ಹಬ್ಬಗಳ ಸೀಸನ್ ಆರಂಭವಾಗುವ ಮುನ್ನವೇ ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದೆ. ಟೂತ್‌ಪೇಸ್ಟ್, ಡಿಟರ್ಜೆಂಟ್, ಪಾತ್ರೆ ತೊಳೆಯುವ ಬಾರ್, ವಾಲ್ ಪೇಂಟ್, ಟೈರ್ ಸೇರಿದಂತೆ ಹಲವು ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಂಪನಿಗಳು ಸಿದ್ಧತೆ ನಡೆಸಿವೆ ಎನ್ನಲಾಗಿದೆ.
ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ಉದ್ವಿಗ್ನತೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚಳದಿಂದ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಪರಿಣಾಮವಾಗಿ ಕಂಪನಿಗಳು ಹೆಚ್ಚಿದ ವೆಚ್ಚವನ್ನು ಗ್ರಾಹಕರ ಮೇಲೆಯೇ ವರ್ಗಾಯಿಸಲು ಮುಂದಾಗಿವೆ ಎಂದು ವರದಿಗಳು ತಿಳಿಸಿವೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಹಿಂದೂಸ್ತಾನ್ ಯೂನಿಲಿವರ್ (HUL), ಏಷ್ಯನ್ ಪೇಂಟ್ಸ್, ಹ್ಯಾವೆಲ್ಸ್, ದೋಡ್ಲಾ ಡೈರಿ ಸೇರಿದಂತೆ ಕನಿಷ್ಠ ಎಂಟು ಪ್ರಮುಖ ಕಂಪನಿಗಳು ಹಬ್ಬದ ಸೀಸನ್‌ಗೆ ಮುನ್ನವೇ ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸುವ ಸೂಚನೆ ನೀಡಿವೆ.
ನೊಮುರಾ ಹೋಲ್ಡಿಂಗ್ಸ್‌ನ ಏಷ್ಯಾ ವಿಭಾಗದ ಮುಖ್ಯ ಅರ್ಥಶಾಸ್ತ್ರಜ್ಞ ಸೋನಲ್ ವರ್ಮಾ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಲಾಭಾಂಶದ ಮೇಲಿನ ಒತ್ತಡದಿಂದಾಗಿ ಕಂಪನಿಗಳಿಗೆ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದಿದ್ದಾರೆ.
ಹಿಂದೂಸ್ತಾನ್ ಯೂನಿಲಿವರ್ ಮುಂದಿನ ಕೆಲವು ತಿಂಗಳಲ್ಲಿ ಡಿಟರ್ಜೆಂಟ್ ಹಾಗೂ ಪಾತ್ರೆ ತೊಳೆಯುವ ಉತ್ಪನ್ನಗಳ ಬೆಲೆಯನ್ನು ಹಂತ ಹಂತವಾಗಿ ಹೆಚ್ಚಿಸುವುದಾಗಿ ತಿಳಿಸಿದೆ. ಕಂಪನಿಯ ವಿಮ್, ಸರ್ಫ್ ಎಕ್ಸೆಲ್, ರಿನ್, ವೀಲ್ ಸೇರಿದಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ನಿರಂಜನ್ ಗುಪ್ತಾ ಅವರ ಪ್ರಕಾರ, ಕಚ್ಚಾ ತೈಲ ಆಧಾರಿತ ವಸ್ತುಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಅದರ ಪರಿಣಾಮವಾಗಿ ಗೃಹ ಬಳಕೆಯ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಏಷ್ಯನ್ ಪೇಂಟ್ಸ್, ದೋಡ್ಲಾ ಡೈರಿ ಸೇರಿದಂತೆ ಇತರ ಕಂಪನಿಗಳೂ ತಮ್ಮ ಉತ್ಪನ್ನಗಳ ಬೆಲೆ ಪರಿಷ್ಕರಿಸಲು ಮುಂದಾಗಿವೆ. ಇದರ ಪರಿಣಾಮವಾಗಿ ಮನೆಗೆ ಬಳಸುವ ಪೇಂಟ್, ಸೋಪ್, ಟೂತ್‌ಪೇಸ್ಟ್, ತುಪ್ಪ, ಬೆಣ್ಣೆ ಸೇರಿದಂತೆ ಹಲವು ಅಗತ್ಯ ವಸ್ತುಗಳು ದುಬಾರಿಯಾಗುವ ಸಾಧ್ಯತೆ ಇದೆ.
ರಕ್ಷಾಬಂಧನ, ನವರಾತ್ರಿ, ದಸರಾ ಹಾಗೂ ದೀಪಾವಳಿ ಅವಧಿಯಲ್ಲಿ ಕಂಪನಿಗಳ ವಾರ್ಷಿಕ ಮಾರಾಟದ ದೊಡ್ಡ ಪಾಲು ನಡೆಯುವುದರಿಂದ, ಇದೇ ಸಮಯದಲ್ಲಿ ಬೆಲೆ ಏರಿಕೆಯ ಪರಿಣಾಮ ಗ್ರಾಹಕರ ಮೇಲೆ ಹೆಚ್ಚು ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಸುದ್ದಿ ವಿವರ | ಹೊಸ ‘ಪರೀಕ್ಷೆ ತಿದ್ದುಪಡಿ ಮಸೂದೆ’ಯಲ್ಲಿ ಏನಿದೆ?
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ರಾಹಕರ ಖರೀದಿ ಬೇಡಿಕೆ ಸ್ಥಿರವಾಗಿದೆ. ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘದ ಸಮೀಕ್ಷೆಯ ಪ್ರಕಾರ, ಜೂನ್‌ನಲ್ಲಿ ಚಿಲ್ಲರೆ ಮಾರಾಟ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.6ರಷ್ಟು ಹೆಚ್ಚಾಗಿದೆ. ದಿ ನಾಲೆಡ್ಜ್ ಕಂಪನಿಯ ಅಧ್ಯಕ್ಷ ಅರವಿಂದ್ ಸಿಂಘಾಲ್ ಅವರ ಪ್ರಕಾರ, ಮಾರುಕಟ್ಟೆಯಲ್ಲಿ ಬೇಡಿಕೆ ತೃಪ್ತಿಕರವಾಗಿದ್ದರೂ ಬೆಲೆ ಏರಿಕೆ ಹಾಗೂ ಮಳೆಯ ಪರಿಣಾಮವನ್ನು ಕಂಪನಿಗಳು ನಿಕಟವಾಗಿ ಗಮನಿಸುತ್ತಿವೆ.
ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಒಂದೂವರೆ ವರ್ಷದ ಬಳಿಕ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಶೇ.4ರ ಗುರಿಯನ್ನು ಮೀರಿದೆ. ಹಣಕಾಸು ಸಚಿವಾಲಯದ ಪ್ರಕಾರ, ಹಣದುಬ್ಬರವು ಈಗ ಕೇವಲ ಆಹಾರ ಪದಾರ್ಥಗಳಿಗೆ ಸೀಮಿತವಾಗದೇ, ದಿನನಿತ್ಯದ ಬಳಕೆಯ ಇತರ ವಸ್ತುಗಳ ಮೇಲೂ ಪರಿಣಾಮ ಬೀರುತ್ತಿದೆ.
ಹಬ್ಬಗಳ ಸೀಸನ್‌ನಲ್ಲಿ ಬೆಲೆ ಏರಿಕೆ ಮುಂದುವರಿದರೆ ಸಾಮಾನ್ಯ ಕುಟುಂಬಗಳ ಖರ್ಚಿನ ಹೊರೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸುವುದು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಪ್ರಮುಖ ಸವಾಲಾಗಿ ಪರಿಣಮಿಸಿದೆ.




