ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಬೆಳಗೆರೆ ಪಂಚಾಯಿತಿ ವ್ಯಾಪ್ತಿಯ ಕಲಮರಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಕೊಠಡಿಯ ಕಟ್ಟಡದ ಕಾಮಗಾರಿ ಪ್ರಾರಂಭಗೊಂಡು ವರ್ಷವಾಗುತ್ತಾ ಬಂದರೂ ಕಾಮಗಾರಿಗೆ ಚಾಲನೆ ನೀಡದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಳೆಯ ಅಸ್ತವ್ಯಸ್ತಗೊಂಡ ಶಾಲಾ ಕೊಠಡಿಗಳಲ್ಲಿ ಪಾಠ ಪ್ರವಚನ ನಡೆಸುವಂತ ಅನಿವಾರ್ಯತೆ ಉಂಟಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
“ಉಳಿದ ಕೊಠಡಿಗಳಲ್ಲಿ ಛಾವಣಿ ಸೀಟುಗಳು ಹಲವು ಕಡೆ ಒಡೆದು ಮಳೆಗೆ ಸೋರುತ್ತಿದ್ದು, ನೆಲಕ್ಕೆ ಹಾಸಿದ ಕಡಪ ಕಲ್ಲುಗಳು ಒಡೆದು ಗುಂಡಿ ಬಿದ್ದಿವೆ. ಶಾಲೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಶಾಲೆ ಎದುರಿಗೆ ಎತ್ತರದ ರಸ್ತೆ ಇರುವ ಕಾರಣ ಮಳೆಯ ನೀರು ಹಾಗೂ ಮಲಿನಗೊಂಡ ನೀರು ಶಾಲೆಯ ಆವರಣದೊಳಕ್ಕೆ ನುಗ್ಗುತ್ತಿದೆ. 1ನೇ ತರಗತಿಯಿಂದ 7ನೇ ತರಗತಿವರೆಗೂ 45 ರಿಂದ 55ಕಿಂತ ಹೆಚ್ಚು ಮಕ್ಕಳು ಸ್ಥಳೀಯ ವಿದ್ಯಾ ಸಂಸ್ಥೆಗಳಿಗೆ ವಿದ್ಯಾಭ್ಯಾಸಕ್ಕೆ ಹೋಗದೆ ಪೋಷಕರು ಮತ್ತು ಗ್ರಾಮದ ಮುಖ್ಯಸ್ಥರ ಆಕಾಂಕ್ಷೆಯ ಮೇರೆಗೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ” ಎಂದು ಹೇಳಿದರು.
“ಪ್ರಾಥಮಿಕ ಶಾಲೆ ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ಪ್ರಚಾರದಲ್ಲಿ ಸರ್ಕಾರ ಉತ್ತೇಜನ ನೀಡುವ ಬದಲು ಪ್ರಾಥಮಿಕವಾಗಿ ಇಲ್ಲಿನ ಮೂಲಸೌಕರ್ಯಗಳ ಕೊರತೆಯ ನಿವಾರಣೆಗೆ ಗಮನ ಹರಿಸಬೇಕಾಗಿದೆ. ಈ ಶಾಲಾ ಆವರಣದ ಪ್ರಾಥಮಿಕ ಶಾಲಾ ಆವರಣದ ಪರಿಸ್ಥಿತಿ ಗಮನಿಸಿದಂತೆ ಶೌಚಾಲಯದ ಕೊರತೆ, ಮಳೆ ಬಂದರೆ ಸೋರಿ ಒದ್ದೆಯಾಗುವ ಹಳೆಯ ಶಾಲಾ-ಕೊಠಡಿಗಳನ್ನೂ ಗಮನಿಸಬೇಕು” ಎಂದು ಆಗ್ರಹಿಸಿದರು.
“ಒಬ್ಬರು ಮುಖ್ಯ ಶಿಕ್ಷಕರು, ಇಬ್ಬರು ಸಹ ಶಿಕ್ಷಕರು ಹಾಗೂ ಒಬ್ಬರು ಅತಿಥಿ ಶಿಕ್ಷಕರನ್ನು ಹೊರತುಪಡಿಸಿ ಶಿಕ್ಷಕರ ಕೊರತೆ ಇರುವುದರಿಂದ ಗ್ರಾಮದ ಮುಖ್ಯಸ್ಥರು ಮತ್ತು ಪಂಚಾಯಿತಿ ಸದಸ್ಯರ ನೆರವಿನೊಂದಿಗೆ ಮತ್ತೊಬ್ಬ ಅರೆಕಾಲಿಕ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರಾಥಮಿಕ ಶಾಲೆಯ ಕೊಠಡಿಗಳ ಕೊರತೆಯಿಂದ ಸಮಸ್ಯೆ ಹೆಚ್ಚಾಗಿದೆ” ಎಂದರು.
“ಕೊಠಡಿಗಳ ಸಮಸ್ಯೆ ಇರುವುದರಿಂದ ಗ್ರಾಮದ ನೆರವಿಗೆ ಸರ್ಕಾರದ ವಿವೇಕ ಯೋಜನೆಯಡಿ ಚಳ್ಳಕೆರೆಯ ಗುತ್ತಿಗೆದಾರ ಮುಜುಬುರ್ ರೆಹಮಾನ್ ಅವರಿಗೆ ಪಂಚಾಯಿತಿ ಮಟ್ಟದಲ್ಲಿ ಕಟ್ಟಡ ಕಾಮಗಾರಿಯನ್ನು ವಹಿಸಲಾಗಿತ್ತು. ಕಾಮಗಾರಿಯನ್ನು ವಹಿಸಿಕೊಂಡು ವರ್ಷವಾಗುತ್ತಾ ಬಂದರೂ ಪೂರ್ಣವಾಗದೆ ನೆನೆಗುದಿಗೆ ಬಿದ್ದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ರಮ ಒತ್ತುವರಿ ತೆರವಿಗೆ ಆಗ್ರಹ
“ಗ್ರಾಮಸ್ಥರು, ರೈತ ಸಂಘದ ಮುಖಂಡರು, ಊರಿನ ಮುಖ್ಯಸ್ಥರು ಕಟ್ಟಡ ಕಾಮಗಾರಿ ಬಗ್ಗೆ ವಿಚಾರಿಸುತ್ತಿದ್ದರೂ ನಾಳೆ, ಮುಂದಿನ ವಾರ ಮುಂದಿನ ತಿಂಗಳು ಕಾಮಗಾರಿ ಮಾಡುತ್ತೇವೆಂದು ಗುತ್ತಿಗೆದಾರರು ಸಬೂಬು ಹೇಳುತ್ತಿದ್ದಾರೆ” ಎಂದು ಆರೋಪಿಸಿದರು.
“ಗುತ್ತಿಗೆದಾರರೊಂದಿಗೆ ನೇರವಾಗಿ ದೂರವಾಣಿಯಲ್ಲಿ ಸಮಸ್ಯೆಯ ಕುರಿತು ಮಾತನಾಡಿದಾಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವಿಶ್ರಾಂತಿಯಲ್ಲಿದ್ದೇನೆ. ಮುಂದಿನ ವಾರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆಂದು ತಿಳಿಸಿದ್ದಾರೆ. ಇದೇ ರೀತಿ ಹಲವು ಆಶ್ವಾಸನೆಗಳನ್ನು ನೀಡಿದ್ದು, ಈವರೆಗೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಊರಿನ ಹಲವು ಮುಖಂಡರೂ ಸೇರಿ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.