ಕೋಳಿ ಸಾಕಾಣಿಕೆ ರೈತರಿಗೆ ಸರ್ಕಾರ ಘೋಷಿಸಿರುವ ಪ್ರತಿ ಕೆ.ಜಿ.ಗೆ ₹10ರ ತಾತ್ಕಾಲಿಕ ಪ್ರೋತ್ಸಾಹಧನವನ್ನು ತಕ್ಷಣ ಜಾರಿಗೊಳಿಸುವಂತೆ ಒತ್ತಾಯಿಸಿ ನವೆಂಬರ್ 25ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ‘ಬೆಂಗಳೂರು ಚಲೋ’ ಹೋರಾಟದಲ್ಲಿ ಬಾಗೇಪಲ್ಲಿ ತಾಲ್ಲೂಕಿನಿಂದ ಕರ್ನಾಟಕ ರಾಜ್ಯ ಕೋಳಿ ಸಾಗಣಿಕೆ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಸಹಭಾಗಿತ್ವದಲ್ಲಿ ಸುಮಾರು 100 ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎಂ.ರಾಮಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ತಾಲ್ಲೂಕು ಕೋಳಿ ಸಾಕಾಣಿಕೆ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಕೋಳಿ ಸಾಕಾಣಿಕೆಗೆ ತಗಲುವ ವೆಚ್ಚಕ್ಕೆ ಅನುಗುಣವಾಗಿ ರೈತರಿಗೆ ಕಂಪನಿಗಳು ಹಣ ಪಾವತಿಸುತ್ತಿಲ್ಲ. ಪ್ರತಿ ಕೆ.ಜಿ.ಗೆ ₹10 ಪ್ರೋತ್ಸಾಹಧನ ನೀಡುವಂತೆ ಸರ್ಕಾರ ಆದೇಶ ಹೊರಡಿಸಿ ಆರು ತಿಂಗಳು ಕಳೆದಿದ್ದರೂ ಕಂಪನಿಗಳು ಜಾರಿಗೊಳಿಸಿಲ್ಲ. ಈ ಬಗ್ಗೆ ಸರ್ಕಾರವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸುಮಾರು 40 ಸಾವಿರ ಕೋಳಿ ಸಾಕಾಣಿಕೆ ರೈತರಿದ್ದಾರೆ. ಹಾಲು ಉತ್ಪಾದಕರು ಹಾಗೂ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸುವ ಸರ್ಕಾರ, ಕೋಳಿ ಸಾಕಾಣಿಕೆ ರೈತರ ಸಮಸ್ಯೆಗಳಿಗೆ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ. ಮುಖ್ಯಮಂತ್ರಿ, ಸಚಿವರು ಸೇರಿದಂತೆ 100ಕ್ಕೂ ಹೆಚ್ಚು ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ನ. 25ರಂದು ನಡೆಯುವ ಬೆಂಗಳೂರು ಚಲೋ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ವಿವಿಧ ಜಿಲ್ಲೆಗಳಿಂದ 5ಸಾವಿರದಿಂದ 10 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆ ಬಳಿಕವೂ ಬೇಡಿಕೆ ಈಡೇರದಿದ್ದರೆ ಕೋಳಿ ಸಾಕಾಣಿಕೆ ಪೂರೈಕೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಕರ್ನಾಟಕ ಕೋಳಿ ಸಾಗಣಿಕೆ ಸಂಘ ಸಂಸ್ಥೆಗಳು ರೈತರು ಕಂಪನಿಯವರು ನೀಡುವ ಮರಿಗಳನ್ನು ಇಳಿಸಿಕೊಳ್ಳುವುದಿಲ್ಲ,ಹಾಗೂ ನಮ್ಮ ಷೆಡ್ಡುಗಳಲ್ಲಿ ಇರುವ ಕೋಳಿಗಳನ್ನು ಸಹಾ ಕೊಡಲು ಬಿಡುವುದಿಲ್ಲ ಎಂದರು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಈ ಸಂದರ್ಭದಲ್ಲಿ ವೆಂಕಟರೆಡ್ಡಿ,ವಿಶ್ವನಾಥ್ ,ಶ್ರೀನಿವಾಸ್, ಹನುಮಂತ ರೆಡ್ಡಿ, ಸತ್ಯನಾರಾಯಣ ರೆಡ್ಡಿ, ಬಾಬುರೆಡ್ಡಿ,ಉದಯ್,ಪ್ರಣವ್,ಭರತ್ ರೆಡ್ಡಿ ಲಕ್ಷ್ಮಿನಾರಾಯನ ಹಾಗೂ ಇತರರು ಹಾಜರಿದ್ದರು.



