ದಕ್ಷಿಣ ಕನ್ನಡ ವಿಚಾರವಾದಿ ಸಂಘಕ್ಕೆ 50 ವರ್ಷಗಳನ್ನು ಪೂರೈಸುತ್ತಿದ್ದು, ಮುಂದೆ ಎದುರಾಗಲಿರುವ ಹೊಸ ಸವಾಲುಗಳನ್ನು ಎದುರಿಸಲು ಯುವ ಪೀಳಿಗೆಯನ್ನು ಜೊತೆಗೂಡಿಸಿಕೊಂಡು ಮುನ್ನಡೆಯುತ್ತಿರುವ ಉದ್ದೇಶದೊಂದಿಗೆ ವರ್ಷಪೂರ್ತಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದೆ.
ಈ ಕುರಿತು ಇಂದು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ನರೇಂದ್ರ ನಾಯಕ್ “ಬದಲಾದ ಕಾಲ ಮತ್ತು ಸನ್ನಿವೇಶಗಳಲ್ಲಿ ಅಲೌತಿಕ ಶಕ್ತಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಹಳೆಯ ನಂಬಿಕೆಗಳ ಜಾಗವನ್ನು ಈಗ ಹೊಸ ಬಗೆಯ ವಂಚನೆಗಳು ಆಕ್ರಮಿಸಿಕೊಂಡಿವೆ. ವಿಜ್ಞಾನದ ಪ್ರಗತಿಯಿಂದ ರೂಪುಗೊಂಡ ಅತ್ಯಾಧುನಿಕ ತಂತ್ರಜ್ಞಾನವನ್ನು ಅವೈಜ್ಞಾನಿಕ ವಿಚಾರಗಳನ್ನು ಹರಡಲು ಬಳಸಲಾಗುತ್ತಿದೆ. ನಾವು 21ನೇ ಶತಮಾನದ ತಂತ್ರಜ್ಞಾನದ ಮೇಲೆ 15ನೇ ಶತಮಾನದ ಮನಸ್ಥಿತಿಯನ್ನು ಹೇರಿರುವ ಸಮಾಜದಲ್ಲಿದ್ದೇವೆ. ಬಹುಪಾಲು ಮೂಢನಂಬಿಕೆಗಳೇ ತುಂಬಿರುವ ಅವೈಜ್ಞಾನಿಕ ವಿಚಾರಗಳನ್ನು ಹರಡಲು ವರ್ತಮಾನ ಕಾಲದ ವಿಜ್ಞಾನದ ಪ್ರಗತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.
“ಸಂಘದ 50ನೇ ವರ್ಷದ ಸಂದರ್ಭದಲ್ಲಿ ಆಸಕ್ತ ಯುವಕರನ್ನು ಸಂಘಟಿಸಿ ವೈಚಾರಿಕ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಅವರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ 2026-27ರ ಸಾಲಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದರ ಅಂಗವಾಗಿ, ನವೆಂಬರ್ 22ರಂದು ಮಂಗಳೂರಿನ ಬಿಜೈ ಕಾಪಿಕಾಡ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದೊಂದಿಗೆ ಈ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತಿದೆ” ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.




