ವಾಹನ ಸವಾರರ ಮೇಲಿರುವ ಬಾಕಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ (ಇ-ಚಲನ್) ಹಾಗೂ ಸಾರಿಗೆ ಇಲಾಖೆಯ (RTO) ದಂಡದ ಮೊತ್ತವನ್ನು ಪಾವತಿಸಲು ರಾಜ್ಯ ಸರ್ಕಾರವು ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ. ನವೆಂಬರ್ 21ರಿಂದ ಡಿಸೆಂಬರ್ 11ರವರೆಗೆ ಒಟ್ಟು 21 ದಿನಗಳ ಕಾಲ ಈ ರಿಯಾಯಿತಿ ಸೌಲಭ್ಯ ಜಾರಿಯಲ್ಲಿರಲಿದೆ.
ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಸಿ. ಮಲ್ಲಿಕ್ ಅವರು ಈ ಕುರಿತು ಅಧಿಕೃತ ಮಾಹಿತಿ ನೀಡಿದರು. 1991ರಿಂದ 2025ರ ಅವಧಿಯವರೆಗೆ ಬಾಕಿ ಇರುವ ಎಲ್ಲಾ ಸಂಚಾರ ಇ-ಚಲನ್ಗಳು ಮತ್ತು ಆರ್ಟಿಒ ದಂಡಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ. ಸಾರ್ವಜನಿಕರು ತಮ್ಮ ವಾಹನಗಳ ಮೇಲಿರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಂಚಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ದಂಡ ಬಾಕಿ ಉಳಿದಿದೆ. ಸಂಚಾರ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ಮೈಸೂರು ನಗರ ವ್ಯಾಪ್ತಿಯಲ್ಲಿ ಒಟ್ಟು 1,08,86,387 ಇ-ಚಲನ್ ಪ್ರಕರಣಗಳು ಬಾಕಿ ಇದ್ದು, ಇವುಗಳ ಒಟ್ಟು ದಂಡದ ಮೊತ್ತ ₹482,53,89,600 ಆಗಿದೆ. ಶೇ. 50ರಷ್ಟು ರಿಯಾಯಿತಿಯ ನಂತರ ವಾಹನ ಸವಾರರು ₹241,26,94,800 ಪಾವತಿಸಬೇಕಾಗುತ್ತದೆ. ಅದೇ ರೀತಿ, ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ 36,91,027 ಪ್ರಕರಣಗಳು ಬಾಕಿ ಉಳಿದಿದ್ದು, ಒಟ್ಟು ₹184,94,00,500 ದಂಡದ ಮೊತ್ತಕ್ಕೆ ಬದಲಾಗಿ ರಿಯಾಯಿತಿ ದರದಲ್ಲಿ ₹92,47,00,250 ಪಾವತಿಸಲು ಅವಕಾಶವಿದೆ. ಇದಲ್ಲದೆ, ಜಿಲ್ಲೆಯ ಸಾರಿಗೆ ಇಲಾಖೆಯ (RTO) ಕಚೇರಿಗಳಲ್ಲಿ ಒಟ್ಟು 8,748 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಆರ್ಟಿಒ ಮೈಸೂರು ಪಶ್ಚಿಮ ಕಚೇರಿಯಲ್ಲಿ 5,750, ಹುಣಸೂರು ಆರ್ಟಿಒದಲ್ಲಿ 1,832 ಹಾಗೂ ಮೈಸೂರು ಪೂರ್ವ ಆರ್ಟಿಒ ಕಚೇರಿಯಲ್ಲಿ 1,166 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ.
ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ, ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಚಾಲನೆ ಸೇರಿದಂತೆ ಸಂಚಾರ ಪೊಲೀಸರು ದಾಖಲಿಸಿರುವ ಎಲ್ಲಾ ರೀತಿಯ ಇ-ಚಲನ್ಗಳಿಗೆ ಈ ರಿಯಾಯಿತಿ ಸಿಗಲಿದೆ.
ವಾಹನ ಸವಾರರು ತಮ್ಮ ಮೊಬೈಲ್ನಲ್ಲಿ ‘ವಾಹನ್’ ಆ್ಯಪ್ ಅಥವಾ ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳು, ಹಾಗೂ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ತಮ್ಮ ವಾಹನದ ನೋಂದಣಿ ಸಂಖ್ಯೆ ನಮೂದಿಸಿ ಬಾಕಿ ಇರುವ ದಂಡವನ್ನು ಪರಿಶೀಲಿಸಿ, ಶೇ. 50ರಷ್ಟು ಮೊತ್ತವನ್ನು ಪಾವತಿಸಿ ರಶೀದಿ ಪಡೆಯಬಹುದು.
ನಗರದಲ್ಲಿ ಸುಗಮ ಸಂಚಾರ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ 50 ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 27 ಕ್ಯಾಮೆರಾಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸ್ಥಳಗಳು ಮತ್ತು ಅಪಘಾತ ವಲಯಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಎಎಸ್ಪಿ ಮಲ್ಲಿಕ್ ವಿವರಿಸಿದರು.
ಇದರೊಂದಿಗೆ, ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ವೀಲಿಂಗ್ ಹಾಗೂ ಇತರ ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ, ಸಾರ್ವಜನಿಕರು ಅವುಗಳ ಫೋಟೋ ಅಥವಾ ವಿಡಿಯೋಗಳನ್ನು ಸೆರೆಹಿಡಿದು ಪೊಲೀಸರಿಗೆ ಕಳುಹಿಸುವ ಮೂಲಕ ಕಾನೂನು ಪಾಲನೆಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ‘ಪಿಎಂ ರಾಹತ್’ ಯೋಜನೆಯಡಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಲಭ್ಯವಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ಉಳಿಸಲು ಸಾರ್ವಜನಿಕರು ತಕ್ಷಣವೇ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.



