ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನವನ್ನು ವಿರೋಧಿಸಿ ಇಂದು ಬಂದ್ ಆಚರಿಸಲಾಗುತ್ತಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುತ್ತಿರುವ ಈ ಬಂದ್‌ಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸೇರಿದಂತೆ ಹಲವು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ.
ಬಂದ್‌ನಿಂದಾಗಿ ಪಟ್ಟಣದ ಅಂಗಡಿ-ಮಾರುಕಟ್ಟೆಗಳು, ಬ್ಯಾಂಕ್‌ಗಳು, ಶಾಲಾ-ಕಾಲೇಜುಗಳು ಮುಚ್ಚಿವೆ. ಸಾರ್ವಜನಿಕ ಸಾರಿಗೆ ಸೇರಿದಂತೆ ಬಸ್, ಲಾರಿ, ಆಟೋಗಳ ಸಂಚಾರದಲ್ಲಿ ವ್ಯತ್ಯವಾಗಿದ್ದು, ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲು ಮಳಿಗೆಗಳಂತಹ ಅಗತ್ಯ ಸೇವೆಗಳು ಸರಾಗವಾಗಿ ಸಾಗಿವೆ.
ರೈತರು ಮತ್ತು ಸ್ಥಳೀಯ ಸಂಘಟನೆಗಳು ಕಸ್ತೂರಿರಂಗನ್ ವರದಿ ಜಾರಿಯಾದರೆ ಕೃಷಿ, ತೋಟಗಾರಿಕೆ ಮತ್ತು ಸ್ಥಳೀಯರ ಜೀವನೋಪಾಯಕ್ಕೆ ತೀವ್ರ ಪರಿಣಾಮ ಬೀರುತ್ತದೆ ಎಂದು ಆತಂಕಗೊಂಡಿದ್ದು, ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಿಂದ ಮಲೆನಾಡಿನ ಹಲವು ಗ್ರಾಮಗಳು ಪ್ರಭಾವಿತವಾಗಲಿವೆ ಎಂಬುದು ಅವರ ಪ್ರಮುಖ ಆಕ್ಷೇಪ.
ಇದೇ ವೇಳೆ ರಾಜ್ಯ ವಿಧಾನಮಂಡಲದಲ್ಲಿ ಕಸ್ತೂರಿರಂಗನ್ ವರದಿ ಮತ್ತು ಬರಗಾಲ ಸಮಸ್ಯೆ ಕುರಿತು ವಿಶೇಷ ಅಧಿವೇಶನ ಪ್ರಾರಂಭವಾಗಿದೆ. ರಾಜ್ಯ ಸರ್ಕಾರ ಸೆಪ್ಟೆಂಬರ್ 27ರೊಳಗೆ ಕೇಂದ್ರಕ್ಕೆ ತನ್ನ ನಿಲುವು ತಿಳಿಸಬೇಕಾಗಿದೆ.




