ಕ್ರೀಡಾಂಗಣದಲ್ಲಿ ವಾಲಿಬಾಲ್ ಆಡುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಮೃತಪಟ್ಟ ದುರ್ಘಟನೆ ಬುಧವಾರ ಸಂಜೆ ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಸೂರಿಂಜೆ ನಿವಾಸಿ ಮಾಧವ ಅಮೀನ್ ಅವರ ಪುತ್ರ ಲಿಖಿತ್ ಅಮೀನ್ (15) ಎಂದು ಗುರುತಿಸಲಾಗಿದೆ. ಈತ ಸೂರಿಂಜೆ ಕೋಟೆ ಬೊಳ್ಳಾರು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದ.
ಬುಧವಾರ ಸಂಜೆ ಸೂರಿಂಜೆ ಮೈದಾನದಲ್ಲಿ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ ವೇಳೆ ಲಿಖಿತ್ ಏಕಾಏಕಿ ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ತಕ್ಷಣ ಶಾಲೆಯ ಅಧ್ಯಾಪಕರು ಹಾಗೂ ಸ್ಥಳೀಯರು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಯ ಹಠಾತ್ ನಿಧನದಿಂದ ಕುಟುಂಬಸ್ಥರು, ಶಾಲಾ ಶಿಕ್ಷಕರು, ಸಹಪಾಠಿಗಳು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕ ಆವರಿಸಿದೆ. ಸಾವಿನ ನಿಖರ ಕಾರಣ ವೈದ್ಯಕೀಯ ಪರೀಕ್ಷೆಯ ಬಳಿಕವೇ ತಿಳಿಯಬೇಕಿದೆ.





