ಮೇಯಲು ಬಿಟ್ಟಿದ್ದ ದನವನ್ನು ಅಕ್ರಮವಾಗಿ ಟೆಂಪೋದಲ್ಲಿ ಸಾಗಿಸುತ್ತಿದ್ದರೆಂದು ಆರೋಪಿಸಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಸೆ.19ರಂದು ಸಂಜೆ 4 ಗಂಟೆ ಸುಮಾರಿಗೆ ಕಾಪು ತಾಲೂಕಿನ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ವಸಂತಿ ಸುನೀತಾ ಕ್ವಾಡ್ರಸ್ ಎಂಬವರು ತಮ್ಮ ಐದು ದನಗಳನ್ನು ಮೇಯಲು ಬಿಟ್ಟಿದ್ದರು. ಈ ಪೈಕಿ ಎರಡು ವರ್ಷ ಪ್ರಾಯದ ಕಪ್ಪು ಬಣ್ಣದ ಒಂದು ದನ ಕಾಣೆಯಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ಹುಡುಕಾಟ ನಡೆಸಿದ್ದರು.
ಈ ವೇಳೆ ಸಮೀಪದಲ್ಲಿ ನಿಂತಿದ್ದ ಟೆಂಪೋವೊಂದನ್ನು ಪರಿಶೀಲಿಸಿದಾಗ, ಕಾಣೆಯಾಗಿದ್ದ ದನ ಸೇರಿದಂತೆ ಮತ್ತೊಂದು ದನ ಕೂಡ ಅದರೊಳಗಿದ್ದು, ಎರಡೂ ದನಗಳನ್ನು ಕಟ್ಟಿಹಾಕಿರುವುದು ಕಂಡುಬಂದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ವಾಹನದ ನೋಂದಣಿ ಸಂಖ್ಯೆ KA 19 B 5641 ಎಂದು ಗುರುತಿಸಲಾಗಿತ್ತು.
ವಾಹನದ ಬಳಿ ಉಮ್ಮರಬ್ಬ ಸೇರಿದಂತೆ ನಾಲ್ವರು ವ್ಯಕ್ತಿಗಳು ಇದ್ದು, ದೂರುದಾರರನ್ನು ಕಂಡ ಕೂಡಲೇ ಟೆಂಪೋವನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ವಸಂತಿ ಸುನೀತಾ ಕ್ವಾಡ್ರಸ್ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಪ್ರಕರಣದ ಮೊದಲ ಆರೋಪಿ ಉಮ್ಮರಬ್ಬ (64) ಅವರನ್ನು ಸೆ.19ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮೊಹಮ್ಮದ್ ಶರೀಫ್ (31), ಶಂಶುದ್ದೀನ್ (57) ಹಾಗೂ ಮಹಮ್ಮದ್ ಆಸೀರ್ (24) ಅವರನ್ನು ಸೆ.20ರಂದು ಕಾಪುವಿನ ಕೊಪ್ಪಲಂಗಡಿಯಲ್ಲಿ ವಾಹನ ಸಮೇತ ಪತ್ತೆಹಚ್ಚಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ KA 19 B 5641 ನೋಂದಣಿ ಸಂಖ್ಯೆಯ ಟೆಂಪೋ ಹಾಗೂ ದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತ ಹಾಗೂ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝಮತ್ ಆಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಶಿರ್ವ ಠಾಣೆಯ ಉಪನಿರೀಕ್ಷಕ ಮಂಜುನಾಥ ಮರಬದ, ಪಡುಬಿದ್ರಿ ಠಾಣೆಯ ಉಪನಿರೀಕ್ಷಕ ಸಕ್ತಿವೇಲು. ಇ, ಅನಿಲ್ ಕುಮಾರ್ ಟಿ. ನಾಯ್ಕ್, ಹೆಬ್ರಿ ಠಾಣೆಯ ಉಪನಿರೀಕ್ಷಕ ಲೊಹಿತ್ ಕುಮಾರ್ ಹಾಗೂ ಶಿರ್ವ, ಕಾಪು ಮತ್ತು ಪಡುಬಿದ್ರಿ ಠಾಣೆಗಳ ಸಿಬ್ಬಂದಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿ.ಡಿ.ಆರ್. ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.






