ಯೆನೆಪೋಯ (ಪರಿಗಣಿತ) ವಿಶ್ವವಿದ್ಯಾಲಯದ ಘಟಕ ಸಂಸ್ಥೆಯಾದ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಎನ್ಎಸ್ಎಸ್ ಪ್ರಶಸ್ತಿಗೆ ಕಾಲೇಜಿನ ಒಬ್ಬ ಅಧ್ಯಾಪಕಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಕಾಲೇಜಿನ ಎನ್ಎಸ್ಎಸ್ ಘಟಕಕ್ಕೂ ಪ್ರಶಸ್ತಿ ಲಭಿಸಿದೆ. ಈ ಮೂಲಕ ಸಂಸ್ಥೆಗೆ ಒಟ್ಟು ನಾಲ್ಕು ರಾಜ್ಯಮಟ್ಟದ ಪ್ರಶಸ್ತಿಗಳು ದೊರೆತಿವೆ.
2023-24ನೇ ಸಾಲಿನ ಅತ್ಯುತ್ತಮ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೊಲಿನ್ ಜಾನೆಟ್ ಭಾಜನರಾಗಿದ್ದಾರೆ. ಇದೇ ಸಾಲಿನ ಅತ್ಯುತ್ತಮ ಎನ್ಎಸ್ಎಸ್ ಸ್ವಯಂಸೇವಕ ಪ್ರಶಸ್ತಿಯನ್ನು ಕಾಲೇಜಿನ ವಿದ್ಯಾರ್ಥಿ ಶ್ರೀಜನ್ ಬಿ.ಸಿ. ಪಡೆದುಕೊಂಡಿದ್ದಾರೆ. 2024-25ನೇ ಸಾಲಿನ ಅತ್ಯುತ್ತಮ ಎನ್ಎಸ್ಎಸ್ ಸ್ವಯಂಸೇವಕಿ ಪ್ರಶಸ್ತಿಗೆ ವಿದ್ಯಾರ್ಥಿನಿ ಸಾನಿಯಾ ಕೆ. ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕಾಲೇಜಿನ ಎನ್ಎಸ್ಎಸ್ ಘಟಕಕ್ಕೂ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
ಸಮಾಜಮುಖಿ ಚಟುವಟಿಕೆಗಳು, ಸಮುದಾಯ ಸೇವೆ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ವಿವಿಧ ಜನಪರ ಕಾರ್ಯಗಳಲ್ಲಿ ಎನ್ಎಸ್ಎಸ್ ಘಟಕದ ಮೂಲಕ ಸಲ್ಲಿಸಿದ ಸೇವೆ ಮತ್ತು ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಕರ್ನಾಟಕ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಎನ್ಎಸ್ಎಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಗಣ್ಯರು ಭಾಗವಹಿಸುವರು.
ಈ ಸಾಧನೆಗೆ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿಗಳು, ಸಹಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಅಶ್ವಿನಿ ಶೆಟ್ಟಿ ಅವರು ಕಾಲೇಜಿನ ಎನ್ಎಸ್ಎಸ್ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಾ ಬಂದಿದ್ದು, ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ಕಾಲೇಜಿನ ಪ್ರಾಂಶುಪಾಲ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಪ್ರೊ. ಜೀವನ್ ರಾಜ್, ಉಪಪ್ರಾಂಶುಪಾಲರಾದ ಪ್ರೊ. ರತ್ನಾಕರ ಶೆಟ್ಟಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ,ಮತ್ತು ವಿದ್ಯಾರ್ಥಿಗಳು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ




