ಅಮೆರಿಕದ ಜಾರ್ಜಿಯಾ ರಾಜ್ಯದ ಪ್ರತಿನಿಧಿ ಸಭೆಗೆ ಭಾರತೀಯ ಮೂಲದ ಜ್ಯೋತ್ ಸಿಂಗ್ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯದ ಶಾಸಕಾಂಗಕ್ಕೆ ಆಯ್ಕೆಯಾದ ಮೊದಲ ಸಿಖ್ ಹಾಗೂ ಮೊದಲ ಭಾರತೀಯ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ 97ನೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಲಭ್ಯ ಮತಎಣಿಕೆ ಅಂಕಿಅಂಶಗಳ ಪ್ರಕಾರ, ಸಿಂಗ್ 13,820 ಮತಗಳನ್ನು ಪಡೆದು, ಶೇ 68ರಷ್ಟು ಮತಗಳನ್ನು ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಯಾಸಿನ್ ಮೊಘಾಜಿ 6,509 ಮತಗಳನ್ನು ಪಡೆದಿದ್ದು, ಶೇ 32ರಷ್ಟು ಮತಗಳಿಗೆ ತೃಪ್ತಿಪಟ್ಟಿದ್ದಾರೆ. ಸಿಂಗ್ ಅವರ ಗೆಲುವಿನ ಅಂತರ 7,311 ಮತಗಳಾಗಿದೆ.
ಗೆಲುವಿನ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೊ ಹಂಚಿಕೊಂಡ ಸಿಂಗ್, ‘97ನೇ ಕ್ಷೇತ್ರದಲ್ಲಿ ನಮ್ಮ ಸಮುದಾಯಕ್ಕಾಗಿ ನಾವು ಇತಿಹಾಸ ನಿರ್ಮಿಸಿದ್ದೇವೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಜಾರ್ಜಿಯಾದ ಗ್ವಿನೆಟ್ ಕೌಂಟಿಯಲ್ಲಿ ಬೆಳೆದ ಅವರು, ಅಲ್ಲಿನ ಸಾಂಸ್ಕೃತಿಕ ವೈವಿಧ್ಯ ಮತ್ತು ಜನರ ಬದುಕಿನ ಸವಾಲುಗಳನ್ನು ತಮ್ಮ ಚುನಾವಣಾ ಪ್ರಚಾರದ ಪ್ರಮುಖ ವಿಷಯಗಳನ್ನಾಗಿಸಿಕೊಂಡಿದ್ದರು.
‘ನಾರ್ಕ್ರಾಸ್‌ನಲ್ಲಿ ಬೆಳೆದಾಗ, ವೈವಿಧ್ಯವೆಂಬುದು ಕೇವಲ ಸಂಖ್ಯೆಯಲ್ಲ; ಅದೇ ನಮ್ಮ ಶಕ್ತಿ ಎಂಬುದನ್ನು ಕಲಿತೆ. ಗ್ವಿನೆಟ್‌ನ ಸಾಮಾಜಿಕ ಬಟ್ಟೆಯಲ್ಲಿ ಪ್ರತಿಯೊಂದು ಎಳೆಯೂ ಮುಖ್ಯ’ ಎಂದು ಚುನಾವಣೆಗೆ ಮುನ್ನ ತಮ್ಮ ದೃಷ್ಟಿಕೋನವನ್ನು ವಿವರಿಸಿದ್ದರು. ಆರೋಗ್ಯ ಸೇವೆ ಪಡೆಯಲು ಕುಟುಂಬಗಳು ಎದುರಿಸುತ್ತಿರುವ ತೊಂದರೆಗಳು ಮತ್ತು ಹೆಚ್ಚುತ್ತಿರುವ ವಸತಿ ವೆಚ್ಚದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು.
ಸಮುದಾಯವು ಸಾಧಿಸಿರುವ ಪ್ರಗತಿಯನ್ನು ಕಾಪಾಡುವುದರ ಜತೆಗೆ, ಪ್ರತಿಯೊಬ್ಬರಿಗೂ ಬೆಳೆಯುವ ಅವಕಾಶ ಕಲ್ಪಿಸುವುದು ತಮ್ಮ ಗುರಿ ಎಂದು ಸಿಂಗ್ ಹೇಳಿದ್ದರು. ಆರೋಗ್ಯ ಸೇವೆಯ ಲಭ್ಯತೆ ಹಾಗೂ ಜನಸಾಮಾನ್ಯರಿಗೆ ಕೈಗೆಟಕುವ ವಸತಿ ಸೌಲಭ್ಯಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದ್ದರು.
ಮೇ ತಿಂಗಳಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಝಾಕ್ ಲಾರೆಂಟ್ ಅವರನ್ನು ಸೋಲಿಸಿ ಸಿಂಗ್ ಪಕ್ಷದ ಉಮೇದುವಾರಿಕೆ ಪಡೆದಿದ್ದರು. ಗ್ವಿನೆಟ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್, ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿರುವ ಅವರು, ಯೇಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಸಲಹೆಗಾರ ಹಾಗೂ ಸಣ್ಣ ಉದ್ಯಮಿಯಾಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ.




