ಹೆಣ್ಮಕ್ಕಳು ಜೀವನದಲ್ಲಿ ಶಿಕ್ಷಣ, ಮದುವೆ ಹಾಗೂ ಮಾತೃತ್ವ ಎಂಬ ಮೂರು ಪ್ರಮುಖ ಹಂತಗಳನ್ನು ಹಾದು ಹೋಗುತ್ತಾರೆ. ಮದುವೆ ಮತ್ತು ಮಾತೃತ್ವದ ಹಂತಗಳಲ್ಲಿ ಅನೇಕ ಮಹಿಳೆಯರು ಮಾನಸಿಕವಾಗಿ ಕುಗ್ಗುವ ಸಾಧ್ಯತೆಗಳಿರುತ್ತವೆ. ಆದರೆ ಮಾತೃಭಾಷೆ ಹಾಗೂ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಮಹಿಳೆಯರ ಮನೋಬಲ ಯಾವುದೇ ಸವಾಲುಗಳನ್ನು ಎದುರಿಸುವಷ್ಟು ದೃಢವಾಗಿರುತ್ತದೆ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಭಿಪ್ರಾಯಪಟ್ಟರು.
ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಬುಧವಾರ ನಗರದ ಅಡ್ಯಾರಿನ ಬರಕ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಸಹಯೋಗದಲ್ಲಿ ಪದವಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಬ್ಯಾರಿ ಸಾಹಿತ್ಯ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರು ಆತ್ಮವಿಶ್ವಾಸ, ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಳೆದಾಗ ಸಮಾಜದಲ್ಲಿ ಉತ್ತಮ ನಾಯಕತ್ವವನ್ನು ವಹಿಸಲು ಸಾಧ್ಯವಾಗುತ್ತದೆ. ಮಾತೃಭಾಷೆಯೊಂದಿಗೆ ಬೆಸೆದುಕೊಂಡಿರುವ ಸಂಸ್ಕಾರ ಮತ್ತು ಮೌಲ್ಯಗಳು ಜೀವನದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಮಾನಸಿಕ ಸ್ಥೈರ್ಯವನ್ನು ನೀಡುತ್ತವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬ್ಯಾರಿ ಅಕಾಡಮಿಯ ಮಾಜಿ ಸದಸ್ಯೆ ಆಯಿಶಾ ಯು.ಕೆ. ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಸಾಹಿತ್ಯ ಮತ್ತು ಭಾಷೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಅತಿಥಿಗಳಾಗಿ ಬರಕ ಇಂಟರ್‌ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಬಿ.ಎಸ್. ಶರಪುದ್ದೀನ್ ಹಾಗೂ ಉಪಪ್ರಾಂಶುಪಾಲೆ ನಸ್ರೀನ್ ಉಪಸ್ಥಿತರಿದ್ದರು.
ಬ್ಯಾರಿ ಅಕಾಡಮಿಯ ಸದಸ್ಯೆ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕಿ ಶಮೀರಾ ಜಹಾನ್ ಸ್ವಾಗತಿಸಿದರು. ಅಕಾಡಮಿಯ ಸದಸ್ಯೆ ಸಾರಾ ಅಲಿ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಮಶೂರ ಮತ್ತು ತಂಡ ಸ್ತುತಿಗೀತೆ ಹಾಡಿದರು. ಸಫಾ ಕಿರಾಅತ್ ಪಠಿಸಿದರು. ಶಿಫ್ನ ವಂದಿಸಿದರು.





