ರಾಷ್ಟ್ರ ರಾಜಧಾನಿ ದೆಹಲಿಯಿಂದ ಕಾಶ್ಮೀರ ಕಣಿವೆಗೆ ಅಕ್ರಮವಾಗಿ ಔಷಧೀಯ ಮಾದಕವಸ್ತುಗಳನ್ನು ಪೂರೈಸುತ್ತಿದ್ದ ಬೃಹತ್ ಅಂತಾರಾಜ್ಯ ಜಾಲವನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ (NCB) ಭೇದಿಸಿದೆ. ಜಮ್ಮು ಮತ್ತು ದೆಹಲಿ ವಲಯ ಘಟಕಗಳ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, 7 ಕೆಜಿಗೂ ಅಧಿಕ ಕೊಡೈನ್ ಆಧಾರಿತ ಕೆಮ್ಮಿನ ಸಿರಪ್ (CBCS) ಮತ್ತು ಐದು ಲಕ್ಷಕ್ಕೂ ಹೆಚ್ಚು ಮಾತ್ರೆ, ಕ್ಯಾಪ್ಸುಲ್ ಹಾಗೂ ಔಷಧ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ನವೆಂಬರ್ 16ರ ಮುಂಜಾನೆ ಜಮ್ಮುವಿನ ಉಧಂಪುರ ಜಿಲ್ಲೆಯ ಚೆನಾನಿಯ ಮಡಾ ಟೋಲ್ ಪ್ಲಾಜಾ ಬಳಿ ಶ್ರೀನಗರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ಸೊಂದನ್ನು NCB ತಂಡ ತಡೆದು ತಪಾಸಣೆ ನಡೆಸಿತು. ಈ ವೇಳೆ ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾ ನಿವಾಸಿಯೊಬ್ಬನ ಬಳಿಯಿದ್ದ ಸುಮಾರು 7 ಕೆಜಿ ಕೊಡೈನ್ ಆಧಾರಿತ ಕೆಮ್ಮಿನ ಸಿರಪ್ ಅನ್ನು ವಶಪಡಿಸಿಕೊಳ್ಳಲಾಯಿತು. ಈ ಸಂಬಂಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಲಾಯಿತು.
ಬಂಧಿತನ ವಿಚಾರಣೆ ಮತ್ತು ಮುಂದುವರಿದ ತನಿಖೆಯ ಆಧಾರದ ಮೇಲೆ ಕಾಶ್ಮೀರದ ಅನಂತನಾಗ್‌ನಲ್ಲಿದ್ದ ಸ್ವೀಕರಿಸುವವನನ್ನು ಬಂಧಿಸಲಾಯಿತು. ಜಾಲದ ಮೂಲವನ್ನು ಬೆನ್ನತ್ತಿದ ಅಧಿಕಾರಿಗಳು ದೆಹಲಿಯ ಪೂರೈಕೆದಾರರನ್ನು ಬಂಧಿಸಿ, ನವೆಂಬರ್ 18ರಂದು 356 ಬಾಟಲಿ ಕೆಮ್ಮಿನ ಸಿರಪ್ ಜಪ್ತಿ ಮಾಡಿದರು.
ತನಿಖೆ ಮುಂದುವರಿಸಿದಾಗ ಈಶಾನ್ಯ ದೆಹಲಿಯ ಶಹದಾರಾದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ರಹಸ್ಯ ಗೋದಾಮು ಪತ್ತೆಯಾಯಿತು. ನವೆಂಬರ್ 18 ಮತ್ತು 19ರಂದು ಈ ಗೋದಾಮಿನ ಮೇಲೆ ನಡೆದ ದಾಳಿಯಲ್ಲಿ ಟ್ರಮಾಡಾಲ್ ಹೈಡ್ರೋಕ್ಲೋರೈಡ್, ಅಲ್ಪರಾಜೋಲಮ್, ನಿಟ್ರಾಜೆಪಮ್ ಮತ್ತು ಕೊಡೈನ್ ಅಂಶವುಳ್ಳ 5 ಲಕ್ಷಕ್ಕೂ ಅಧಿಕ ಮಾತ್ರೆಗಳು, ಕ್ಯಾಪ್ಸುಲ್‌ಗಳು ಹಾಗೂ ಸಿರಪ್ ಬಾಟಲಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
2029ರ ಡಿಸೆಂಬರ್ 31ರೊಳಗೆ ದೇಶದಿಂದ ಎಲ್ಲಾ ಮಾದಕವಸ್ತು ಜಾಲಗಳನ್ನು ನಿರ್ಮೂಲನೆ ಮಾಡುವ ಕೇಂದ್ರ ಸರ್ಕಾರದ ಗುರಿಗೆ ಪೂರಕವಾಗಿ ಈ ಕಾರ್ಯಾಚರಣೆ ನಡೆದಿದೆ. ಕೇವಲ ಜಪ್ತಿ ಮತ್ತು ಬಂಧನಕ್ಕೆ ಸೀಮಿತವಾಗದೆ, ಕಾನೂನುಬದ್ಧ ಔಷಧ ಪೂರೈಕೆ ಸರಪಳಿಯಿಂದ ಈ ಔಷಧಗಳು ಎಲ್ಲಿ ಮತ್ತು ಹೇಗೆ ಅಕ್ರಮ ಮಾರುಕಟ್ಟೆಗೆ ಸೋರಿಕೆಯಾಗುತ್ತಿವೆ ಎಂಬುದನ್ನು ಪತ್ತೆಹಚ್ಚಲು NCB ಮುಂದಾಗಿದೆ. ಜಾಲದ ಹಿಂದಿರುವ ಆರ್ಥಿಕ ವಹಿವಾಟು ಮತ್ತು ಪ್ರಮುಖ ಪೂರೈಕೆದಾರರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕವಸ್ತು ಕಳ್ಳಸಾಗಣೆ ಅಥವಾ ಅಕ್ರಮ ಮಾರಾಟದ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ, ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ MANAS (1933) ಗೆ ಕರೆ ಮಾಡಿ ಮಾಹಿತಿ ನೀಡುವಂತೆ NCB ಮನವಿ ಮಾಡಿದೆ.



