ಚಿಕ್ಕಮಗಳೂರು ನಗರದಲ್ಲಿ ಈದ್ ಮಿಲಾದ್ ಆಚರಣೆಗೆ ಸಂಬಂಧಿಸಿದಂತೆ ಟಿಪ್ಪು ಕಟೌಟ್ ಜತೆಗೆ ಪಾಕಿಸ್ತಾನ ಪರ ಹಾಡು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ರೀಲ್ ಪೋಸ್ಟ್ ಮಾಡಿದ ಆರೋಪದ ಮೇಲೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ರೋಷನ್(23) ಎಂಬಾತ ಬಂಧನಕ್ಕೊಳಗಾದ ಆರೋಪಿ. ಘಟನೆಗೆ ಸಂಬಂಧಿಸಿದಂತೆ ಇತರ ಏಳು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬುಧವಾರ ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಗೂ ಮುನ್ನ ಚಿಕ್ಕಮಗಳೂರಿನ ಟಿಪ್ಪು ನಗರ ಪ್ರದೇಶದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನನ ಕಟೌಟ್ ಅಳವಡಿಸಲಾಗಿತ್ತು. ಕಟೌಟ್ ಒಳಗೊಂಡ ವೀಡಿಯೊವನ್ನು ಪಾಕಿಸ್ತಾನದ ಮುಜಾಹಿದ್‌ಗೆ ಸಂಬಂಧಿಸಿದ ಹಾಡಿನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ‘ಚಿಕ್ಕಮಗಳೂರು ಪವರ್ ಟಿಪ್ಪುಬಾಯ್ಸ್’ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ್ದ ಈ ವೀಡಿಯೊ ವೈರಲ್ ಆಗಿತ್ತು.
ಬಳಿಕ, ಚಿಕ್ಕಮಗಳೂರು ಪಟ್ಟಣ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ರೋಷನ್(23) ಎಂಬಾತನನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮಾತನಾಡಿ, “ಪೊಲೀಸರು ಈಗಾಗಲೇ ಸ್ಥಳೀಯವಾಗಿ ಶಾಂತಿ ಸಭೆಗಳನ್ನು ನಡೆಸಿದ್ದಾರೆ ಮತ್ತು ಧಾರ್ಮಿಕ ಆಚರಣೆಗಳ ಸಮಯದಲ್ಲಿ ಅಸ್ತಿತ್ವದಲ್ಲಿರುವ ನಿಯಮಗಳು, ಆಚರಣೆಗಳನ್ನು ಅನುಸರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮಲ್ಪೆ ಮೀನುಗಾರ ಕಾರ್ಮಿಕನ ಕೊಲೆ ಪ್ರಕರಣದ ಆರೋಪಿ ಬಂಧನ
“ಆಚರಣೆಯ ಸಮಯದಲ್ಲಿ ಯಾವುದೇ ಹೊಸ ಪದ್ಧತಿ ಅಥವಾ ಮಾರ್ಗವನ್ನು ಪರಿಚಯಿಸಲು ಅವಕಾಶವಿರುವುದಿಲ್ಲ. ಈ ವರ್ಷ ಸ್ಥಾಪಿಸಲಾದ ಟಿಪ್ಪು ಸುಲ್ತಾನ್ ಕಟೌಟ್‌ನ ಗಾತ್ರ, ಸ್ಥಳ ಹಾಗೂ ಸಮಯವು ಹಿಂದಿನ ವರ್ಷಗಳಂತೆಯೇ ಇತ್ತು. ಆದರೆ ವೀಡಿಯೊವನ್ನು ರಚಿಸಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದವರನ್ನು ಪೊಲೀಸರು ಗುರುತಿಸಿದ್ದಾರೆ” ಎಂದು ಎಸ್‌ಪಿ ಹೇಳಿದರು.
“ಧಾರ್ಮಿಕ ಹಬ್ಬಗಳಿಗೆ ರಾಜಕೀಯ ಅಥವಾ ಕೋಮು ಬಣ್ಣವನ್ನು ನೀಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.




