ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದು, ರೈತರು ಹಾಗೂ ಜನಸಾಮಾನ್ಯರು ಕುಡಿಯುವ ನೀರು ಮತ್ತು ಮೇವಿನ ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಮೈಸೂರಿನಲ್ಲಿ ಕಂಬಳ ಆಯೋಜಿಸುವುದು ಸೂಕ್ತವಲ್ಲ. ಕರಾವಳಿಯ ಜನರು ಹಾಗೂ ಕೋಣಗಳ ಮಾಲೀಕರು ಕಂಬಳದಿಂದ ಹಿಂದೆ ಸರಿಯಬೇಕು ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮನವಿ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳ ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಹಾಗೂ ಗ್ರಾಮೀಣ ಕ್ರೀಡೆಯಾಗಿದ್ದು, ಅದರ ಬಗ್ಗೆ ಅಪಾರ ಗೌರವವಿದೆ. ಆದರೆ, ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಮತ್ತು ಮೈಸೂರಿನ ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಕಂಬಳ ಆಯೋಜನೆಯ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಹಲವು ಭಾಗಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ದನಕರುಗಳಿಗೆ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ. ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಘೋಷಿಸಿರುವ 2,500 ರೂ. ಬರ ಪರಿಹಾರ ಅವಮಾನಕರವಾಗಿದೆ. ಪರಿಹಾರದ ಮೊತ್ತಕ್ಕೆ ಒಂದು ರೂಪಾಯಿ ಸೇರಿಸಿ 2,501 ರೂ.ಗಳನ್ನು ಮುಖ್ಯಮಂತ್ರಿಗಳ ನಿಧಿಗೆ ನೀಡಲು ರೈತರು ನಿರ್ಧರಿಸಿರುವುದು ಸರ್ಕಾರದ ಪರಿಹಾರದ ಬಗ್ಗೆ ಅವರಿಗಿರುವ ಅಸಮಾಧಾನವನ್ನು ತೋರಿಸುತ್ತದೆ ಎಂದು ಹೇಳಿದರು.
ಮೈಸೂರು ಜಿಲ್ಲೆಯ 2,991 ಕೆರೆಗಳ ಪೈಕಿ 2,928 ಕೆರೆಗಳಲ್ಲಿ ನೀರಿಲ್ಲ. ಕೇವಲ 63 ಕೆರೆಗಳು ಮಾತ್ರ ತುಂಬಿವೆ. ಮೈಸೂರು ನಗರದ ಸುತ್ತಮುತ್ತಲಿನ ಕೊಳವೆಬಾವಿಗಳು ಬತ್ತಿಹೋಗಿದ್ದು, ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಾವೇರಿ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಕಂಬಳ ಆಯೋಜಿಸಲು ಆಯ್ಕೆ ಮಾಡಿರುವ ಪ್ರದೇಶವನ್ನು ಉದ್ಯಾನವನಕ್ಕಾಗಿ ಮೀಸಲಿಡಲಾಗಿತ್ತು. ಇಲ್ಲಿ ಮರಗಳು, ಗಿಡಗಂಟಿಗಳು, ಕೆರೆ ಹಾಗೂ ಮೊಲ, ಅಳಿಲು ಸೇರಿದಂತೆ ವಿವಿಧ ಸಣ್ಣ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಶ್ರಯವಾಗಿದ್ದ ಜೀವವೈವಿಧ್ಯವಿತ್ತು. ಆದರೆ, 50ಕ್ಕೂ ಹೆಚ್ಚು ಮರಗಳು ಹಾಗೂ ನೂರಾರು ಗಿಡಗಂಟಿಗಳನ್ನು ತೆರವುಗೊಳಿಸಿ ಪರಿಸರ ವ್ಯವಸ್ಥೆಗೆ ಹಾನಿ ಮಾಡಲಾಗಿದೆ. ಕೆರೆಯ ಅಂಗಳವನ್ನು ಮುಚ್ಚಿ ಕಂಬಳದ ಕಣ ಸಿದ್ಧಪಡಿಸಲಾಗಿದೆ. ಮರಗಳ ತೆರವಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯೂ ಎಫ್‌ಐಆರ್ ದಾಖಲಿಸಿದೆ ಎಂದು ಆರೋಪಿಸಿದರು.
ಮೈಸೂರು ದಸರಾ ಸಂದರ್ಭದಲ್ಲಿ ಈಗಾಗಲೇ ಹಲವು ಸಾಂಸ್ಕೃತಿಕ, ಮನರಂಜನಾ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇವುಗಳನ್ನು ವ್ಯವಸ್ಥಿತವಾಗಿ ನಡೆಸುವತ್ತ ಗಮನಹರಿಸಬೇಕಿದೆ. ಮೈಸೂರಿನಲ್ಲಿ ಕಂಬಳ ಆಯೋಜನೆ ವಿರೋಧಿಸಿ ಕಳೆದ ಮೂರು ತಿಂಗಳಿಂದ ಹೋರಾಟ ನಡೆಯುತ್ತಿದ್ದು, ಸಾಹಿತಿಗಳು ಮತ್ತು ಕಲಾವಿದರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಂಬಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿರುವ ಕೋಣಗಳ ಮಾಲೀಕರು ನೋಂದಣಿ ರದ್ದುಗೊಳಿಸಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕು. ಕರಾವಳಿಯ ಪ್ರಜ್ಞಾವಂತ ಜನರು ಕೋಣಗಳ ಮಾಲೀಕರ ಮನವೊಲಿಸಿ, ಪರಿಸರ ಮತ್ತು ರಾಜ್ಯದ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಂಬಳ ಆಯೋಜನೆಯಿಂದ ಹಿಂದೆ ಸರಿಯುವಂತೆ ಸಹಕರಿಸಬೇಕು ಎಂದು ರಾಮಸ್ವಾಮಿ ಕಳಕಳಿಯಿಂದ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪರಿಸರ ಹೋರಾಟಗಾರ್ತಿ ಲೀಲಾ ಶಿವಕುಮಾರ್, ಲೇಖಕಿ ಹಾಗೂ ಅಂಕಣಗಾರ್ತಿ ಕುಸುಮ ಆಯರಹಳ್ಳಿ, ರವಿಕಿರಣ ಪುಣಚ ಸೇರಿದಂತೆ ಇತರರು ಉಪಸ್ಥಿತರಿದ್ದರು.





