ರಾಜ್ಯದ ಗಡಿಭಾಗದಲ್ಲಿರುವ ದೊಡ್ಡ ಜನಸಂಖ್ಯೆ ಹಾಗೂ ಭಾರಿ ವಿಸ್ತೀರ್ಣ ಹೊಂದಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿ ಗ್ರಾಮ ಪಂಚಾಯಿತಿಯನ್ನು ಕೂಡಲೇ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕೆಂದು ಒತ್ತಾಯಿಸಿ ಸದರಿ ಗ್ರಾಮದ ಗ್ರಾಮಸ್ಥ ಅಮ್ಜದ್ ಪಾಷಾ ಬೆಳಗಾವಿಗೆ ಕಾಲ್ನಡಿಗೆಯಲ್ಲಿ ಒಬ್ಬಂಟಿಯಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಇಂದು ಅವರು ಚಿಂತಾಮಣಿಗೆ ಆಗಮಿಸಿದ್ದು ಇಲ್ಲಿನ ಸ್ಥಳೀಯರು ಅವರಿಗೆ ಬೆಂಬಲಿಸಿ ಅವರ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
“ಅಮ್ಜದ್ ಖಾನ್ ಮಾಧ್ಯಮದವರೊಂದಿಗೆ ಮಾತನಾಡಿ ಗೌನಪಲ್ಲಿ ಗ್ರಾಮ ಪಂಚಾಯಿತಿ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದರೂ ಸಹ ಅದಕ್ಕೆ ತಕ್ಕ ಅನುದಾನ ಸಿಗುತ್ತಿಲ್ಲ ಎಂದಿದ್ದಾರೆ.ಇದರಿಂದಾಗಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಕಷ್ಟವಾಗುತ್ತಿದ್ದು, ಸಾರ್ವಜನಿಕರು ಹಲವು ವರ್ಷಗಳಿಂದ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ.
”ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತಿಸಲು ವಿವಿಧ ಕಾರಣಗಳಿಂದ ಹಿನ್ನಡೆಯಾಗುತ್ತಿದ್ದು, ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ಅವಧಿಯಲ್ಲಾದರೂ ಈ ಸಮಸ್ಯೆಗೆ ಪರಿಹಾರ ಸಿಗಬೇಕು ಎಂಬುದು ಗ್ರಾಮಸ್ಥರ ಬಹುದಿನಗಳ ಕನಸಾಗಿದೆ.ಸರ್ಕಾರದ ಗಮನ ಸೆಳೆಯಲು ಮತ್ತು ಸರ್ಕಾರದ ಕರುಣೆ ಹಾಗೂ ಸ್ಪಂದನೆಗಾಗಿ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
”ಚಿಂತಾಮಣಿ ಪಟ್ಟಣಕ್ಕೆ ಪಾದಯಾತ್ರೆ ತಲುಪಿದ ಸಂದರ್ಭದಲ್ಲಿ,ಸ್ಥಳೀಯ ಮುಖಂಡರಾದ ಮಾಜಿ ನಗರಸಭಾ ಸದಸ್ಯ ಅಗ್ರಹಾರ ಮುರಳಿ ಮತ್ತು ಯುವ ವಕೀಲ ಅಯೂಬ್ ಖಾನ್ ಸೇರಿದಂತೆ ಚಿಂತಾಮಣಿಯ ಯುವಕರು ಹಾಗೂ ಸ್ಥಳೀಯರು ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ.ಗ್ರಾಮಸ್ಥರ ಈ ನ್ಯಾಯಯುತ ಹೋರಾಟಕ್ಕೆ ಭಗವಂತ ಯಶಸ್ಸು ನೀಡಲಿ ಹಾಗೂ ಸರ್ಕಾರವು ಕೂಡಲೇ ಸ್ಪಂದಿಸಿ ಗೌನಪಲ್ಲಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಘೋಷಿಸಲಿ” ಎಂದು ಕಳಕಳಿಯ ಮನವಿ ಮಾಡಿದ್ದಾರೆ.



