ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತರೀಕೆರೆ ತಾಲೂಕಿನ ವಡ್ಡರದಿಬ್ಬ ಗ್ರಾಮದಲ್ಲಿ ಕುಡಿತದ ಚಟ ಹಾಗೂ ಮನೆಯಿಂದ ಹೊರದಬ್ಬುತ್ತಾರೆಂಬ ಆತಂಕಕ್ಕೆ ಹೆತ್ತ ತಂದೆಯನ್ನೇ ಮಗನೊಬ್ಬ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹತ್ಯೆಯಾದ ಮೃತ ವ್ಯಕ್ತಿ ತಮ್ಮಯ್ಯ (59), ಹತ್ಯೆಗೈದ ಹೆತ್ತ ಮಗ ಗಣೇಶ್ (29), ಮೊದಲ ಪತ್ನಿಯ ನಿಧನದ ನಂತರ ತಮ್ಮಯ್ಯ ಎರಡನೇ ಮದುವೆಯಾಗಿದ್ದರು. ಆದರೆ ಅಪ್ಪ-ಮಗ ಇಬ್ಬರ ನಿರಂತರ ಕುಡಿತದ ಚಟದಿಂದ ಬೇಸತ್ತು ಎರಡನೇ ಪತ್ನಿ ಮನೆ ಬಿಟ್ಟು ತೆರಳಿದ್ದರು. ಈ ನಡುವೆ ನಿನ್ನೆ ತಮ್ಮಯ್ಯ ತನ್ನ ಪತ್ನಿಗೆ ಕರೆ ಮಾಡಿ, ಸಂಸಾರವನ್ನು ಮತ್ತೆ ಸರಿಪಡಿಸಿಕೊಂಡು ಜೊತೆಯಾಗಿರುವಂತೆ ಮನವೊಲಿಸಲು ಯತ್ನಿಸಿದ್ದರು.
ಈ ವಿಚಾರ ತಿಳಿದ ಮೊದಲ ಪತ್ನಿಯ ಮಗ ಗಣೇಶ್, ತಂದೆ ಹಾಗೂ ಮಲತಾಯಿ ಒಂದಾದರೆ ತನ್ನನ್ನು ಮನೆಯಿಂದ ಹೊರಹಾಕಬಹುದು ಎಂಬ ಆತಂಕ ದಲ್ಲಿದ್ದ ಎನ್ನಲಾಗಿದೆ. ಇದೇ ಭಯ ಹಾಗೂ ಕುಡಿದ ಮತ್ತಿನಲ್ಲಿದ್ದ ಗಣೇಶ್, ತಂದೆಯೊಂದಿಗೆ ಜಗಳಕ್ಕಿಳಿದು ಏಕಾಏಕಿ ಮಚ್ಚಿನಿಂದ ಕುತ್ತಿಗೆಯ ಭಾಗಕ್ಕೆ ಕೊಚ್ಚಿ ಸ್ಥಳದಲ್ಲೇ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ: ವಿರೋಧಿಸಿ ಬೃಹತ್ ಪಾದಯಾತ್ರೆ
ಈ ಕುರಿತು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.




