ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ ವೈದ್ಯ ವೃತ್ತಿ ನಡೆಸುತ್ತಿದ್ದ ಆರೋಪದ ಮೇರೆಗೆ ಪ್ರೇಮಕುಮಾರ್ ಎಂಬುವವರ ಖಾಸಗಿ ಕ್ಲಿನಿಕ್‌ನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಗ್ರಾಮದಲ್ಲಿ ಅಕ್ರಮ ವೈದ್ಯ ವೃತ್ತಿ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇಲೆ ಅಕ್ಟೋಬರ್ 5ರಂದು ರಾತ್ರಿ 7 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನೀಲಕುಮಾರ್ ಚಿಂತಾಮಣಿ ನೇತ್ರತ್ವದ ತಂಡ ಅನಿರೀಕ್ಷಿತ ದಾಳಿ ನಡೆಸಿ ಕ್ಲಿನಿಕ್ ಅನ್ನು ಮುಚ್ಚಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ಅವರ ಸೂಚನೆಯಂತೆ ಈ ಕಾರ್ಯಾಚರಣೆ ನಡೆಸಲಾಗಿದೆ. ಪ್ರೇಮಕುಮಾರ್ ಅವರು ಈ ಹಿಂದೆ ಮುಧೋಳ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಶುಶ್ರೂಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗಲೂ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಆ ಸಂದರ್ಭದಲ್ಲೂ ಅವರ ಕ್ಲಿನಿಕ್‌ನ್ನು ಸೀಜ್ ಮಾಡಲಾಗಿತ್ತು.
ಈ ಪ್ರಕರಣದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು 2026ರ ಜನವರಿ 31ರಂದು ಪ್ರೇಮಕುಮಾರ್ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದರು. ಆದಾಗ್ಯೂ ಅಮಾನತಿನ ನಂತರವೂ ಅವರು ಖಾಸಗಿಯಾಗಿ ವೈದ್ಯ ವೃತ್ತಿ ಮುಂದುವರಿಸುತ್ತಿರುವ ಬಗ್ಗೆ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಾಟ್ಸಾಪ್‌ಗೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ : ಬೀದರ್ | ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿ ದಾಳಿ, ಬ್ರಿಮ್ಸ್‌ಗೆ ದಾಖಲು
ದೂರಿನ ಪರಿಶೀಲನೆ ನಡೆಸಿದ ಅಧಿಕಾರಿಗಳು ದಾಳಿ ನಡೆಸಿ ಕ್ಲಿನಿಕ್‌ನ್ನು ಸೀಜ್ ಮಾಡಿದ್ದಾರೆ. ದಾಳಿಯಲ್ಲಿ ಔರಾದ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನೀಲಕುಮಾರ್ ಎಕಲೂರೆ, ಕೆ.ಪಿ.ಎಂ.ಇ. ವಿಷಯ ನಿರ್ವಾಹಕ ಮಹೇಶ್ವರರೆಡ್ಡಿ, ಪೊಲೀಸ್ ಸಿಬ್ಬಂದಿ ಅಶೋಕ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಬಲಭೀಮ ಮತ್ತು ಸಿದ್ದು ಭಾಗವಹಿಸಿದ್ದರು.




