ಮಣಿಪುರ ಕಳ್ಳಭಟ್ಟಿ ದುರಂತದಲ್ಲಿ ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಚಾಂದೇಲ್ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದು, ಕಳ್ಳಭಟ್ಟಿ ಸೇವನೆಯಿಂದ ಈ ಸಾವು ಸಂಭವಿಸಿದೆ ಎಂಬ ಶಂಕೆಯಿದೆ. ಈ ದುರಂತದ ಬೆನ್ನಲ್ಲೇ ಜಿಲ್ಲಾಡಳಿತವು ಸಾರ್ವಜನಿಕರಿಗೆ ತುರ್ತು ಸಲಹೆ ಮತ್ತು ಎಚ್ಚರಿಕೆಯನ್ನು ನೀಡಿದೆ.
ಚಾಂದೇಲ್ ಜಿಲ್ಲೆಯ ಚಕ್ಪಿಕರಾಂಗ್ ಉಪವಿಭಾಗ ಮತ್ತು ಪಶ್ಚಿಮ ಕಣಿವೆ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಮಾಹಿತಿಯ ಪ್ರಕಾರ, ನವೆಂಬರ್ 18ರಂದು ಐವರು, ಗುರುವಾರ (ನ.19) ಒಬ್ಬರು ಹಾಗೂ ಶುಕ್ರವಾರ (ನ.20) ಇಬ್ಬರು ಸೇರಿದಂತೆ ಮೂರು ದಿನಗಳಲ್ಲಿ ಒಟ್ಟು ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಹಾರ | ಕಳ್ಳಭಟ್ಟಿ ಸೇವಿಸಿ 20 ಮಂದಿ ದಾರುಣ ಸಾವು
ಮೃತಪಟ್ಟವರೆಲ್ಲರೂ ಯುವಕರು ಮತ್ತು ಮಧ್ಯವಯಸ್ಕರಾಗಿದ್ದು, ಸಾವನ್ನಪ್ಪುವ ಮುನ್ನ ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ಉಸಿರಾಟದ ತೊಂದರೆಯಂತಹ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿದ್ದರು ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 90ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಂಫಾಲದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಚಾಂದೇಲ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಧರ್ಮೇಂದ್ರ ಕುಮಾರ್ ಅವರು ಜಿಲ್ಲಾಧಿಕಾರಿಗೆ ನೀಡಿರುವ ಪ್ರಾಥಮಿಕ ವರದಿಯ ಪ್ರಕಾರ, ಸಂತ್ರಸ್ತರು ಸೇವಿಸಿದ್ದ ಮದ್ಯವನ್ನು ಪಕ್ಕದ ಕಕ್ಚಿಂಗ್ ಜಿಲ್ಲೆಯ ಸುಗ್ನು ಎಂಬಲ್ಲಿಂದ ತರಲಾಗಿತ್ತು ಎಂದು ತಿಳಿದುಬಂದಿದೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟ ಜಾಲಗಳ ಮೇಲೆ ದಾಳಿ ನಡೆಸಲು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಂದೇಲ್ ಜಿಲ್ಲಾಡಳಿತವು ಸಾರ್ವಜನಿಕರಿಗಾಗಿ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸ್ಥಳೀಯವಾಗಿ ತಯಾರಿಸಿದ ಅಥವಾ ಅನುಮಾನಾಸ್ಪದ ಮೂಲಗಳಿಂದ ಬಂದ ಯಾವುದೇ ಮದ್ಯವನ್ನು ಸೇವಿಸಬಾರದು. ಮದ್ಯ ಸೇವಿಸಿದ ನಂತರ ವಾಂತಿ, ಹೊಟ್ಟೆ ನೋವು, ತಲೆನೋವು, ತಲೆಸುತ್ತು, ದೃಷ್ಟಿ ಮಂದವಾಗುವುದು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದೆ.
ಹಾಗೆಯೇ ಒಂದೇ ಮೂಲದ ಮದ್ಯ ಸೇವಿಸಿದ್ದು, ಸದ್ಯಕ್ಕೆ ಯಾವುದೇ ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ಶಂಕಿತ ನಕಲಿ ಮದ್ಯವನ್ನು ಮಾರಾಟ ಮಾಡುವುದು, ಹಂಚುವುದು ಅಥವಾ ನಾಶಪಡಿಸುವುದನ್ನು ಮಾಡದೆ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದೆ.



