ಫಿಲಿಪ್ಪೀನ್ಸ್‌ನ ಮನಿಲಾ ಕೊಲ್ಲಿಯ ಅಂಚಿನಲ್ಲಿರುವ ‘ಪಮರವಾನ್’ ಎಂಬ ಸಣ್ಣ ಮೀನುಗಾರಿಕಾ ಗ್ರಾಮವು ವರ್ಷಗಳ ಕಾಲ ಮುಂಗಾರು ಮತ್ತು ಚಂಡಮಾರುತಗಳ ಅಬ್ಬರಕ್ಕೆ ನಲುಗಿತ್ತು. ಪ್ರವಾಹ ತಡೆಯಲು ನಿರ್ಮಿಸಲಾಗಿದ್ದ 4 ಮೀಟರ್ ಎತ್ತರದ ಕಾಂಕ್ರೀಟ್ ತಡೆಗೋಡೆಯನ್ನು ಮೀರಿ, ಸುಮಾರು ಒಂದು ಮೀಟರ್‌ನಷ್ಟು ಎತ್ತರಕ್ಕೆ ಜಿಗಿಯುತ್ತಿದ್ದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದವು. ಆದರೆ, ಕೇವಲ ಕಾಂಕ್ರೀಟ್ ಗೋಡೆಗಳನ್ನು ನೆಚ್ಚಿಕೊಳ್ಳುವ ಬದಲು, ಪಮರವಾನ್ ಗ್ರಾಮವು ಈಗ ನಿಸರ್ಗ ಆಧಾರಿತ ಕರಾವಳಿ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಭರವಸೆ ಮೂಡಿಸಿದೆ. ಕೇವಲ ಬಿದಿರು, ಬಿಸಾಡಿದ ಆಯ್ಸ್ಟರ್ ಕಪ್ಪೆಚಿಪ್ಪುಗಳು ಮತ್ತು ತೆಂಗಿನ ನಾರನ್ನು (ಸಿಪ್ಪೆ) ಬಳಸಿ ಗ್ರಾಮವು ವಿಶಿಷ್ಟವಾದ ತಡೆಗೋಡೆಯನ್ನು ನಿರ್ಮಿಸಿಕೊಂಡಿದೆ.
ಬುಲಕಾನ್ ಪ್ರಾಂತ್ಯದ ಮಾಲೋಲೋಸ್ ನಗರದ ವ್ಯಾಪ್ತಿಗೆ ಬರುವ 14 ಹೆಕ್ಟೇರ್ (35 ಎಕರೆ) ಕರಾವಳಿ ಪ್ರದೇಶದಲ್ಲಿ ಈ ನೈಸರ್ಗಿಕ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬಿದಿರಿನ ಕಂಬಗಳನ್ನು ಬಳಸಿ ನಿರ್ಮಿಸಲಾದ ಅಲೆ-ತಡೆಗೋಡೆಗಳು (ಬಿದಿರಿನ ತೊಟ್ಟಿಲುಗಳು) ಈ ಯೋಜನೆಯ ಪ್ರಮುಖ ಭಾಗ. ಇವು ದಡಕ್ಕೆ ಅಪ್ಪಳಿಸುವ ಅಲೆಗಳ ಶಕ್ತಿಯನ್ನು ಕುಗ್ಗಿಸುವುದರ ಜೊತೆಗೆ, ನೀರಿನೊಂದಿಗೆ ಹರಿದು ಬರುವ ಮರಳು ಮತ್ತು ಕೆಸರನ್ನು ತಡೆದು ನಿಲ್ಲಿಸುತ್ತವೆ. ಇದರೊಂದಿಗೆ, ಬಿಸಾಡಿದ ಆಯ್ಸ್ಟರ್ ಕಪ್ಪೆಚಿಪ್ಪುಗಳನ್ನು ತೆಂಗಿನ ನಾರಿನ ಚೀಲಗಳಲ್ಲಿ (ಕೋಕೋಮೆಶ್) ತುಂಬಿ ಇಡಲಾಗಿದ್ದು, ಇದು ಅಲೆಗಳ ತೀವ್ರತೆಯನ್ನು ಮತ್ತಷ್ಟು ತಗ್ಗಿಸುತ್ತದೆ ಮತ್ತು ಆಯ್ಸ್ಟರ್ ಕಪ್ಪೆಚಿಪ್ಪುಗಳ ನೈಸರ್ಗಿಕ ಬಂಡೆಗಳ ಮರುಸೃಷ್ಟಿಗೆ ನೆರವಾಗುತ್ತದೆ.
ಒಂದು ಕಾಲದಲ್ಲಿ ಈ ಗ್ರಾಮವು ದಟ್ಟವಾದ ಕಾಂಡ್ಲಾ (ಮ್ಯಾಂಗ್ರೋವ್) ಅರಣ್ಯಗಳಿಂದ ಆವೃತವಾಗಿತ್ತು. ಇದು ಅಲೆಗಳ ಅಬ್ಬರವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಮೀನುಗಾರಿಕಾ ಹೊಂಡಗಳ ನಿರ್ಮಾಣ ಹಾಗೂ ಭೂ-ಸ್ವಾಧೀನ ಪ್ರಕ್ರಿಯೆಗಳಿಂದಾಗಿ 1990 ಮತ್ತು 2002ರ ನಡುವೆ ಬುಲಕಾನ್ ಪ್ರಾಂತ್ಯವು ಶೇ 52.9 ರಷ್ಟು ಕಾಂಡ್ಲಾ ಅರಣ್ಯವನ್ನು ಕಳೆದುಕೊಂಡಿತು. “ಮ್ಯಾಂಗ್ರೋವ್ ನಾಶವಾದ ಬಳಿಕ ಸಮುದ್ರದ ನೀರು ನೇರವಾಗಿ ಗ್ರಾಮಕ್ಕೆ ನುಗ್ಗಲು ಶುರುವಾಯಿತು” ಎಂದು ಪಮರವಾನ್ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರೊಲ್ಡಾನ್ ದಯಾವೊ ಸ್ಮರಿಸುತ್ತಾರೆ. ಅಂತರ್ಜಲದ ವಿಪರೀತ ಬಳಕೆಯಿಂದ ಭೂಮಿ ಕುಸಿಯುತ್ತಿರುವುದು ಹಾಗೂ ಸಮುದ್ರದ ಮಟ್ಟ ಏರಿಕೆಯಾಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿತ್ತು.
ಈ ನೈಸರ್ಗಿಕ ಯೋಜನೆಯಿಂದಾಗಿ, ಪ್ರಸ್ತುತ ಬಿದಿರಿನ ರಚನೆಗಳ ಬಳಿ ಸುಮಾರು 0.3 ಮೀಟರ್ (1 ಅಡಿ) ಕೆಸರು ಶೇಖರಣೆಯಾಗಿದೆ ಎಂದು ಅಧಿಕಾರಿ ಫರ್ಡಿನಾಂಡ್ ಕ್ರೂಜ್ ತಿಳಿಸಿದ್ದಾರೆ. ಹೀಗೆ ಕೆಸರು ಶೇಖರಣೆಗೊಂಡು ಸಮುದ್ರದ ತಳಭಾಗವು ನಿಧಾನವಾಗಿ ಮೇಲಕ್ಕೆರುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಕಾಂಡ್ಲಾ (ಮ್ಯಾಂಗ್ರೋವ್) ಸಸಿಗಳನ್ನು ನೆಡಲು ಇದು ಸೂಕ್ತವಾಗಲಿದೆ. ಇದರಿಂದ ಅಲೆಗಳ ವಿರುದ್ಧ ನೈಸರ್ಗಿಕ ರಕ್ಷಣೆಯ ಮತ್ತೊಂದು ಪದರ ಸೃಷ್ಟಿಯಾದಂತಾಗುತ್ತದೆ.
ಪರಿಸರ ಸುದ್ದಿಗಳ ತಾಣ ‘ಮೊಂಗಾಬೆ’ ವರದಿಯ ಪ್ರಕಾರ, ಈ ಯೋಜನೆ ಆರಂಭವಾದಾಗಿನಿಂದ ಕಳೆದ ಸುಮಾರು ಎರಡು ವರ್ಷಗಳಲ್ಲಿ ಪಮರವಾನ್ ಗ್ರಾಮಕ್ಕೆ ಪ್ರವಾಹದ ನೀರು ನುಗ್ಗಿಲ್ಲ. 2026ರ ಆಗಸ್ಟ್ ತಿಂಗಳಲ್ಲಿ ಬುಲಕಾನ್ ಪ್ರಾಂತ್ಯದಲ್ಲಿ ಭಾರಿ ಪ್ರವಾಹ ಉಂಟಾಗಿ 15 ಮಂದಿ ಸಾವನ್ನಪ್ಪಿದ್ದರು. ಆ ಪರಿಸ್ಥಿತಿಯನ್ನು ಸರ್ಕಾರ ‘ವಿಪತ್ತು’ ಎಂದು ಘೋಷಿಸಿತ್ತು. ಪಕ್ಕದ ಊರುಗಳ ಮನೆಗಳ ಮೇಲ್ಛಾವಣಿಯವರೆಗೆ ನೀರು ಆವರಿಸಿದ್ದರೂ, ಪಮರವಾನ್ ಗ್ರಾಮ ಮಾತ್ರ ಈ ಭೀಕರ ಪ್ರವಾಹದಿಂದ ಸಂಪೂರ್ಣವಾಗಿ ಪಾರಾಗಿತ್ತು!
ಜೊತೆಗೆ, ಈ ಬಿದಿರಿನ ರಚನೆಗಳಿಂದಾಗಿ ಏಡಿ, ಸೀಗಡಿ ಮತ್ತು ಕಪ್ಪೆಚಿಪ್ಪುಗಳಂತಹ ಜಲಚರಗಳ ಸಂಖ್ಯೆ ಹೆಚ್ಚಿದ್ದು, ಸ್ಥಳೀಯ ಮೀನುಗಾರರಿಗೆ ಅನುಕೂಲವಾಗಿದೆ. ಮನಿಲಾ ಕೊಲ್ಲಿಯಿಂದ ಕೊಚ್ಚಿಕೊಂಡು ಬರುತ್ತಿದ್ದ ತ್ಯಾಜ್ಯವೂ ದಡ ಸೇರುವುದು ಗಣನೀಯವಾಗಿ ಕಡಿಮೆಯಾಗಿದೆ.
ಈ ವಿಶಿಷ್ಟ ಪ್ರಾಯೋಗಿಕ ಯೋಜನೆಯನ್ನು ಡಚ್ ಎಂಜಿನಿಯರಿಂಗ್ ಸಂಸ್ಥೆಯಾದ ‘ಹ್ಯಾಸ್ಕೋನಿಂಗ್’ ರೂಪಿಸಿದ್ದು, 2023ರಲ್ಲಿ ಮಾಲೋಲೋಸ್ ಮೇಯರ್ ಕ್ರಿಶ್ಚಿಯನ್ ನಟಿವಿಡಾಡ್ ಅವರು ಇದಕ್ಕೆ ಒಪ್ಪಿಗೆ ನೀಡಿದ್ದರು. ನೆದರ್ಲ್ಯಾಂಡ್ಸ್ ಎಂಟರ್‌ಪ್ರೈಸ್ ಏಜೆನ್ಸಿಯ ಬೆಂಬಲದೊಂದಿಗೆ ೨೦೨೪ರಲ್ಲಿ ಇದರ ಕಾಮಗಾರಿ ಆರಂಭವಾಯಿತು. ಇದಕ್ಕಾಗಿ ನಗರ ಆಡಳಿತ ಸುಮಾರು 130 ದಶಲಕ್ಷ ಫಿಲಿಪೈನ್ ಪೆಸೊ (ಸುಮಾರು 18 ಕೋಟಿ ರೂ.) ಅನುದಾನ ಮೀಸಲಿಟ್ಟಿದೆ.
2026ರ ಸೆಪ್ಟೆಂಬರ್‌ನಲ್ಲಿ ಫಿಲಿಪ್ಪೀನ್ಸ್‌ನ ಸಾರ್ವಜನಿಕ ಕಾಮಗಾರಿ ವಿಭಾಗದ ಕಾರ್ಯದರ್ಶಿ ವಿನ್ಸ್ ಡಿಜೋನ್ ಅವರು ಈ ಯೋಜನೆಯನ್ನು ಶ್ಲಾಘಿಸಿದ್ದು, ಪ್ರವಾಹ ಪೀಡಿತ ಇತರ ಕರಾವಳಿ ಪ್ರದೇಶಗಳಿಗೂ ಇದನ್ನು ವಿಸ್ತರಿಸುವ ಒಲವು ತೋರಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದ ಆಸಿಯಾನ್-ನೆದರ್ಲ್ಯಾಂಡ್ಸ್ ಕಾರ್ಯಾಗಾರದಲ್ಲೂ ಈ ನಿಸರ್ಗ ಆಧಾರಿತ ಪ್ರವಾಹ ತಡೆ ವ್ಯವಸ್ಥೆ ಪ್ರಮುಖ ಚರ್ಚಾ ವಿಷಯವಾಗಿತ್ತು.
ಆದರೆ, ಕರಾವಳಿಯ ಭೌಗೋಳಿಕ, ಪರಿಸರ ಮತ್ತು ಸಾಮಾಜಿಕ ವ್ಯವಸ್ಥೆಯು ಒಂದೊಂದು ಕಡೆ ಒಂದೊಂದು ರೀತಿಯಿರುತ್ತದೆ. ಹೀಗಾಗಿ, ಪ್ರತಿಯೊಂದು ಪ್ರದೇಶದ ಸ್ಥಳೀಯ ಪರಿಸ್ಥಿತಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡದೆಯೇ, ಕೇವಲ ಈ ವಿನ್ಯಾಸವನ್ನು ಮಾತ್ರ ಯಥಾವತ್ತಾಗಿ ನಕಲು ಮಾಡಬಾರದು ಎಂದು ಹ್ಯಾಸ್ಕೋನಿಂಗ್ ಸಂಸ್ಥೆ ಎಚ್ಚರಿಕೆ ನೀಡಿದೆ. ಒಟ್ಟಿನಲ್ಲಿ ಕಾಂಕ್ರೀಟ್ ಬಲಕ್ಕಿಂತ, ನಿಸರ್ಗದ ನಿಯಮದೊಂದಿಗೆ ಕೆಲಸ ಮಾಡುವ ಪಮರವಾನ್ ಗ್ರಾಮದ ಈ ಹೆಜ್ಜೆ ಇಡೀ ಜಗತ್ತಿಗೆ ಒಂದು ಅತ್ಯುತ್ತಮ ಮಾದರಿಯಾಗಿದೆ.




