ಈ ದಿನ ಸಂಪಾದಕೀಯ | ಮೈಸೂರು ಸ್ಯಾಂಡಲ್ ಸೋಪ್: ಭ್ರಷ್ಟ ಜನಪ್ರತಿನಿಧಿ, ಅಧಿಕಾರಶಾಹಿಗೆ ಬೇಕಿದೆ ಚಾಟಿಯೇಟು

Date:

ಮೈಸೂರು ಸ್ಯಾಂಡಲ್ ಸೋಪ್‌ನ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಉದ್ಯಮ ಪರಿಣತರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿರುವ ಈ ಬ್ರ್ಯಾಂಡ್, ರಾಜ್ಯದ ಸಾಬೂನು ಮಾರುಕಟ್ಟೆಯಲ್ಲೂ ಸಿಂಹಪಾಲು ಹೊಂದಿಲ್ಲ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಉಳಿದ ಬ್ರ್ಯಾಂಡ್‌ಗಳು ಹೆಚ್ಚಾಗಿ ಮಾರಾಟವಾಗುತ್ತಿದ್ದು, ಮೈಸೂರು ಸ್ಯಾಂಡಲ್ ಸೋಪ್ ಮಾರುಕಟ್ಟೆಯಲ್ಲಿ ಶೇ.3ರಷ್ಟು ಮಾತ್ರ ರಫ್ತು ವಹಿವಾಟು ಹೊಂದಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವರ ಸಾತ್ವಿಕ ಸಿಟ್ಟಿನಲ್ಲಿಯೂ ಒಂದು ಅರ್ಥವಿದೆ. ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕದ ಹೆಮ್ಮೆ ಎಂದೇ ಪರಿಗಣಿಸಲಾಗುವ ಒಂದು ಬ್ರ್ಯಾಂಡ್. ಸಂಪೂರ್ಣವಾಗಿ ಗಂಧದೆಣ್ಣೆಯಿಂದ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನು ಎನ್ನುವ ಹಿರಿಮೆ ಇದಕ್ಕಿದೆ. ತನ್ನ ವಿಶಿಷ್ಟ ಪರಿಮಳಕ್ಕೆ ಹೆಸರಾಗಿರುವ ಸೋಪ್, ತನ್ನ ಬ್ರ್ಯಾಂಡ್ ವೃದ್ಧಿಸಿಕೊಳ್ಳುವುದರಲ್ಲಿ, ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದರಲ್ಲಿ ವಿಫಲವಾಗಿರುವುದು ಅದರ ಚುಕ್ಕಾಣಿ ಹಿಡಿಯುವ ಜನಪ್ರತಿನಿಧಿಗಳ ಹಾಗೂ ಅಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳ ಭ್ರಷ್ಟಾಚಾರ, ಅದಕ್ಷತೆಯ ಸಂಕೇತವೂ ಆಗಿದೆ.

ಮೈಸೂರು ಸ್ಯಾಂಡಲ್ ಸಾಬೂನು ಕಾರ್ಖಾನೆಗೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ದಿವಾನರಾಗಿದ್ದ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲ. ಮೊದಲನೇ ಮಹಾಯುದ್ಧದ ಸಮಯದಲ್ಲಿ ಯುರೋಪಿಗೆ ಶ್ರೀಗಂಧವನ್ನು ರಫ್ತು ಮಾಡಲು ಸಾಧ್ಯವಾಗದಿದ್ದಾಗ ಹೇರಳವಾಗಿ ಇದ್ದ ಗಂಧದ ಮರದ ದಾಸ್ತಾನನ್ನು ಬಳಸಿಕೊಂಡು ಸಾಬೂನು ತಯಾರಿಸಲು ಮಹಾರಾಜರು ಮುಂದಾದರು. ಮೊದಲಿಗೆ 1916ರಲ್ಲಿ ಶ್ರೀಗಂಧದ ಮರಗಳಿಂದ ಎಣ್ಣೆ ತೆಗೆಯುವ ಕಾರ್ಖಾನೆಯನ್ನು ಆರಂಭಿಸಲಾಯಿತು. 1918ರಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಆರಂಭವಾಯಿತು. ಸ್ವಾತಂತ್ರ್ಯಾನಂತರದಲ್ಲಿ ಅದನ್ನು ಸಾರ್ವಜನಿಕ ಉದ್ದಿಮೆಯನ್ನಾಗಿ ಪರಿವರ್ತಿಸಲಾಯಿತು. 1980ರಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಮತ್ತು ಶಿವಮೊಗ್ಗದ ಗಂಧದೆಣ್ಣೆ ಕಾರ್ಖಾನೆಗಳನ್ನು ವಿಲೀನಗೊಳಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಯನ್ನಾಗಿ (ಕೆಎಸ್‌ಡಿಎಲ್‌) ಮರುನಾಮಕಾರಣ ಮಾಡಲಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎಲ್ಲ ಸವಲತ್ತುಗಳನ್ನು ಕಲ್ಪಿಸಿದರೂ ಕೆಎಸ್‌ಡಿಎಲ್ ನಿರೀಕ್ಷಿತ ಮಟ್ಟಕ್ಕೆ ಬೆಳೆಯಲೇ ಇಲ್ಲ. ಹಾಗೂ ಹೀಗೂ ತೆವಳಿಕೊಂಡು ಸಾಲದ ನೆರವಿನಿಂದ ಜೀವ ಹಿಡಿದುಕೊಂಡಿದ್ದ ಕಾರ್ಖಾನೆಗೆ 2003ರಲ್ಲಿ ಸರ್ಕಾರ ಸಾಲ ತೀರಿಸಲು ಸಹಾಯ ಮಾಡಿತು. 2006ರಲ್ಲಿ ಮೈಸೂರು ಸ್ಯಾಂಡಲ್‌ ಸಾಬೂನಿಗೆ ಜಿಐ (ಭೌಗೋಳಿಕ ಸೂಚನಾ) ಟ್ಯಾಗ್ ಸಿಕ್ಕಿತು. ಅದರ ನಂತರ ಕೆಎಸ್‌ಡಿಎಲ್ ಸಾಬೂನಿನ ಜೊತೆಗೆ ವಿವಿಧ ಉತ್ಪನ್ನಗಳನ್ನು ಕೂಡ ಉತ್ಪಾದಿಸತೊಡಗಿತು. ಜಿಐ ಟ್ಯಾಗ್ ಸಿಕ್ಕ ನಂತರ ಮೈಸೂರು ಸ್ಯಾಂಡಲ್‌ ಸಾಬೂನಿಗೆ ಬೇಡಿಕೆ ಹೆಚ್ಚಾಗಿತ್ತು. ಅಮೆರಿಕ, ಯೂರೋಪ್, ಮಧ್ಯ ಏಷ್ಯಾ ಸೇರಿದಂತೆ ಸುಮಾರು 25 ದೇಶಗಳಿಗೆ ಸಾಬೂನು ರಫ್ತಾಗುತ್ತದೆ. ಆದರೆ, ಇದೆಲ್ಲ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಾರುಕಟ್ಟೆಯನ್ನು ವಿಸ್ತರಿಸುವಲ್ಲಿ ಕೆಎಸ್‌ಡಿಎಲ್ ದಾರುಣವಾಗಿ ಸೋತಿದೆ.

ಮಾರುಕಟ್ಟೆ ವಿಸ್ತರಣೆಯಲ್ಲಿ ಕೆಎಸ್‌ಡಿಎಲ್ ಮೊದಲಿನಿಂದಲೂ ವಿಪರೀತ ಹಿಂದುಳಿದಿದೆ. ಒಂದು ಹಂತದಲ್ಲಿ 26000 ಟನ್‌ ಸಾಬೂನುಗಳನ್ನು ಉತ್ಪಾದಿಸಿ ಕೇವಲ 6 ಸಾವಿರ ಟನ್‌ಗಳಷ್ಟು ಮಾತ್ರ ಮಾರಾಟ ಮಾಡಿ ಸಂಕಷ್ಟಕ್ಕೆ ಸಿಲುಕಿತ್ತು. ಇದಕ್ಕೆ ಕಾರಣ ಕೆಎಸ್‌ಡಿಎಲ್ ಅಧ್ಯಕ್ಷರಾಗುವ ಶಾಸಕರು ಅಥವಾ ಪುಢಾರಿಗಳ ಭ್ರಷ್ಟಾಚಾರ; ಜೊತೆಗೆ ಕೆಎಸ್‌ಡಿಎಲ್‌ನ ಹಿರಿಯ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅದಕ್ಷತೆ.

ಎಂ ಬಿ ಪಾಟೀಲರು ಮೈಸೂರು ಸ್ಯಾಂಡಲ್‌ನ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಲು ಈಗ ಸಲಹೆ ಕೇಳಿದ್ದಾರೆ. ಆದರೆ, ಕೆಎಸ್‌ಡಿಎಲ್‌ನ ವ್ಯವಸ್ಥಾಪಕರು, ಪ್ರಚಾರ ವಿಭಾಗದ ಹೊಣೆ ಹೊತ್ತಿದ್ದವರು ಮೈಸೂರು ಸ್ಯಾಂಡಲ್ ಸೋಪ್‌ನ ಬ್ರ್ಯಾಂಡ್‌ ಮೌಲ್ಯವನ್ನು ಇತರೆ ಖಾಸಗಿ ಬ್ರ್ಯಾಂಡ್‌ಗಳ ಎದುರು ಕಡಿಮೆ ಮಾಡಲು ಲಂಚ ಪಡೆದ ಉದಾಹರಣೆಗಳು ಹಲವಿವೆ. ಅದರ ಬಗ್ಗೆ ಮಾಧ್ಯಮಗಳಲ್ಲಿ ಕಾಲದಿಂದ ಕಾಲಕ್ಕೆ ವರದಿಯಾಗುತ್ತಲೇ ಇದೆ. ಜೊತೆಗೆ ಸಾಬೂನು ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಪೂರೈಸುವಲ್ಲಿಯೂ ಪದೇ ಪದೆ ಹಗರಣಗಳು ನಡೆಯುತ್ತಿವೆ. 2014ರಲ್ಲಿ ಇಂಥದ್ದೇ ಹಗರಣ ನಡೆದಿತ್ತು. ಸಾಬೂನು ತಯಾರಿಕೆಯ ಕಚ್ಚಾ ವಸ್ತುಗಳನ್ನು ಪೂರೈಸಲು ಕೆಎಸ್‌ಡಿಎಲ್‌ 4.63 ಕೋಟಿ ರೂಪಾಯಿಯನ್ನು ಪಾವತಿಸಿದ್ದು, ಕಚ್ಚಾ ವಸ್ತುಗಳು ಇನ್ನೂ ಕಾರ್ಖಾನೆ ತಲುಪಿರಲಿಲ್ಲ. ಹಗರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆದು ಉಪ ಮಹಾ ಪ್ರಬಂಧಕರನ್ನು ಅಮಾನತ್ತು ಮಾಡಲಾಗಿತ್ತು.

ಕೆಲವೇ ತಿಂಗಳ ಹಿಂದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಮಾಡಾಳ್ ವಿರೂಪಾಕ್ಷಪ್ಪ ಮಗನ ಲಂಚಾವತಾರವಂತೂ ಆ ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿತ್ತು. 4.8 ಕೋಟಿ ರೂಪಾಯಿಯ ಕಚ್ಚಾ ವಸ್ತುಗಳ ಸರಬರಾಜು ಮಾಡುವ ಗುತ್ತಿಗೆ ನೀಡಲು ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗನಾದ ಪ್ರಶಾಂತ್ ಮಾಡಾಳು 81 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ನಂತರ ಮಾಡಾಳು ಅವರ ಮನೆಯ ಮೇಲೆ ದಾಳಿ ಮಾಡಿದಾಗ ಆರು ಕೋಟಿ ಅನಧಿಕೃತ ಹಣ ಪತ್ತೆಯಾಗಿತ್ತು. ಅವತ್ತೇ ಕೆಎಸ್‌ಡಿಎಲ್ ನೌಕರರ ಸಂಘವು ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸಿತ್ತು. ಕಂಪನಿಯು 139 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ಪಾವತಿಸಿದೆ. ನಿಯಮ ಮೀರಿ ಗುತ್ತಿಗೆಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ಉಂಡ ಮನೆಗೆ ಎರಡು ಬಗೆಯುವ ಅಧಿಕಾರಿಗಳು ಮತ್ತು ಇಂಥ ಜನಪ್ರತಿನಿಧಿಗಳಿಂದಲೇ ಮೈಸೂರು ಸ್ಯಾಂಡಲ್ ಸೋಪ್‌ನ ಬ್ರ್ಯಾಂಡ್ ಮೌಲ್ಯ ಕಡಿಮೆಯಾಗಿರುವುದು.

ಕೇವಲ ನೂರಾರು ಕೋಟಿಗಳ ವ್ಯವಹಾರ ನಡೆಯುವ ಕೆಎಸ್‌ಡಿಎಲ್‌ನಲ್ಲಿ ಇಷ್ಟು ದೊಡ್ಡ ಮೊತ್ತದ ಅವ್ಯವಹಾರಗಳು, ಹಗರಣಗಳು ನಡೆಯುತ್ತಿವೆ ಎಂದರೆ, ಸಮಸ್ಯೆ ಎಲ್ಲಿದೆ ಎನ್ನುವುದು ಸಚಿವರಿಗೆ ಅರ್ಥವಾಗಬೇಕಿದೆ.

ವಿಚಿತ್ರ ಎಂದರೆ, ಮೈಸೂರು ಸ್ಯಾಂಡಲ್ ಸಾಬೂನಿನ ಪೊಟ್ಟಣ ಮತ್ತು ಆಕಾರವನ್ನು ಹೋಲುವ ರೀತಿಯಲ್ಲೇ ಕೇರಳ ಸೋಪ್ ಆಂಡ್ ಆಯಿಲ್ಸ್ ಸಾಬೂನು ಕೂಡ ಮಾರುಕಟ್ಟೆಗೆ ಬಂದಿದೆ. ಇದರ ಬಗ್ಗೆ 2021ರಲ್ಲಿ ಕನ್ನಡ ಗೆಳೆಯರ ಬಳಗ ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗೆ ಮತ್ತು ಕೆಎಸ್‌ಡಿಎಲ್‌ಗೆ ದೂರು ನೀಡಿತ್ತು. ಅದರ ಕಥೆ ಏನಾಯಿತು ಎಂದು ಯಾರಿಗೂ ಗೊತ್ತಾಗಲಿಲ್ಲ.

ಕರ್ನಾಟಕದ ಜನಪ್ರಿಯವಾದ ಸಾರ್ವಜನಿಕವಾದ ಉದ್ದಿಮೆ ಇದು. ಭಾರತದ ಪರಿಮಳದ ರಾಯಭಾರಿ ಎಂದು ಕರೆಸಿಕೊಳ್ಳುವ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನೆಯಾಗುವ ಕಾರ್ಖಾನೆ ಸಮಸ್ಯೆಗಳ ಆಗರವಾಗಿದೆ. ಆ ಸಮಸ್ಯೆಗಳ ಮೂಲಕ್ಕೆ ಕೈ ಹಾಕದೇ ಕೇವಲ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಲು ಹೋದರೆ, ಅದು ಫಲ ಕಾಣುವುದಿಲ್ಲ ಎನ್ನುವುದು ಎಂ ಬಿ ಪಾಟೀಲ್‌ ಅವರಿಗೆ ಅರ್ಥವಾಗಬೇಕಿದೆ. ಗಂಧದ ನಾಡು ಎಂದು ಹೆಸರಾಗಿರುವ ಕರ್ನಾಟಕದ ವಿಶಿಷ್ಟ ಉತ್ಪನ್ನಗಳಲ್ಲಿ ಒಂದಾದ ಮೈಸೂರು ಸ್ಯಾಂಡಲ್ ಸಾಬೂನನ್ನು ಉಳಿಸಿಕೊಳ್ಳಬೇಕಾಗಿರುವುದು ಅದರ ಬಗ್ಗೆ ಪ್ರೀತಿ, ಹೆಮ್ಮೆ ಇರುವ ಕನ್ನಡಿಗರೆಲ್ಲರ ಜವಾಬ್ದಾರಿಯೂ ಆಗಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಷ್ಟ್ರಪತಿ ಮುರ್ಮು ‘ಘಾಸಿʼಗೊಳ್ಳಲು ಕೋಲ್ಕತ್ತ ಪ್ರಕರಣದ ತನಕ ಕಾಯಬೇಕಿತ್ತೇ?

ಕೋಲ್ಕತ್ತದ ತರಬೇತಿ ನಿರತ ವೈದ್ಯೆ ಮೇಲಿನ ಅತ್ಯಾಚಾರದಿಂದ ದೇಶವೇ ಆಘಾತಗೊಂಡಿದೆ ಎಂದು...

ಈ ದಿನ ಸಂಪಾದಕೀಯ | ಮೇಕೆದಾಟು ಮಧ್ಯಸ್ಥಿಕೆ ವಹಿಸದ ಕೇಂದ್ರ, ದಕ್ಷಿಣದ ರಾಜ್ಯಗಳಿಗಿದು ಸಕಾಲ

ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಹಿಂದೆ ಸರಿದಿರುವ ಈ ಸಂದರ್ಭದಲ್ಲಾದರೂ, ಯೋಜನೆಯ...

ಈ ದಿನ ಸಂಪಾದಕೀಯ | ಅತ್ಯಾಚಾರಿಗೆ ಶಿಕ್ಷೆ; ನುಡಿದಂತೆ ನಡೆಯಲಿ ನರೇಂದ್ರ ಮೋದಿ

ದೆಹಲಿಯ ನಿರ್ಭಯ ಪ್ರಕರಣದ ನಂತರ 2013ರಲ್ಲಿ ʼನಿರ್ಭಯ ನಿಧಿʼ ಸ್ಥಾಪಿಸಲಾಗಿತ್ತು. ಈ...

ಈ ದಿನ ಸಂಪಾದಕೀಯ | ದರ್ಶನಾತಿಥ್ಯ- ಪೊಲೀಸರಿಂದ ಪೊಲೀಸರಿಗಾದ ಅವಮಾನ

ಪೊಲೀಸ್‌ ಇಲಾಖೆ ಎಂದಾಕ್ಷಣ ನ್ಯಾಯ ಸಿಗುವುದಿಲ್ಲ ಎಂಬ ಸಾಮಾನ್ಯ ಜನಾಭಿಪ್ರಾಯವನ್ನು ದರ್ಶನಾತಿಥ್ಯ...