ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉಳ್ಳಾಲ ವಲಯ ಸಮಿತಿಯ ನೇತೃತ್ವದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಇಂದು ದೇರಳಕಟ್ಟೆ ಜಂಕ್ಷನ್‌ನಿಂದ ಉಳ್ಳಾಲ ತಾಲೂಕು ಕಚೇರಿವರೆಗೆ ಕಟ್ಟಡ ಕಾರ್ಮಿಕರ ಮೆರವಣಿಗೆ ನಡೆಯಿತು. ಬಳಿಕ ತಾಲೂಕು ಕಚೇರಿಯ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, “ಕೇಂದ್ರದ ಸರ್ಕಾರವು ಈ ಹಿಂದೆ ಜಾರಿಯಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ವಿಲೀನಗೊಳಿಸಿರುವುದು ಕಾರ್ಮಿಕರ ಉದ್ಯೋಗ ಭದ್ರತೆ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಸಂಘಟಿಸುವ ಮತ್ತು ಸಾಮೂಹಿಕ ಚೌಕಾಸಿ ನಡೆಸುವ ಹಕ್ಕುಗಳಿಗೆ ಧಕ್ಕೆಯಾಗುವ ಆತಂಕವಿದೆ. ಕಾರ್ಮಿಕ ಕಾನೂನುಗಳನ್ನು ಸರಳೀಕರಣಗೊಳಿಸುವ ಹೆಸರಿನಲ್ಲಿ ಉದ್ಯೋಗದಾತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಬದಲು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಆದ್ಯತೆಯಾಗಬೇಕು” ಎಂದು ಆಗ್ರಹಿಸಿದರು.
CITU ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, “ದೇಶದ ನಿರ್ಮಾಣ ಕ್ಷೇತ್ರಕ್ಕೆ ಬೆನ್ನೆಲುಬಾಗಿರುವ ಕಟ್ಟಡ ಕಾರ್ಮಿಕರ ಬದುಕು ಮತ್ತು ಭವಿಷ್ಯವನ್ನು ಅತಂತ್ರಗೊಳಿಸುವ ಈ ಸಂಹಿತೆಗಳನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರಿಸಬೇಕು. ರಾಜ್ಯ ಸರಕಾರವು ಕೇಂದ್ರ ಸರಕಾರ ಜಾರಿಗೊಳಿಸಿದ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು. ಬದಲಾಗಿ ಕಟ್ಟಡ ಕಾರ್ಮಿಕರಿಗೆ ಪೂರಕವಾಗಿ ರಾಜ್ಯ ಸರಕಾರ ನೀತಿ ನಿರೂಪಣೆ ಮಾಡಬೇಕು” ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ CITU ಮುಖಂಡ ಜಯಂತ ನಾಯಕ್, ರೈತ ಮುಖಂಡ ಕೃಷ್ಣಪ್ಪ ಸಾಲಿಯಾನ್, ಕಟ್ಟಡ ಕಾರ್ಮಿಕರ ಉಳ್ಳಾಲ ತಾಲೂಕು ಅಧ್ಯಕ್ಷ ಜನಾರ್ದನ ಕುತ್ತಾರ್ ಹಾಗೂ ಕಾರ್ಯದರ್ಶಿ ಚಂದ್ರಹಾಸ್ ಪಿಲಾರ್ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ರೋಹಿದಾಸ್ ಭಟ್ನಗರ, ರಾಮಚಂದ್ರ ಪಜೀರ್, ಇಬ್ರಾಹಿಂ ಮದಕ, ಜಯರಾಂ ತೇವುಲ, ಶೇಖರ ಪಿಲಾರ್, ಮಹಮ್ಮದ್ ಬಸೀರ್, ಹರೀಶ್ ಅಸೈಗೋಳಿ, ವಿನೋದ್ ಬಾಳೆಪುಣಿ, ನವೀನ್, ಮಹಿಳಾ ಮುಖಂಡರಾದ ಪ್ರಮೋದಿನಿ, ವಲಸೆ ಕಾರ್ಮಿಕರ ಮುಖಂಡರಾದ ಮೆಹಬೂಬ್, ಹಾಗೂ ಮಹಾಂತೇಶ್ ವಹಿಸಿದ್ದರು.




