶೀಘ್ರವೇ ಜನಸಾಮಾನ್ಯರಿಗೆ ಅರ್ಪಿಸುವುದು ಸಮಯೋಚಿತ. ಜ್ಞಾನ ಪ್ರಸಾರವು ಯಾವುದೇ ರಾಜಕೀಯ ಅಥವಾ ಆಡಳಿತದ ನಿರ್ಲಕ್ಷಕ್ಕೆ ತುತ್ತಾಗಬಾರದು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



