ರಾಜ್ಯದ ಕಾಂಗ್ರೆಸ್ ಸರ್ಕಾರದ ‘ಅನ್ನಭಾಗ್ಯ’ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಅಕ್ಕಿ ನೀಡಲು ಒತ್ತಾಯಿಸದ ಸಂಸದರ ವಿರುದ್ಧ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಹಲವೆಡೆ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಕರ್ನಾಟಕದಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದರೂ ಕರ್ನಾಟಕಕ್ಕೆ ಅಕ್ಕಿ ಕೊಡುವಂತೆ ಮನವಿ ಸಲ್ಲಿಸಲು ಆಗಿಲ್ಲ. ಅಕ್ಕಿ ಸ್ಟಾಕ್ ಇಟ್ಟು ಇಲ್ಲ ಅಂತಿರುವುದು ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಬಿಜೆಪಿ ಸಂಸದರ ಮುಖವಾಡ ಧರಿಸಿ, ಅಕ್ಕಿ ಮೂಟೆಯ ರೀತಿಯ ಮಾದರಿಗಳನ್ನು ಹೊತ್ತುಕೊಂಡು ಸಂಸದರುಗಳ ವಿರುದ್ಧ ಧಿಕ್ಕಾರ ಕೂಗಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಸ್ಯಾಂಕಿ ಟ್ಯಾಂಕಿ ಡಾ. ರಾಜ್‌ಕುಮಾರ್ ಪುತ್ಥಳಿಯಿಂದ ಬಿಜೆಪಿ ಕಾರ್ಯಾಲಯದವರೆಗೆ ನಡೆದುಕೊಂಡು ಬಂದು ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಕರೆದೊಯ್ದರು.
ಪ್ರತಾಪ್‌ಸಿಂಹ ಕಾರಿಗೆ ತಡೆ
ಮೈಸೂರಿನಲ್ಲಿ ಕಾರ್ಯ ನಿಮಿತ್ತ ಕಚೇರಿಗೆ ಬಂದಿದ್ದ ಸಂಸದ ಪ್ರತಾಪ್ ಸಿಂಹ ಅವರ ಕಾರಿಗೂ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರತಿಭಟನಾಕಾರರನ್ನು ತಡೆದರು.
ನಿನ್ನೆ(ಜು.4) ರಾಜ್ಯದ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತಾ ಇಲ್ಲ ಎಂದು ಆರೋಪಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದರು. ಅಲ್ಲದೇ, ಸದನದ ಒಳಗಡೆ ಬಿಜೆಪಿ ಶಾಸಕರು ಧರಣಿ ನಡೆಸಿದ್ದರು.