ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ “ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ” ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್ ಭಾಗ್ಯ
ರಸ್ತೆ ಬಿಕೋ ಎನುತಿತ್ತು
ನಿರ್ಜನ…
ನಾನು ಹಾಗೂ ಕಪ್ಪುಹಕ್ಕಿ ಹೊರತುಪಡಿಸಿ.
ಅದು ರಸ್ತೆಯ ಮೇಲೆ ಗಾಯಗೊಂಡು ಬಿದ್ದಿತ್ತು.
ಅದನ್ನೆತ್ತಿಕೊಳ್ಳಲು ಕೈ ಚಾಚಿದಾಗ
ನಾನು ರಸ್ತೆಯ ಮೇಲೆ ಬಿದ್ದು
ಗಾಯಗೊಂಡಿದ್ದೆ.
ನಾನು ರಸ್ತೆಯ ಮೇಲಿದ್ದೆ, ನನ್ನೊಳಗೆ ರಸ್ತೆ, ಅದರ ಮೇಲೆ ಕೇವಲ ಕಪ್ಪು ಹಕ್ಕಿ ಇತ್ತು.
ನಾನೇ ರಸ್ತೆ,ನಾನೇ ಕಪ್ಪು ಹಕ್ಕಿ ಹಾಗೂ ನಾನು ನಾನೇ.
ನಾನು ರಸ್ತೆಯ ಮೇಲೆ ಗಾಯಗೊಂಡ ಹಕ್ಕಿ ಹಿಡಿದುಕೊಂಡಿದ್ದೆ.
ಹಕ್ಕಿಯ ಕಣ್ಣೊಳಗೆ ರಸ್ತೆ ಹಾಗೂ ನಾನು.
ರಸ್ತೆಯಲಿ ಎಂದೂ ಯಾರೂ ಇರಲಿಲ್ಲ.
ಹಕ್ಕಿ ಅದರ ಮೇಲೆ ಬಿದ್ದಿತ್ತು ಗಾಯಗೊಂಡು.
ರಸ್ತೆ ತನ್ನ ತಿರುವಿನಲಿ ಕೈ ಚಾಚಿ
ಧೂಳಿನ ಚಾದರ ಎಳೆದುಕೊಂಡಿತು
ಅದು ನಿಶ್ಚಲವಾಗಿತ್ತು.
ರಸ್ತೆಯುದ್ದಕೂ ಇದ್ದ ಕತ್ತಲೆಯು ಕಪ್ಪು ಹಕ್ಕಿಯಂತೆ.
ಅಲ್ಲಿ ರಸ್ತೆಯೂ ಇರಲಿಲ್ಲ,ಯಾರೂ ಇರಲಿಲ್ಲ,ಕಪ್ಪು ಹಕ್ಕಿಯೂ ಇರಲಿಲ್ಲ.



