ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಚಲನಚಿತ್ರ ನಿರ್ಮಾಪಕ ರಾಜ್ ಕುಂದ್ರಾ ಅವರ ಉದ್ದೇಶಿತ ಸಿನಿಮಾ ‘ನಿಹಾಂಗ್’ ನಿರ್ಮಾಣಕ್ಕೆ ಸಿಖ್ಖರ ಪರಮೋಚ್ಚ ಧಾರ್ಮಿಕ ಪೀಠವಾದ ‘ಶ್ರೀ ಅಕಾಲ್ ತಖ್ತ್ ಸಾಹಿಬ್’ ಯಾವುದೇ ಅನುಮತಿ ನೀಡಿಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ರಾಜ್ ಕುಂದ್ರಾ ಅವರ ‘ನಿಹಾಂಗ್’ ಚಿತ್ರಕ್ಕೆ ಅಕಾಲ್ ತಖ್ತ್ ಸಾಹಿಬ್‌ನಿಂದ ಹಸಿರು ನಿಶಾನೆ ಸಿಕ್ಕಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ವದಂತಿಗಳಿಗೆ ತೆರೆ ಎಳೆದಿರುವ ಅಕಾಲ್ ತಖ್ತ್ ಸಚಿವಾಲಯವು, ಕಾರ್ಯಕಾರಿ ಜಥೇದಾರ್ ಗ್ಯಾನಿ ಕುಲ್ದೀಪ್ ಸಿಂಗ್ ಗಡ್ಗಜ್ ಅವರು ರಾಜ್ ಕುಂದ್ರಾ ಅವರಿಗೆ ಚಿತ್ರ ನಿರ್ಮಾಣಕ್ಕೆ ಯಾವುದೇ ಒಪ್ಪಿಗೆ ಅಥವಾ ಅನುಮೋದನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ-2’ ಸಿನಿಮಾ ನಿರ್ಮಾಪಕರು, ಸಿಬಿಎಫ್‌ಸಿಗೆ ಹೈಕೋರ್ಟ್ ನೋಟಿಸ್
ಈ ಕುರಿತು ಮಾಹಿತಿ ನೀಡಿರುವ ಶ್ರೀ ಅಕಾಲ್ ತಖ್ತ್ ಸಾಹಿಬ್ ಸಚಿವಾಲಯದ ಉಸ್ತುವಾರಿ ಬಗೀಚಾ ಸಿಂಗ್, “ಇತ್ತೀಚೆಗೆ ರಾಜ್ ಕುಂದ್ರಾ ಅವರು ಸಚಿವಾಲಯಕ್ಕೆ ಭೇಟಿ ನೀಡಿ, ತಮ್ಮ ಉದ್ದೇಶಿತ ಚಿತ್ರದ ಕಲ್ಪನೆಯ ಬಗ್ಗೆ ಜಥೇದಾರ್ ಅವರ ಮುಂದೆ ವಿಚಾರಗಳನ್ನು ಹಂಚಿಕೊಂಡಿದ್ದರು. ಜಥೇದಾರ್ ಅವರು ಕೇವಲ ಕುಂದ್ರಾ ಅವರ ಮಾತನ್ನು ಕೇಳಿಸಿಕೊಂಡಿದ್ದಾರೆಯೇ ಹೊರತು, ಚಿತ್ರಕ್ಕೆ ಯಾವುದೇ ಅನುಮತಿ ನೀಡಿಲ್ಲ. ಈ ಭೇಟಿಯನ್ನೇ ‘ಅನುಮತಿ ಸಿಕ್ಕಿದೆ’ ಎಂದು ಬಿಂಬಿಸುತ್ತಿರುವುದು ಸಂಪೂರ್ಣ ತಪ್ಪು ಮತ್ತು ದಾರಿತಪ್ಪಿಸುವಂತಿದೆ” ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಹೇಳಿದ್ದಾರೆ.
ನಿಷೇಧದ ಆದೇಶದ ಪ್ರತಿ ಹಸ್ತಾಂತರ
ಭೇಟಿಯ ಸಂದರ್ಭದಲ್ಲಿ, ಸಿಖ್ ಇತಿಹಾಸ ಮತ್ತು ಧಾರ್ಮಿಕ ವ್ಯಕ್ತಿಗಳ ಕುರಿತ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ 2025ರ ಡಿಸೆಂಬರ್ 28ರಂದು ಐವರು ಸಿಂಗ್ ಸಾಹಿಬಾನ್‌ಗಳು ಹೊರಡಿಸಿದ್ದ ಆದೇಶದ ಪ್ರತಿಯನ್ನು ರಾಜ್ ಕುಂದ್ರಾ ಅವರಿಗೆ ಹಸ್ತಾಂತರಿಸಲಾಗಿದೆ.
ಆದೇಶದ ಪ್ರಕಾರ ಸಿಖ್ ಗುರುಗಳು, ಅವರ ಕುಟುಂಬ ಸದಸ್ಯರು, ಐತಿಹಾಸಿಕ ಸಿಖ್ ಯೋಧರು ಮತ್ತು ಹುತಾತ್ಮರ ವೇಷಭೂಷಣ ಅಥವಾ ಸ್ವರೂಪವನ್ನು ಅನುಕರಿಸಿ ಚಲನಚಿತ್ರಗಳು, ಅನಿಮೇಷನ್ ಸಿನಿಮಾಗಳು ಅಥವಾ ಎಐ ಆಧಾರಿತ ವಿಡಿಯೋಗಳನ್ನು ನಿರ್ಮಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಿಖ್ ಇತಿಹಾಸದ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಚಿತ್ರೀಕರಿಸುವುದಕ್ಕೂ ನಿರ್ಬಂಧವಿದೆ. ಇದರೊಂದಿಗೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಮತ್ತು ಧರ್ಮ ಪ್ರಚಾರ ಸಮಿತಿಯು ಈ ಹಿಂದೆ ಅಂಗೀಕರಿಸಿದ್ದ ನಿರ್ಣಯಗಳ ಪ್ರತಿಗಳನ್ನೂ ಕುಂದ್ರಾ ಅವರಿಗೆ ನೀಡಲಾಗಿದೆ.
ಆಧುನಿಕ ತಂತ್ರಜ್ಞಾನದಿಂದ ಸಿಖ್ ಸಂಪ್ರದಾಯ, ತತ್ವಗಳು ಮತ್ತು ಅಸ್ಮಿತೆಗೆ ಎದುರಾಗುತ್ತಿರುವ ಸವಾಲುಗಳನ್ನು ಉಲ್ಲೇಖಿಸಿರುವ ಅಕಾಲ್ ತಖ್ತ್, ಸಾಖಿ ಪರಂಪರೆ, ಗುರುದ್ವಾರಗಳು ಮತ್ತು ಸಿಖ್ ಸಂಸ್ಥೆಗಳ ಮೂಲಕವೇ ಸಾಂಪ್ರದಾಯಿಕ ಧರ್ಮ ಪ್ರಚಾರವನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಒತ್ತಿಹೇಳಿದೆ.



