ನಾಡಿನ ರೈತರ ಜೀವನಾಡಿ ಆಗಿರುವ ಜಲಾಶಯಗಳ ನಿರ್ವಹಣೆ ಬಗ್ಗೆ ಕಾಂಗ್ರೆಸ್ ಸರ್ಕಾರದ ಅಸಡ್ಡೆ, ನಿರ್ಲಕ್ಷ್ಯದಿಂದ ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತ ಸಂಭವಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಈಗ ಮತ್ತೊಂದು ಮತ್ತೊಂದು ಅಣೆಕಟ್ಟು ಅಪಾಯದ ಅಂಚಿನಲ್ಲಿರುವುದು ಬೆಳಕಿಗೆ ಬಂದಿದೆ. ಗದಗ ಮತ್ತು ವಿಜಯನಗರ ಜಿಲ್ಲೆಗಳ ನೀರಾವರಿಗಾಗಿ ಅನುಷ್ಠಾನಗೊಂಡ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಹಮ್ಮಗಿ ಬ್ಯಾರೇಜ್ ನ ಗೇಟ್ ಗಳ ದುರಸ್ತಿಗೆ ಬಂದಿವೆ ಒಂದು ವರ್ಷದ ಹಿಂದೆಯೇ ಮುನ್ಸೂಚನೆ ನೀಡಿದ್ದರೂ ಸರ್ಕಾರ ಇದುವರೆಗೂ ಗೇಟ್ ಗಳ ದುರಸ್ತಿ ಕಾರ್ಯ ಆರಂಭಿಸಿಲ್ಲ” ಎಂದು ಟೀಕಿಸಿದ್ದಾರೆ.
“ಸಿಎಂ ಸಿದ್ದರಾಮಯ್ಯ ನವರೇ, ಹಮ್ಮಗಿ ಬ್ಯಾರೇಜ್ ನ 5-6 ಗೇಟುಗಳು ಶಿಥಿಲಗೊಂಡಿರುವ ವರದಿ ಇದೆ. ತಮ್ಮ ಪಾರ್ಟ್ ಟೈಮ್ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಇಲಾಖೆ ನಿರ್ವಹಿಸಲು ಪುರುಸೊತ್ತಿಲ್ಲದಿದ್ದರೆ, ನೀರಾವರಿ ಖಾತೆಯನ್ನು ಬೇರೆ ಯಾರಾದರೂ ಸಮರ್ಥ ಸಚಿವರಿಗೆ ಒಪ್ಪಿಸಿ” ಎಂದು ಆಗ್ರಹಿಸಿದ್ದಾರೆ.
“ಒಬ್ಬ ಪಾರ್ಟ್ ಟೈಮ್ ಮಂತ್ರಿ, ಫುಲ್ ಟೈಮ್ ಕೆಪಿಸಿಸಿ ಅಧ್ಯಕ್ಷರಿಗೆ ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಅಂತಹ ಪ್ರಮುಖ ಖಾತೆ ನೀಡಿ ಜನರ ಬದುಕಿನ ಜೊತೆ ಚೆಲ್ಲಾಟವಾಡಬೇಡಿ. ನಿಮ್ಮ ರಾಜಕೀಯ ತೆವಲಿಗೆ ಜಲಾಶಯಗಳನ್ನ ನಿರ್ಲಕ್ಷಿಸಿ ಅನ್ನದಾತರು, ಜನ ಸಾಮಾನ್ಯರ ಬದುಕನ್ನು ಅಪಾಯಕ್ಕೆ ತಳ್ಳಬೇಡಿ” ಎಂದು ಹರಿಹಾಯ್ದಿದ್ದಾರೆ.
“ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ತುಂಗಭದ್ರಾ ನದಿ ಪಾತ್ರದ ರೈತರ ಕನಸು ನುಚ್ಚು ನೂರಾಗಿದೆ. ಅನ್ನದಾತರ ಕಣ್ಣೀರು ಒರೆಸಬೇಕಾದ ಸರ್ಕಾರವೇ ಅನ್ನದಾತರ ಕಣ್ಣೀರಿಗೆ ಕಾರಣವಾಗಿದೆ. ನಾಡಿನ ರೈತರ ಶಾಪ ಈ ದರಿದ್ರ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು” ಎಂದಿದ್ದಾರೆ.